ಸರಣಿಯ ಪ್ರತೀ ಪಂದ್ಯದಲ್ಲಿ ವಿಭಿನ್ನ ಆಡುವ 11ರ ಬಳಗ ಕಣಕ್ಕಿಳಿಸಿದ ಭಾರತ ತಂಡ
PC : X
ಲಂಡನ್, ಜು. 31: ಇಂಗ್ಲೆಂಡ್ ತಂಡದ ವಿರುದ್ಧ ಈಗ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪ್ರತೀ ಪಂದ್ಯದಲ್ಲೂ ಶುಭಮನ್ ಗಿಲ್ ನಾಯಕತ್ವದಲ್ಲಿ ಭಾರತ ಕ್ರಿಕೆಟ್ ತಂಡವು ಆಡುವ 11ರ ಬಳಗದಲ್ಲಿ ಬದಲಾವಣೆ ಮಾಡಿದೆ.
ಸರಣಿಯು ದ ಓವಲ್ ನಲ್ಲಿ ತನ್ನ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಭಾರತವು 4 ಬದಲಾವಣೆಯೊಂದಿಗೆ 5ನೇ ಹಾಗೂ ಕೊನೆಯ ಟೆಸ್ಟ್ ಪಂದ್ಯಕ್ಕೆ ಪ್ರವೇಶಿಸಿದೆ. ಸರಣಿಯುದ್ದಕ್ಕೂ ಭಾರತವು ಆಡುವ 11ರ ಬಳಗದಲ್ಲಿ ಬದಲಾವಣೆ ಮಾಡುತ್ತಾ ಬಂದಿದೆ.
ರಣತಂತ್ರ ಹಾಗೂ ವಾತಾವರಣಕ್ಕೆ ತಕ್ಕಂತೆ ತಂಡದಲ್ಲಿ ಬದಲಾವಣೆ ಮಾಡಿದ ಹೊರತಾಗಿಯೂ ಮೂವರು ಆಟಗಾರರಾದ-ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್ ಹಾಗೂ ಅಭಿಮನ್ಯು ಈಶ್ವರನ್ ಅವರು ಐದು ಟೆಸ್ಟ್ ಪಂದ್ಯಗಳಲ್ಲಿ ಆಡಲಿಲ್ಲ. ಸ್ಪಿನ್ ಆಯ್ಕೆಗೆ ಸಂಬಂಧಿಸಿ ಚರ್ಚೆಗೆ ಗ್ರಾಸವಾಗಿದ್ದ ಕುಲದೀಪ್ ಆಡುವ ಅವಕಾಶವನ್ನೇ ಪಡೆಯಲಿಲ್ಲ. ಅರ್ಷದೀಪ್ ಹಾಗೂ ಈಶ್ವರನ್ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯಕ್ಕಾಗಿ ಇನ್ನಷ್ಟು ಸಮಯ ಕಾಯಬೇಕಾಗಿದೆ.
ಸರಣಿಯ ಆರಂಭದಿಂದಲೇ ಭಾರತ ತಂಡ ತನ್ನ ಉದ್ದೇಶವನ್ನು ಸ್ಪಷ್ಟಪಡಿಸಿತ್ತು. ಪರಿಸ್ಥಿತಿಗಳು, ಫಾರ್ಮ್ ಹಾಗೂ ಕೆಲಸದ ಹೊರೆಯ ಆಧಾರದ ಮೇಲೆ ಪದೇ ಪದೇ ಬದಲಾವಣೆ ಮಾಡುತ್ತಿತ್ತು.
