ವಿಂಡೀಸ್ ಗೆ T20 ಸರಣಿ ಸಮಬಲದ ‘ಹೋಪ್’; ಭಾರತಕ್ಕೆ 248 ರನ್ ಗಳ ಕಠಿಣ ಗುರಿ!
Photo Credit ; X
ಹೈದರಾಬಾದ್: ನಾಯಕ ಶಾಯ್ ಹೋಪ್ ಅವರ ಸ್ಫೋಟಕ ಶತಕ ಹಾಗೂ ಶೆರ್ಫೇನ್ ರುದರ್ ಫೋರ್ಡ್ ಅವರ ಆಕ್ರಮಣಕಾರಿ ಬ್ಯಾಟಿಂಗ್ ನೆರವಿನಿಂದ ವೆಸ್ಟ್ ಇಂಡೀಸ್ ತಂಡವು ಭಾರತದ ವಿರುದ್ಧದ ನಾಲ್ಕನೇ T20 ಪಂದ್ಯದಲ್ಲಿ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 247 ರನ್ ಗಳಿಸಿದೆ. ಈ ಮೂಲಕ ಭಾರತಕ್ಕೆ ಗೆಲುವಿಗೆ 248 ರನ್ ಗಳ ಗುರಿ ನೀಡಿದೆ.
ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಐದು ಪಂದ್ಯಗಳ ಸರಣಿಯಲ್ಲಿ ಭಾರತ 2–1ರಿಂದ ಮುನ್ನಡೆಯಲ್ಲಿದ್ದು, ನಾಲ್ಕನೇ ಪಂದ್ಯ ಗೆದ್ದರೆ ಸರಣಿ ಕೈವಶ ಮಾಡಿಕೊಳ್ಳಲಿದೆ. ಸರಣಿಯನ್ನು ಸಮಬಲಗೊಳಿಸುವ ಗುರಿಯೊಂದಿಗೆ ಕಣಕ್ಕಿಳಿದ ವೆಸ್ಟ್ ಇಂಡೀಸ್ ಗೆ ಹೋಪ್ ಮತ್ತು ರುದರ್ ಫೋರ್ಡ್ ಅವರ ಬ್ಯಾಟಿಂಗ್ ಬಲ ತುಂಬಿತು.
50 ಎಸೆತಗಳನ್ನು ಎದುರಿಸಿದ ಹೋಪ್ 4 ಬೌಂಡರಿ ಹಾಗೂ 9 ಸಿಕ್ಸರ್ ಗಳ ಸಹಿತ ಅಜೇಯ 102 ರನ್ ಗಳಿಸಿದರು. ರುದರ್ ಫೋರ್ಡ್ 26 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಗಳೊಂದಿಗೆ ಅಜೇಯ 49 ರನ್ ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.
ಆರಂಭಿಕ ಆಟಗಾರ ಜ್ಯುವೆಲ್ ಆಂಡ್ರ್ಯೂ 16 ಎಸೆತಗಳಲ್ಲಿ 21 ರನ್ ಗಳಿಸಿ ಅಕ್ಷರ್ ಪಟೇಲ್ ಬೌಲಿಂಗ್ ನಲ್ಲಿ ಎಲ್ಬಿಡಬ್ಲ್ಯು ಆದರು. ಬಳಿಕ ಶಿಮ್ರಾನ್ ಹೆಟ್ಮೆಯರ್ ಕೇವಲ 12 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಗಳ ಸಹಿತ 33 ರನ್ ಸಿಡಿಸಿದರು. ಅವರನ್ನು ಪ್ರಿನ್ಸ್ ಯಾದವ್ ಔಟ್ ಮಾಡಿದರು. ರೋವ್ಮನ್ ಪೊವೆಲ್ 17 ಎಸೆತಗಳಲ್ಲಿ 24 ರನ್ ಗಳಿಸಿ ಅರ್ಷದೀಪ್ ಸಿಂಗ್ ಬೌಲಿಂಗ್ನಲ್ಲಿ ಸಂಜು ಸ್ಯಾಮ್ಸನ್ ಗೆ ಕ್ಯಾಚ್ ನೀಡಿದರು.
ಭಾರತದ ಪರ ಪ್ರಿನ್ಸ್ ಯಾದವ್ 36 ರನ್ ನೀಡಿ ಒಂದು ವಿಕೆಟ್ ಪಡೆದರು. ಅಕ್ಷರ್ ಪಟೇಲ್ 45 ರನ್ ನೀಡಿ ಒಂದು ವಿಕೆಟ್ ಕಬಳಿಸಿದರು. ಅರ್ಷದೀಪ್ ಸಿಂಗ್ 52 ರನ್ ನೀಡಿ ಒಂದು ವಿಕೆಟ್ ಪಡೆದರು. ಮಯಾಂಕ್ ಯಾದವ್ 52 ರನ್ ಹಾಗೂ ನಿತೀಶ್ ಕುಮಾರ್ ರೆಡ್ಡಿ 39 ರನ್ ಬಿಟ್ಟುಕೊಟ್ಟರು.
ಐದು ಪಂದ್ಯಗಳ ಸರಣಿಯಲ್ಲಿ ಭಾರತ 2–1ರಿಂದ ಮುನ್ನಡೆಯಲ್ಲಿದೆ. ನಾಲ್ಕನೇ ಪಂದ್ಯದಲ್ಲಿ ಗೆದ್ದರೆ ವೆಸ್ಟ್ ಇಂಡೀಸ್ ಸರಣಿಯನ್ನು 2–2ರಿಂದ ಸಮಬಲಗೊಳಿಸಲಿದೆ. ಭಾರತಕ್ಕೆ ಸರಣಿಯಲ್ಲಿ ಮುನ್ನಡೆ ಕಾಯ್ದುಕೊಳ್ಳಲು 248 ರನ್ ಗಳ ಗುರಿಯನ್ನು ಬೆನ್ನಟ್ಟಬೇಕಿದೆ.