Photo Credit : PTI 

ಡರ್ಬನ್: ಐದನೇ ದಿನದಾಟದಲ್ಲಿ ಜೋಶ್ ಹೇಝಲ್‌ವುಡ್ ಅವರ ಮ್ಯಾಚ್ ವಿನ್ನಿಂಗ್ ಸ್ಪೆಲ್ ಸಹಾಯದಿಂದ ಆಸ್ಟ್ರೇಲಿಯ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯವನ್ನು 214 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ.

ಆಸ್ಟ್ರೇಲಿಯದ ವೇಗದ ಬೌಲರ್ ಹೇಝಲ್‌ವುಡ್ ಐದನೇ ಹಾಗೂ ಕೊನೆಯ ದಿನವಾದ ಮಂಗಳವಾರ 49 ರನ್‌ಗೆ ಆರು ವಿಕೆಟ್‌ಗಳನ್ನು ಉರುಳಿಸಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ತನ್ನ ಶ್ರೇಷ್ಠ ಬೌಲಿಂಗ್ ಪ್ರದರ್ಶಿಸಿದರು.

ದಕ್ಷಿಣ ಆಫ್ರಿಕಾದ ನಾಯಕ ಟೆಂಬಾ ಬವುಮಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕನಾದ ನಂತರ ಮೊದಲ ಸೋಲಿನ ಕಹಿ ಉಂಡರು.

ಗೆಲ್ಲಲು 421 ರನ್ ಚೇಸ್ ಮಾಡಿದ ದಕ್ಷಿಣ ಆಫ್ರಿಕಾ ತಂಡವು ಮರ್ಕ್ರಮ್ ಅವರ ಹೋರಾಟಕಾರಿ 75 ರನ್ ಹೊರತಾಗಿಯೂ 206 ರನ್ ಗಳಿಸಿ ಆಲೌಟಾಯಿತು. ಹೇಝಲ್‌ವುಡ್ ಕೆಳ ಕ್ರಮಾಂಕದ ಆಟಗಾರರನ್ನು ಕಾಡಿದ್ದು, ಕೊನೆಯ ದಿನದ ಆಟದಲ್ಲಿ ಆತಿಥೇಯರು ಒಂದಷ್ಟು ಪ್ರತಿರೋಧ ಒಡ್ಡಿದ್ದರೂ ಹೇಝಲ್‌ವುಡ್ ಆಸ್ಟ್ರೇಲಿಯ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟರು.

ದಕ್ಷಿಣ ಆಫ್ರಿಕಾ ತಂಡ ಪ್ರತಿರೋಧ ಒಡ್ಡುವ ವಿಶ್ವಾಸದಲ್ಲಿ ಐದನೇ ದಿನದಾಟ ಆರಂಭಿಸಿತು. ಮುಲ್ಡರ್(29 ರನ್)ವಿಕೆಟನ್ನು ಉರುಳಿಸಿದ ಹೇಝಲ್‌ವುಡ್ ಅವರು ಮರ್ಕ್ರಮ್‌ರೊಂದಿಗಿನ 204 ರನ್ ಜೊತೆಯಾಟವನ್ನು ಮುರಿದು ಪ್ರವಾಸಿಗರಿಗೆ ಗೆಲುವಿನ ಬಾಗಿಲು ತೆರೆದರು.

ಸ್ಟೀವ್ ಸ್ಮಿತ್ ಮತ್ತೊಂದು ಅತ್ಯುತ್ತಮ ಕ್ಯಾಚ್ ಪಡೆದು ಕೈಲ್ ವೆರ್ರೆನ್ನೆ (1)ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಆಗ ದಕ್ಷಿಣ ಆಫ್ರಿಕಾ 156 ರನ್‌ಗೆ ಆರನೇ ವಿಕೆಟ್ ಕಳೆದುಕೊಂಡಿತು. ಹೇಝಲ್‌ವುಡ್ ಒಂದೇ ಓವರ್‌ನಲ್ಲಿ ಜಾನ್ಸನ್(35 ರನ್, 54 ಎಸೆತ) ಹಾಗೂ ಸಿಮೊನ್ ಹಾರ್ಮರ್(0)ಅವರನ್ನು ಔಟ್ ಮಾಡಿದರು.

ಮಿಚೆಲ್ ಸ್ಟಾರ್ಕ್(1-33) ಅವರು ಮರ್ಕ್ರಮ್ ಹೋರಾಟಕ್ಕೆ ತೆರೆ ಎಳೆದಿದ್ದು, ಆರಂಭಿಕ ಬ್ಯಾಟರ್ ಮರ್ಕ್ರಮ್ 237 ಎಸೆತಗಳನ್ನು ಎದುರಿಸಿದರು. ಅನ್ರಿಚ್ ನೋಟ್ಜೆ (4 ರನ್) ವಿಕೆಟನ್ನು ಪಡೆದ ಹೇಝಲ್‌ವುಡ್ ಗೆಲುವಿನ ವಿಧಿ ವಿಧಾನ ಪೂರೈಸಿದರು.

ಮ್ಯಾಟ್ ರೆನ್‌ಶಾ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವು ಆಸ್ಟ್ರೇಲಿಯದ ಗೆಲುವಿಗೆ ನೆರವಾಯಿತು. ಮೊದಲ ಇನಿಂಗ್ಸ್‌ನಲ್ಲಿ 190 ರನ್ ಗಳಿಸಿ ಆಸ್ಟ್ರೇಲಿಯದ ಸ್ಕೋರನ್ನು 390ಕ್ಕೆ ತಲುಪಿಸಿದ್ದ ರೆನ್‌ಶಾ ಎರಡನೇ ಇನಿಂಗ್ಸ್‌ನಲ್ಲಿ ಇನ್ನೂ 82 ರನ್ ಗಳಿಸಿದರು. ಪ್ರವಾಸಿಗರು ಎರಡನೇ ಇನಿಂಗ್ಸ್‌ನಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 314 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿದರು. ದಕ್ಷಿಣ ಆಫ್ರಿಕಾ ತಂಡವು ಮೊದಲ ಇನಿಂಗ್ಸ್‌ನಲ್ಲಿ 284 ರನ್ ಗಳಿಸಿದ್ದರೆ, ಎರಡನೇ ಇನಿಂಗ್ಸ್‌ನಲ್ಲಿ 421 ರನ್ ಚೇಸ್ ವೇಳೆ ಪರದಾಡಿತು.

190 ಹಾಗೂ 82 ರನ್ ಗಳಿಸಿದ್ದಲ್ಲದೆ 30 ರನ್‌ಗೆ ಎರಡು ವಿಕೆಟ್‌ಗಳನ್ನು ಪಡೆದಿದ್ದ ರೆನ್‌ಶಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor