ಐಸಿಸಿ ಏಕದಿನ ರ್ಯಾಂಕಿಂಗ್ : ಅಗ್ರ ಸ್ಥಾನ ಉಳಿಸಿಕೊಂಡ ಸ್ಮೃತಿ ಮಂಧಾನ
ಸ್ಮೃತಿ ಮಂಧಾನ | Photo Credit : PTI
ಹೊಸದಿಲ್ಲಿ: ಭಾರತ ಮಹಿಳೆಯರ ಕ್ರಿಕೆಟ್ ತಂಡದ ನೂತನ ನಾಯಕಿ ಸ್ಮೃತಿ ಮಂಧಾನ ಐಸಿಸಿ ಮಹಿಳೆಯರ ಏಕದಿನ ಬ್ಯಾಟಿಂಗ್ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಮಂಗಳವಾರ ಬಿಡುಗಡೆಯಾದ ರ್ಯಾಂಕಿಂಗ್‌ನಲ್ಲಿ 790 ರೇಟಿಂಗ್ ಪಾಯಿಂಟ್ ಗಳಿಸಿದ್ದಾರೆ.
ಆಸ್ಟ್ರೇಲಿಯದ ಆಟಗಾರ್ತಿ ಎಲ್ಲಿಸ್ ಪೆರ್ರಿ ಟಾಪ್-10ಕ್ಕೆ ಮರಳಿದ್ದಾರೆ.
ಇತ್ತೀಚೆಗೆ ಹರ್ಮನ್‌ಪ್ರೀತ್ ಕೌರ್ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿರುವ ಮಂಧಾನ ಅವರು 50 ಓವರ್ ಮಾದರಿಯ ಕ್ರಿಕೆಟ್‌ನಲ್ಲಿ ದೇಶದ ಗರಿಷ್ಠ ರ್ಯಾಂಕಿನ ಬ್ಯಾಟರ್ ಆಗಿ ಉಳಿದಿದ್ದಾರೆ.
ಹರ್ಮನ್‌ಪ್ರೀತ್ 652 ಅಂಕದೊಂದಿಗೆ 9ನೇ ಸ್ಥಾನ ಪಡೆದಿದ್ದು, ಏಕದಿನ ಬ್ಯಾಟಿಂಗ್‌ನಲ್ಲಿ ಅಗ್ರ-10ರಲ್ಲಿರುವ ಭಾರತದ ಇನ್ನೋರ್ವ ಆಟಗಾರ್ತಿಯಾಗಿದ್ದಾರೆ.
ಮಹಿಳೆಯರ ಏಕದಿನ ಬೌಲಿಂಗ್ ರ್ಯಾಂಕಿಂಗ್‌ನಲ್ಲಿ ಭಾರತ ತಂಡದ ಆಲ್‌ರೌಂಡರ್ ದೀಪ್ತಿ ಶರ್ಮಾ ಒಂದು ಸ್ಥಾನ ಕೆಳಜಾರಿ 9ನೇ ಸ್ಥಾನ ತಲುಪಿದ್ದಾರೆ. ಆಸ್ಟ್ರೇೀಲಿಯದ ಅನಬೆಲ್ ಸದರ್‌ಲ್ಯಾಂಡ್ ಹಾಗೂ ಮೆಗಾನ್ ಶುಟ್ ರ್ಯಾಂಕಿಂಗ್‌ನಲ್ಲಿ ಮೇಲಕ್ಕೇರಿ ಪ್ರಮುಖ ಬೌಲರ್‌ಗಳ ಪೈಕಿ ತನ್ನ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.
ಟಿ-20 ಕ್ರಿಕೆಟಿನ ಟಾಪ್-10ರಲ್ಲಿ ಭಾರತದ ಮೂವರು ಬ್ಯಾಟರ್‌ಗಳು
ಮಹಿಳೆಯರ ಟಿ-20 ಬ್ಯಾಟಿಂಗ್ ರ್ಯಾಂಕಿಂಗ್‌ನಲ್ಲೂ ಭಾರತ ತಂಡ ಉತ್ತಮ ಸಾಧನೆ ತೋರಿದೆ. ಮೂವರು ಆಟಗಾರ್ತಿಯರು ಅಗ್ರ-10ರಲ್ಲಿ ಸ್ಥಾನ ಪಡೆದಿದ್ದಾರೆ. ಶೆಫಾಲಿ ವರ್ಮಾ 759 ಅಂಕ ಗಳಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಆ ನಂತರ ಮಂಧಾನ 754 ಅಂಕದೊಂದಿಗೆ ಐದನೇ ಸ್ಥಾನ ಹಾಗೂ ಹರ್ಮನ್‌ಪ್ರೀತ್ 656 ಅಂಕದೊಂದಿಗೆ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದಾರೆ.
ಟಿ-20 ಬೌಲಿಂಗ್ ರ್ಯಾಂಕಿಂಗ್‌ನಲ್ಲಿ ಭಾರತೀಯ ಸ್ಪಿನ್ನರ್‌ಗಳು ತಮ್ಮ ಪ್ರಾಬಲ್ಯವನ್ನು ಮುಂದುವರಿಸಿದ್ದಾರೆ. ಶ್ರೀಚರಣಿ 817 ರೇಟಿಂಗ್ ಪಾಯಿಂಟ್‌ನೊಂದಿಗೆ ಅಗ್ರ ಸ್ಥಾನ ಪಡೆದಿದ್ದಾರೆ. ದೀಪ್ತಿ ಶರ್ಮಾ 754 ಅಂಕದೊಂದಿಗೆ ಎರಡನೇ ಸ್ಥಾನ ಪಡೆದಿದ್ದು, ಭಾರತವು ಮೊದಲೆರಡು ಸ್ಥಾನ ತನ್ನದಾಗಿಸಿಕೊಂಡಿದೆ.
ದೀಪ್ತಿ ಶರ್ಮಾ ಮಹಿಳೆಯರ ಟಿ-20 ಆಲ್‌ರೌಂಡರ್ ರ್ಯಾಂಕಿಂಗ್‌ನಲ್ಲಿ ಟಾಪ್-10ರಲ್ಲಿರುವ ಏಕೈಕ ಭಾರತೀಯರಾಗಿದ್ದಾರೆ. ದೀಪ್ತಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಏಕದಿನ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ದೀಪ್ತಿ ಆರನೇ ಸ್ಥಾನ ಪಡೆದಿದ್ದಾರೆ.
ಮಹಿಳೆಯರ ಏಕದಿನ ಹಾಗೂ ಟಿ-20 ಎರಡೂ ಟೀಮ್ ರ್ಯಾಂಕಿಂಗ್ ನಲ್ಲೂ ಭಾರತ ತಂಡವು ಮೂರನೇ ಸ್ಥಾನ ಉಳಿಸಿಕೊಂಡಿದೆ.