ಮೂರನೇ ಟೆಸ್ಟ್ ನಲ್ಲಿ ಇಂಗ್ಲೆಂಡ್ ಗೆ 'HEAD'ache; ಆ್ಯಶಸ್ ಕಪ್ ಉಳಿಸಿಕೊಳ್ಳುವತ್ತ ಆಸ್ಟ್ರೇಲಿಯ ದಿಟ್ಟ ಹೆಜ್ಜೆ
ಟ್ರಾವಿಸ್ ಹೆಡ್ | Photo Credit : PTI
ಅಡಿಲೇಡ್, ಡಿ.19: ಅಡಿಲೇಡ್ ಓವಲ್ ನಲ್ಲಿ ಆಡಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ನಾಲ್ಕನೇ ಶತಕ ಗಳಿಸಿದ ‘ಡೇಂಜರ್ ಮ್ಯಾನ್’ ಟ್ರಾವಿಸ್ ಹೆಡ್(ಔಟಾಗದೆ 142 ರನ್, 196 ಎಸೆತ, 13 ಬೌಂಡರಿ, 2 ಸಿಕ್ಸರ್)ಆಸ್ಟ್ರೇಲಿಯ ಕ್ರಿಕೆಟ್ ತಂಡವು ಇಂಗ್ಲೆಂಡ್ ತಂಡದ ವಿರುದ್ಧ 356 ಮುನ್ನಡೆ ಪಡೆಯುವಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ.
ಹೆಡ್ ಔಟಾಗದೆ 142 ರನ್ ಗಳಿಸುವ ಮೂಲಕ ಆಸ್ಟ್ರೇಲಿಯ ತಂಡವು ಶುಕ್ರವಾರ ಮೂರನೇ ದಿನದಾಟದಂತ್ಯಕ್ಕೆ 4 ವಿಕೆಟ್ ಗಳ ನಷ್ಟಕ್ಕೆ 271 ರನ್ ಗಳಿಸುವಲ್ಲಿ ನೆರವಾದರು. ಮೊದಲ ಇನಿಂಗ್ಸ್ ನಲ್ಲಿ ಶತಕ ಗಳಿಸಿದ್ದ ಅಲೆಕ್ಸ್ ಕ್ಯಾರಿ ಅವರು 91 ಎಸೆತಗಳಲ್ಲಿ ಔಟಾಗದೆ 52 ರನ್ ಗಳಿಸಿದ್ದಾರೆ. ಸದ್ಯ ಆಸ್ಟ್ರೇಲಿಯ ತಂಡವು ಐದು ಪಂದ್ಯಗಳ ಸರಣಿಯಲ್ಲಿ 3-0 ಮುನ್ನಡೆ ಸಾಧಿಸಿ ಆ್ಯಶಸ್ ಕಪ್ ಅನ್ನು ತನ್ನಲ್ಲೇ ಉಳಿಸಿಕೊಳ್ಳುವತ್ತ ದಿಟ್ಟ ಹೆಜ್ಜೆ ಇಟ್ಟಿದೆ.
ಪರ್ತ್ ಹಾಗೂ ಬ್ರಿಸ್ಬೇನ್ ನಲ್ಲಿ ತಲಾ 8 ವಿಕೆಟ್‌ಗಳ ಅಂತರದಿಂದ ಸೋತಿರುವ ಇಂಗ್ಲೆಂಡ್ ತಂಡಕ್ಕೆ ಸ್ಪರ್ಧೆಯಲ್ಲಿರಲು ಈ ಪಂದ್ಯವನ್ನು ಗೆಲ್ಲಲೇಬೇಕಾಗಿತ್ತು. ಆದರೆ ಇಂಗ್ಲೆಂಡ್ ತಂಡ ಕಠಿಣ ಸವಾಲು ಎದುರಿಸುವ ಎಲ್ಲ ಸಾಧ್ಯತೆ ಇದ್ದು, 1902ರಲ್ಲಿ ಇಂಗ್ಲೆಂಡ್ ವಿರುದ್ಧ ಅಡಿಲೇಡ್‌ನಲ್ಲಿ ಆಸ್ಟ್ರೇಲಿಯ ತಂಡವು 316 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತ್ತು.
ಹೆಡ್ ಅವರು 146 ಎಸೆತಗಳಲ್ಲಿ ತನ್ನ 11ನೇ ಟೆಸ್ಟ್ ಶತಕವನ್ನು ಗಳಿಸಿದರು. 99 ರನ್ ಗಳಿಸಿದ್ದಾಗ ಹ್ಯಾರಿ ಬ್ರೂಕ್ ರಿಂದ ಜೀವದಾನ ಪಡೆದಿದ್ದ ಹೆಡ್ ಅವರು ತನ್ನ ತವರು ಮೈದಾನದಲ್ಲಿ ಸತತ ನಾಲ್ಕು ಟೆಸ್ಟ್ ಶತಕಗಳನ್ನು ಗಳಿಸಿದ್ದಾರೆ.