ಭಾರತ ತಂಡವು ಲೀಡ್ಸ್‌ನಲ್ಲಿ ತನ್ನ ಮೊದಲ ಟೆಸ್ಟ್ ಪಂದ್ಯ ಸೋತ ನಂತರ 2ನೇ ಟೆಸ್ಟ್‌ನಲ್ಲಿ 3 ಬದಲಾವಣೆ ಮಾಡಿತು. ಸಾಯಿ ಸುದರ್ಶನ್, ಶಾರ್ದುಲ್ ಠಾಕೂರ್ ಹಾಗೂ ಬುಮ್ರಾ ಬದಲಿಗೆ ನಿತೀಶ್ ರೆಡ್ಡಿ, ಸುಂದರ್ ಹಾಗೂ ಆಕಾಶ ದೀಪ್ ಆಡಿದರು. ಭಾರತ ಈ ಪಂದ್ಯವನ್ನು 336 ರನ್ ಗಳಿಂದ ಗೆದ್ದುಕೊಂಡಿತು.
ಲಾರ್ಡ್ಸ್‌ನಲ್ಲಿ ನಡೆದಿದ್ದ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತವು ಕೇವಲ 1 ಬದಲಾವಣೆ ಮಾಡಿತು. ಪ್ರಸಿದ್ಧ ಕೃಷ್ಣ ಸ್ಥಾನಕ್ಕೆ ಬುಮ್ರಾ ಆಡಿದರು. ಆದರೆ ಈ ಪಂದ್ಯವನ್ನು ಭಾರತವು 22 ರನ್ ನಿಂದ ಸೋಲುಂಡಿತ್ತು.
ಮ್ಯಾಂಚೆಸ್ಟರ್ ನಲ್ಲಿ ನಡೆದಿದ್ದ 4ನೇ ಟೆಸ್ಟ್ ಪಂದ್ಯದಲ್ಲಿ ಸುದರ್ಶನ್, ಶಾರ್ದುಲ್ ಹಾಗೂ ಅಂಶುಲ್ ಕಾಂಬೋಜ್ ಆಡುವ ಅವಕಾಶ ಪಡೆದರೆ, ಕರುಣ್ ನಾಯರ್,ನಿತೀಶ್ ರೆಡ್ಡಿ ಹಾಗೂ ಆಕಾಶ ದೀಪ್ ಹೊರಗುಳಿದರು.
ಭಾರತವು 4ನೇ ಟೆಸ್ಟ್ ಪಂದ್ಯವನ್ನು ಡ್ರಾಗೊಳಿಸಿ ಸರಣಿಯಲ್ಲಿ ಸ್ಪರ್ಧೆಯಲ್ಲಿ ಉಳಿದುಕೊಂಡಿದೆ.
ದ ಓವಲ್ ನಲ್ಲಿ ಅಂತಿಮ ಪಂದ್ಯದಲ್ಲೂ ಆಡುವ ಬಳಗದಲ್ಲಿ ಬದಲಾವಣೆ ಮಾಡಲಾಗಿದ್ದು, ಧ್ರುವ ಜುರೆಲ್, ಕರುಣ್ ನಾಯರ್, ಆಕಾಶ್ ದೀಪ್ ಹಾಗೂ ಪ್ರಸಿದ್ಧ ಕೃಷ್ಣ ಅವರು ಪಂತ್, ಶಾರ್ದುಲ್, ಕಾಂಬೋಜ್ ಹಾಗೂ ಬುಮ್ರಾ ಬದಲಿಗೆ ಆಡಿದ್ದಾರೆ.
ಈ ನಿರಂತರ ಬದಲಾವಣೆಗಳು ಭಾರತ ತಂಡವು ಸರಣಿಯನ್ನು 2-2ರಿಂದ ಸಮಬಲಗೊಳಿಸಲು ನೆರವಾಗುವುದೇ ಎಂದು ಕಾದು ನೋಡಬೇಕಾಗಿದೆ. ಪ್ರಸಕ್ತ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತದ ಹೊಂದಾಣಿಕೆಯ ಸಾಮರ್ಥ್ಯ ಹಾಗೂ ಬೆಂಚ್ ಬಲ ಸಂಪೂರ್ಣವಾಗಿ ಪರೀಕ್ಷಿಸಲ್ಪಟ್ಟಿದೆ.