×
Ad

ಚಿಕೂನ್ ಗುನ್ಯಾ ಪ್ರಭಾವದಿಂದ ಚೇತರಿಸಿಕೊಳ್ಳಲು ವಿಶ್ರಾಂತಿ ಪಡೆದ ಎಚ್.ಎಸ್.ಪ್ರಣಯ್

Update: 2024-08-26 21:05 IST

ಎಚ್.ಎಸ್.ಪ್ರಣಯ್ | PC : NDTV

ಹೊಸದಿಲ್ಲಿ : ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ತನ್ನ ಪ್ರದರ್ಶನದ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದ ಚಿಕುನ್ ಗುನ್ಯಾದ ಪ್ರಭಾವದಿಂದ ನನ್ನ ದೇಹ ಸಂಪೂರ್ಣ ಚೇತರಿಸಿಕೊಳ್ಳುವುದಕ್ಕೆ ಅವಕಾಶ ನೀಡಲು ನಾನು ಕ್ರೀಡೆಯಿಂದ ವಿಶ್ರಾಂತಿ ಪಡೆಯುವೆ ಎಂದು ಭಾರತದ ಹಿರಿಯ ಬ್ಯಾಡ್ಮಿಂಟನ್ ಆಟಗಾರ ಎಚ್.ಎಸ್.ಪ್ರಣಯ್ ಸೋಮವಾರ ಹೇಳಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್ ಗಿಂತ ಮೊದಲು 32ರ ಹರೆಯದ ಪ್ರಣಯ್ ಅವರು ಸೊಳ್ಳೆಯಿಂದ ಹರಡುವ ಸಾಂಕ್ರಾಮಿಕ ಕಾಯಿಲೆ ಚಿಕುನ್ ಗುನ್ಯಾದಿಂದ ತೀವ್ರ ಕೀಲುನೋವಿಗೆ ಒಳಗಾಗಿದ್ದರು.

ದುರದೃಷ್ಟವಶಾತ್ ಚಿಕೂನ್ ಗುನ್ಯಾ ದೊಂದಿಗಿನ ಹೋರಾಟದಿಂದಾಗಿ ನನ್ನ ದೇಹ ದಣಿದಿತ್ತು. ನಿರಂತರವಾಗಿ ಕಾಡುತ್ತಿದ್ದ ನೋವಿನಿಂದಾಗಿ ನನ್ನಿಂದ ಶ್ರೇಷ್ಠ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಸಂಪೂರ್ಣ ಚೇತರಿಸಿಕೊಳ್ಳುವತ್ತ ಗಮನ ನೀಡುವ ಸಲುವಾಗಿ ಕೆಲವು ಮುಂಬರುವ ಪಂದ್ಯಾವಳಿಗಳಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇನೆ. ಈ ಸವಾಲಿನ ಸಮಯದಲ್ಲಿ ನನ್ನನ್ನು ಅರ್ಥೈಸಿಕೊಂಡು, ನನಗೆ ಬೆಂಬಲ ನೀಡಿದವರಿಗೆ ಧನ್ಯವಾದಗಳು ಎಂದು ಪ್ರಣಯ್ ಎಕ್ಸ್ ನಲ್ಲಿ ಬರೆದಿದ್ದಾರೆ.

ತನ್ನ ಚೇತರಿಕೆಗೆ ಇನ್ನೆಷ್ಟು ದಿನಗಳು ಬೇಕು ಅಥವಾ ಯಾವ ಪಂದ್ಯಾವಳಿಗಳಿಂದ ಹೊರಗುಳಿಯುತ್ತೇನೆ ಎಂಬ ಕುರಿತು ಪ್ರಣಯ್ ಸ್ಪಷ್ಟನೆ ನೀಡಿಲ್ಲ.

ಕೇರಳದ ಬ್ಯಾಡ್ಮಿಂಟನ್ ಸ್ಟಾರ್ ಪ್ರಣಯ್ 2022ರಲ್ಲಿ ಥಾಮಸ್ ಕಪ್ ಜಯಿಸಿದ್ದರು. 2023ರಲ್ಲಿ ವಿಶ್ವ ಚಾಂಪಿಯನ್ ಶಿಪ್ನಲ್ಲಿ ಹಾಗೂ ಏಶ್ಯನ್ ಗೆಮ್ಸ್ ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು.

ಪ್ಯಾರಿಸ್ ಗೇಮ್ಸ್ ವೇಳೆಗೆ ಸಂಪೂರ್ಣ ಚೇತರಿಸಿಕೊಳ್ಳದಿದ್ದರೂ ಪ್ರಣಯ ಅವರು ತಾನಾಡಿರುವ ಎರಡೂ ಗ್ರೂಪ್ ಪಂದ್ಯಗಳಲ್ಲಿ ಜಯ ಸಾಧಿಸಿ ಅಂತಿಮ-16ರ ಸುತ್ತು ತಲುಪಿದ್ದರು. ಆದರೆ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ತನ್ನ ಸಹ ಆಟಗಾರ ಲಕ್ಷ್ಯ ಸೇನ್ ವಿರುದ್ಧ ಸೋತಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News