ಡರ್ಬನ್, ಅ. 11: ಟೆಸ್ಟ್ ಇನಿಂಗ್ಸ್‌ ವೊಂದರಲ್ಲಿ ಬಾಲಂಗೋಚಿಗಳ ಜೊತೆ ಬ್ಯಾಟಿಂಗ್ ಮಾಡಿ ಗರಿಷ್ಠ ಸ್ಕೋರ್ ಗಳಿಸಿದ ಆಸ್ಟ್ರೇಲಿಯಾದ ಬ್ಯಾಟರ್ ಮ್ಯಾಟ್ ರೆನ್ಶಾ, ಒಂದು ದಶಕದ ಹಿಂದೆ ವಿರಾಟ್ ಕೊಹ್ಲಿ ನಿರ್ಮಿಸಿದ್ದ ದಾಖಲೆಯನ್ನು ಮುರಿದರು.

ದಕ್ಷಿಣ ಆಫ್ರಿಕಾ ವಿರುದ್ಧ ಈಗ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಜೀವನಶ್ರೇಷ್ಠ 190 ರನ್ ಗಳಿಸಿದ ರೆನ್ಶಾ, ಕೆಳಕ್ರಮಾಂಕದ ಆಟಗಾರರೊಂದಿಗೆ 174 ರನ್‌ಗಳ ಜೊತೆಯಾಟ ನಡೆಸಿ ಕೊಹ್ಲಿ ಅವರ 171 ರನ್‌ಗಳ ದಾಖಲೆಯನ್ನು ಮುರಿದರು. ಕೊಹ್ಲಿ 2016ರಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ 235 ರನ್ ಗಳಿಸಿದ್ದಾಗ ಈ ಸಾಧನೆ ಮಾಡಿದ್ದರು.

ರೆನ್ಶಾ ಬಾಲಂಗೋಚಿಗಳೊಂದಿಗೆ ನೀಡಿದ ಕೊಡುಗೆಯಿಂದಾಗಿ ಆಸ್ಟ್ರೇಲಿಯಾ ತಂಡವು 6 ವಿಕೆಟ್‌ಗಳ ನಷ್ಟಕ್ಕೆ 124 ರನ್ ಗಳಿಸಿದ್ದ ಸ್ಥಿತಿಯಿಂದ ಚೇತರಿಸಿಕೊಂಡಿತು. ನಾಯಕ ಪ್ಯಾಟ್ ಕಮಿನ್ಸ್ ಅವರೊಂದಿಗೆ 86 ರನ್‌ಗಳ ಜೊತೆಯಾಟ ನಡೆಸಿದಾಗ ರೆನ್ಶಾ 41 ರನ್ ಸೇರಿಸಿದರು. ನಾಥನ್ ಲಿಯೊನ್ ಜೊತೆ ಒಂಬತ್ತನೇ ವಿಕೆಟ್‌ಗೆ 134 ರನ್‌ಗಳ ಜೊತೆಯಾಟ ನಡೆಸಿದಾಗ ರೆನ್ಶಾ ಬರೋಬ್ಬರಿ 100 ರನ್ ಸೇರಿಸಿದರು. ಮಿಚೆಲ್ ಸ್ಟಾರ್ಕ್ ಅವರೊಂದಿಗೆ ನಡೆಸಿದ 20 ರನ್‌ಗಳ ಜೊತೆಯಾಟದಲ್ಲಿ 12 ರನ್ ಸೇರಿಸಿದರು. ರೆನ್ಶಾ ಅವರು ಜೋಶ್ ಹೇಝಲ್ವುಡ್ ಅವರೊಂದಿಗೆ ನಡೆಸಿದ 26 ರನ್‌ಗಳ ಜೊತೆಯಾಟದಲ್ಲಿ 21 ರನ್ ಗಳಿಸಿದ್ದರು.

ಈ ಜೊತೆಯಾಟಗಳ ನೆರವಿನಿಂದ ಮೊದಲ ಇನಿಂಗ್ಸ್‌ನಲ್ಲಿ ಕಳಪೆ ಆರಂಭದಿಂದ ಚೇತರಿಸಿಕೊಂಡ ಆಸ್ಟ್ರೇಲಿಯಾ ತಂಡವು ಶನಿವಾರ ಎರಡನೇ ದಿನದಾಟದ ಅಂತ್ಯಕ್ಕೆ 390 ರನ್‌ಗಳಿಗೆ ಆಲೌಟ್ ಆಯಿತು.

ರೆನ್ಶಾ ತಮ್ಮ ಮ್ಯಾರಥಾನ್ ಇನಿಂಗ್ಸ್‌ ನಲ್ಲಿ 397 ಎಸೆತಗಳನ್ನು ಎದುರಿಸಿದ್ದು, 21 ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದ್ದಾರೆ. ಸಿಮೊನ್ ಹಾರ್ಮರ್‌ ಗೆ ವಿಕೆಟ್ ಒಪ್ಪಿಸಿದ ರೆನ್ಶಾ ಕೇವಲ 10 ರನ್‌ಗಳಿಂದ ತಮ್ಮ ಚೊಚ್ಚಲ ದ್ವಿಶತಕದಿಂದ ವಂಚಿತರಾದರು.

ರೆನ್ಶಾ ಅವರ ಇನಿಂಗ್ಸ್ ಡರ್ಬನ್‌ನಲ್ಲಿ ಎರಡು ಮಹತ್ವದ ಮೈಲಿಗಲ್ಲುಗಳನ್ನು ನಿರ್ಮಿಸಿತು. ಅವರು ಗಳಿಸಿದ 190 ರನ್ ಆಸ್ಟ್ರೇಲಿಯಾ ಆಟಗಾರನ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. 2009ರಲ್ಲಿ ಫಿಲಿಪ್ ಹ್ಯೂಸ್ 160 ರನ್ ಗಳಿಸಿದ್ದರು. ಐದನೇ ಹಾಗೂ ಅದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ಡರ್ಬನ್ ಮೈದಾನದಲ್ಲಿ ಗಳಿಸಿದ ಗರಿಷ್ಠ ಟೆಸ್ಟ್ ಸ್ಕೋರ್ ಇದಾಗಿದೆ. ಈ ಮೂಲಕ 2019ರಲ್ಲಿ ಕುಶಾಲ್ ಪೆರೇರ (ಔಟಾಗದೆ 153 ರನ್) ನಿರ್ಮಿಸಿದ್ದ ದಾಖಲೆ ಪತನವಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor