ಬಿಸಿಸಿಐಯಿಂದ ರಣಜಿ ಟ್ರೋಫಿ ಕಡೆಗಣನೆ: ಸುನಿಲ್ ಗವಾಸ್ಕರ್
ಸುನಿಲ್ ಗವಾಸ್ಕರ್ | Photo Credit : PTI
ಮುಂಬೈ: ರಣಜಿ ಟ್ರೋಫಿ ನಡೆಯುವ ಸಮಯದಲ್ಲೇ ಭಾರತ ‘ಎ’ ಪಂದ್ಯಗಳನ್ನು ಆಯೋಜಿಸಿರುವ ಬಗ್ಗೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ದೇಶಿ ಪಂದ್ಯಾವಳಿಯ ಪಂದ್ಯಗಳನ್ನು ಕಡೆಗಣಿಸಬಾರದು ಎಂದು ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯನ್ನು ಒತ್ತಾಯಿಸಿದ್ದಾರೆ.
ಅವರು ತನ್ನ ಅಭಿಪ್ರಾಯವನ್ನು ‘ಮಿಡ್-ಡೇ’ ಪತ್ರಿಕೆಗೆ ಬರೆದಿರುವ ಅಂಕಣದಲ್ಲಿ ವ್ಯಕ್ತಪಡಿಸಿದ್ದಾರೆ.
ಪ್ರಸಕ್ತ ರಣಜಿ ಋತು ರವಿವಾರ ಆರಂಭವಾಗಿದ್ದು, ಅದೇ ದಿನ ಭಾರತ ‘ಎ’ ಮತ್ತು ಆಸ್ಟ್ರೇಲಿಯ ‘ಎ‘ ತಂಡಗಳ ನಡುವಿನ ಅಂತಿಮ ದಿನದ ಪಂದ್ಯವೂ ನಡೆಯಿತು. ಈ ಕಾರಣದಿಂದಾಗಿ ಹಲವು ಆಟಗಾರರಿಗೆ ತಮ್ಮ ರಾಜ್ಯ ತಂಡಗಳ ಪರ ಕಣಕ್ಕಿಳಿಯಲು ಸಾಧ್ಯವಾಗಲಿಲ್ಲ.
ಪಂದ್ಯಾವಳಿಯ ಗುಣಮಟ್ಟದ ಕುರಿತಾಗಿಯೂ ಪ್ರಶ್ನೆ ಎತ್ತಿರುವ ಗವಾಸ್ಕರ್, ಪ್ರಸ್ತುತ ಇರುವ ವ್ಯವಸ್ಥೆಯು ಆಟಗಾರರಿಗೆ ದೇಶಿ ಪಂದ್ಯಗಳಲ್ಲಿ ಪ್ರದರ್ಶನ ನೀಡುವುದನ್ನು ಕಷ್ಟಕರವಾಗಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ರಜತ್ ಪಾಟಿದಾರ್, ದೇವದತ್ ಪಡಿಕ್ಕಲ್ ಮತ್ತು ಋತುರಾಜ್ ಗಾಯಕ್ವಾಡ್ ಅವರಂತಹ ಆಟಗಾರರು ಭಾರತ ‘ಎ’ ತಂಡದ ಬದ್ಧತೆಗಳಿಂದಾಗಿ ತಮ್ಮ ರಾಜ್ಯ ತಂಡಗಳ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಮೂರು ಅನಧಿಕೃತ ಟೆಸ್ಟ್ ಪಂದ್ಯಗಳನ್ನಾಡಲು ಭಾರತ ‘ಎ’ ತಂಡವು ಈ ತಿಂಗಳ ಕೊನೆಯಲ್ಲಿ ನ್ಯೂಝಿಲ್ಯಾಂಡ್ ಪ್ರವಾಸ ಕೈಗೊಳ್ಳಲಿದೆ. ಅಂದರೆ, ಆಟಗಾರರು ಮತ್ತೆ ದೇಶಿ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.
ಎರಡೂ ಪಂದ್ಯಗಳು ಒಂದೇ ಸಮಯದಲ್ಲಿ ನಡೆಯಬಾರದು ಎಂದು ಹೇಳಿದ ಗವಾಸ್ಕರ್, ಆಟಗಾರರ ಸಾಮರ್ಥ್ಯವನ್ನು ಗುರುತಿಸುವಲ್ಲಿ ಭಾರತ ‘ಎ’ ತಂಡದ ಪಂದ್ಯಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದರು.