ಒಂದೇ ಕ್ರೀಡಾಂಗಣದಲ್ಲಿ ಸತತ ನಾಲ್ಕು ಶತಕ | ಡಾನ್ ಬ್ರಾಡ್ಮನ್ ವಿಶೇಷ ಕ್ಲಬ್ ಗೆ ಟ್ರಾವಿಸ್ ಹೆಡ್ ಸೇರ್ಪಡೆ
ಟ್ರಾವಿಸ್ ಹೆಡ್ | Photo Credit : PTI
ಅಡಿಲೇಡ್, ಡಿ.19: ಒಂದೇ ಕ್ರೀಡಾಂಗಣದಲ್ಲಿ ಸತತ ನಾಲ್ಕು ಶತಕಗಳನ್ನು ಸಿಡಿಸಿರುವ ಆಸ್ಟ್ರೇಲಿಯದ ಬ್ಯಾಟರ್ ಟ್ರಾವಿಸ್ ಹೆಡ್ ತಮ್ಮದೇ ದೇಶದ ಕ್ರಿಕೆಟ್ ದಂತಕತೆ ಡಾನ್ ಬ್ರಾಡ್ಮನ್ ಒಳಗೊಂಡಿರುವ ಗಣ್ಯರ ಕ್ಲಬ್‌ಗೆ ಸೇರ್ಪಡೆಯಾದರು. ಅಡಿಲೇಡ್ ಓವಲ್ ನಲ್ಲಿ ಅಮೋಘ ಪ್ರದರ್ಶನ ನೀಡಿದ ಆಸ್ಟ್ರೇಲಿಯ ತಂಡವು ಇಂಗ್ಲೆಂಡ್ ವಿರುದ್ಧದ ಪ್ರತಿಷ್ಠಿತ ಆ್ಯಶಸ್ ಪಂದ್ಯದಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದೆ.
ಇಂಗ್ಲೆಂಡ್ ವಿರುದ್ಧ್ದ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನವಾದ ಶುಕ್ರವಾರ ಅಜೇಯ ಶತಕ ಗಳಿಸಿದ ಹೆಡ್ ಅವರು ಟೆಸ್ಟ್ ಇತಿಹಾಸದಲ್ಲಿ ಆಸ್ಟ್ರೇಲಿಯದ ಒಂದೇ ಮೈದಾನದಲ್ಲಿ ಸತತ ನಾಲ್ಕು ಪಂದ್ಯಗಳಲ್ಲಿ ಶತಕ ಗಳಿಸಿದ ಐದನೇ ಬ್ಯಾಟರ್ ಆಗಿದ್ದಾರೆ. ಅಡಿಲೇಡ್ ಓವಲ್‌ನಲ್ಲಿ ಮೈಕಲ್ ಕ್ಲಾರ್ಕ್ ನಂತರ ಈ ಸಾಧನೆ ಮಾಡಿದ ಆಸ್ಟ್ರೇಲಿಯದ ಎರಡನೇ ಆಟಗಾರನಾಗಿದ್ದಾರೆ.
ಮೆಲ್ಬರ್ನ್‌ನಲ್ಲಿ ಬ್ರಾಡ್ಮನ್, ಸಿಡ್ನಿಯಲ್ಲಿ ವಲ್ಲಿ ಹ್ಯಾಮ್ಮಂಡ್, ಮೆಲ್ಬರ್ನ್‌ನಲ್ಲಿ ಸ್ಟೀವನ್ ಸ್ಮಿತ್ ಹಾಗೂ ಅಡಿಲೇಡ್‌ನಲ್ಲಿ ಕ್ಲಾರ್ಕ್ ಅವರು ಸತತ ನಾಲ್ಕು ಶತಕಗಳನ್ನು ಗಳಿಸಿ ಮಹತ್ವದ ಸಾಧನೆ ಮಾಡಿದ್ದರು. ಅಡಿಲೇಡ್ ಟೆಸ್ಟ್‌ನಲ್ಲಿ ಹೆಡ್ ಅವರು ವೆಸ್ಟ್‌ಇಂಡೀಸ್(ಎರಡು ಬಾರಿ), ಭಾರತ ಹಾಗೂ ಇಂಗ್ಲೆಂಡ್ ತಂಡಗಳ ವಿರುದ್ಧ 2022 ಹಾಗೂ 2025ರ ನಡುವೆ ನಾಲ್ಕು ಶತಕಗಳನ್ನು ಸಿಡಿಸಿದ್ದಾರೆ.
ತನ್ನ ತವರು ಮೈದಾನದಲ್ಲಿ ಬ್ಯಾಟಿಂಗ್ ಮಾಡಿದ ಹೆಡ್ ಅವರು ಜೋ ರೂಟ್ ಬೌಲಿಂಗ್ ನಲ್ಲಿ ಬೌಂಡರಿ ಗಳಿಸಿ ಶತಕ ಪೂರೈಸಿದರು. ಆಗ ತನ್ನ ಹೆಲ್ಮೆಟ್‌ನ್ನು ತೆಗೆದು, ಮೈದಾನಕ್ಕೆ ಮುತ್ತಿಟ್ಟರು. ನೆರೆದಿದ್ದ ಪ್ರೇಕ್ಷಕರಿಗೆ ಸೆಲ್ಯೂಟ್ ಹೊಡೆದರು. ಅಡಿಲೇಡ್‌ನಲ್ಲಿ ಆ್ಯಶಸ್ ಸರಣಿಯಲ್ಲಿ ಶತಕ ಗಳಿಸುವುದು ನನ್ನ ಬಾಲ್ಯದ ಕನಸಾಗಿತ್ತು ಎಂದು ಹೆಡ್ ಹೇಳಿದ್ದಾರೆ.
146 ಎಸೆತಗಳಲ್ಲಿ ಶತಕ ಗಳಿಸಿರುವ ಹೆಡ್ ಅವರು ಆಸ್ಟ್ರೇಲಿಯ ತಂಡವು ದಿನದಾಟದಂತ್ಯಕ್ಕೆ 4 ವಿಕೆಟ್‌ಗಳ ನಷ್ಟಕ್ಕೆ 271 ರನ್ ಗಳಿಸಿ 356 ರನ್ ಮುನ್ನಡೆ ಪಡೆಯುವಲ್ಲಿ ನೆರವಾಗಿದ್ದಾರೆ.
ಅಡಿಲೇಡ್ ನಲ್ಲಿ ಆಡಿರುವ ಹಿಂದಿನ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಹೆಡ್ ಅವರು 2022ರಲ್ಲಿ ವೆಸ್ಟ್‌ಇಂಡೀಸ್ ವಿರುದ್ದ 175 ಹಾಗೂ ಔಟಾಗದೆ 38 ರನ್, 2024ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ 119 ಹಾಗೂ ಭಾರತದ ವಿರುದ್ಧ್ದ 140 ರನ್ ಗಳಿಸಿದ್ದರು. ಇದೀಗ ಇಂಗ್ಲೆಂಡ್ ವಿರುದ್ಧ ಶತಕ ದಾಖಲಿಸಿದ್ದಾರೆ. ಹೆಡ್ ಗಳಿಸಿದ ಹಿಂದಿನ 10 ಶತಕಗಳಲ್ಲಿ ಆಸ್ಟ್ರೇಲಿಯ ತಂಡವು 9ರಲ್ಲಿ ಜಯ ಸಾಧಿಸಿದ್ದು, ಗಾಬಾದಲ್ಲಿ ನಡೆದಿದ್ದ ಭಾರತ ವಿರುದ್ಧದ ಪಂದ್ಯ ಮಾತ್ರ ಮಳೆಯಿಂದಾಗಿ ಡ್ರಾನಲ್ಲಿ ಕೊನೆಗೊಂಡಿತ್ತು.
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಹಾಗೂ ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್‌ನಲ್ಲಿ ಶತಕ ಗಳಿಸುವುದರೊಂದಿಗೆ ಈಗಗಲೇ ಮ್ಯಾಚ್ ವಿನ್ನರ್ ಆಟಗಾರನೆಂದೇ ಪ್ರಸಿದ್ದಿ ಪಡೆದಿರುವ ಹೆಡ್ ಅವರು ಮತ್ತೊಮ್ಮೆ ಪ್ರಮುಖ ಪಂದ್ಯದಲ್ಲಿ ಮಿಂಚಿದ್ದಾರೆ. ಸುಮಾರು 50,000 ಅಭಿಮಾನಿಗಳು ಅಡಿಲೇಡ್‌ನಲ್ಲಿ ಹೆಡ್ ಅವರ ಮತ್ತೊಂದು ಅಧ್ಯಾಯ ಆರಂಭಕ್ಕೆ ಸಾಕ್ಷಿಯಾಗಿದ್ದಾರೆ.
ಆಸ್ಟ್ರೇಲಿಯ ಸ್ಟೇಡಿಯಂನಲ್ಲಿ ಸತತ ನಾಲ್ಕು ಟೆಸ್ಟ್ ಶತಕ ಗಳಿಸಿದವರು
ಡಾನ್ ಬ್ರಾಡ್ಮನ್(ಆಸ್ಟ್ರೇಲಿಯ), ಮೆಲ್ಬರ್ನ್(1928-1932)
ವಲ್ಲಿ ಹ್ಯಾಮ್ಮಂಡ್(ಇಂಗ್ಲೆಂಡ್), ಸಿಡ್ನಿ(1928-1936)
ಮೈಕಲ್ ಕ್ಲಾರ್ಕ್(ಆಸ್ಟ್ರೇಲಿಯ)-ಅಡಿಲೇಡ್(2012-2014)
ಸ್ಟೀವನ್ ಸ್ಮಿತ್(ಆಸ್ಟ್ರೇಲಿಯ)-ಮೆಲ್ಬರ್ನ್(2014-2017)
ಟ್ರಾವಿಸ್ ಹೆಡ್(ಆಸ್ಟ್ರೇಲಿಯ)-ಅಡಿಲೇಡ್(2022-2025)
ಅಡಿಲೇಡ್ ಓವಲ್‌ನಲ್ಲಿ ಕಳೆದ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಟ್ರಾವಿಸ್ ಹೆಡ್ ಸಾಧನೆ
175, ಔಟಾಗದೆ 38- ವೆಸ್ಟ್‌ಇಂಡೀಸ್ ವಿರುದ್ಧ, 2022
119-ವೆಸ್ಟ್‌ಇಂಡೀಸ್ ವಿರುದ್ಧ, 2024
140-ಭಾರತ ವಿರುದ್ಧ, 2024
10, ಔಟಾಗದೆ 142-ಇಂಗ್ಲೆಂಡ್ ವಿರುದ್ಧ, 2025