ಇನಿಂಗ್ಸ್ ಆರಂಭಿಸಿದ ಹೆಡ್ ಹಾಗೂ ವೆದರಾಲ್ಡ್(1 ರನ್)ಉತ್ತಮ ಆರಂಭ ಒದಗಿಸಲಿಲ್ಲ. ವೆದರಾಲ್ಡ್ ಅವರು ಬ್ರೆಂಡನ್ ಕಾರ್ಸ್‌ಗೆ ವಿಕೆಟ್ ಒಪ್ಪಿಸಿದರು. ಲ್ಯಾಬುಶೇನ್13 ರನ್ ಗಳಿಸಿ ಔಟಾದರು. ಮೊದಲ ಇನಿಂಗ್ಸ್‌ನಲ್ಲಿ 82 ರನ್ ಗಳಿಸಿದ್ದ ಉಸ್ಮಾನ್ ಖ್ವಾಜಾ 40 ರನ್ ಗಳಿಸಿ ವಿಲ್ ಜಾಕ್ಸ್ ಬೌಲಿಂಗ್/ನಲ್ಲಿ ವಿಕೆಟ್ ಕೀಪರ್ ಸ್ಮಿತ್‌ಗೆ ಕ್ಯಾಚ್ ನೀಡಿದರು. ಕ್ಯಾಮರೂನ್ ಗ್ರೀನ್(7 ರನ್)ಮತ್ತೊಮ್ಮೆ ವಿಫಲರಾದರು.
ಖ್ವಾಜಾ ಅವರೊಂದಿಗೆ 3ನೇ ವಿಕೆಟ್ ಗೆ 86 ರನ್ ಸೇರಿಸಿದ ಹೆಡ್ ಅವರು ಐದನೇ ವಿಕೆಟ್‌ಗೆ ಅಲೆಕ್ಸ್ ಕ್ಯಾರಿ ಅವರೊಂದಿಗೆ ಮುರಿಯದ ಜೊತೆಯಾಟದಲ್ಲಿ 122 ರನ್ ಗಳಿಸಿ ಆಸ್ಟ್ರೇಲಿಯ ತಂಡವನ್ನು ಸುಸ್ಥಿತಿಯಲ್ಲಿರಿಸಿದ್ದಾರೆ.
*ಇಂಗ್ಲೆಂಡ್ 286 ರನ್‌ಗೆ ಆಲೌಟ್:
ಇದಕ್ಕೂ ಮೊದಲು ಆಸ್ಟ್ರೇಲಿಯದ ಮೊದಲ ಇನಿಂಗ್ಸ್ 371 ರನ್ ಗೆ ಉತ್ತರವಾಗಿ 8 ವಿಕೆಟ್‌ಗಳ ನಷ್ಟಕ್ಕೆ 213 ರನ್‌ನಿಂದ ತನ್ನ ಮೊದಲ ಇನಿಂಗ್ಸ್ ಮುಂದುವರಿಸಿದ ಇಂಗ್ಲೆಂಡ್ ತಂಡವು 286 ರನ್ ಗಳಿಸಿ ಆಲೌಟಾಯಿತು. ನಾಯಕ ಬೆನ್ ಸ್ಟೋಕ್ಸ್ 83 ರನ್ ಗಳಿಸಿದ್ದಲ್ಲದೆ, ಆರ್ಚರ್ ಅವರೊಂದಿಗೆ 9ನೇ ವಿಕೆಟ್‌ಗೆ 106 ರನ್ ಜೊತೆಯಾಟ ನಡೆಸಿದರು. 159 ಎಸೆತಗಳಲ್ಲಿ 50 ರನ್ ಗಳಿಸಿ ಅತ್ಯಂತ ನಿಧಾನಗತಿಯ ಗತಿಯ ಅರ್ಧಶತಕ ಗಳಿಸಿದ ಸ್ಟೋಕ್ಸ್ ಅವರು ಸ್ಟಾರ್ಕ್‌ಗೆ ವಿಕೆಟ್ ಒಪ್ಪಿಸಿದರು.
ಸ್ಟೋಕ್ಸ್‌ಗೆ ಉತ್ತಮ ಸಾಥ್ ನೀಡಿದ ಆರ್ಚರ್ ತನ್ನ ಚೊಚ್ಚಲ ಅರ್ಧಶತಕ(51 ರನ್)ಗಳಿಸಿ ಕೊನೆಯ ಆಟಗಾರನಾಗಿ ಔಟಾದರು. ಸ್ಕಾಟ್ ಬೋಲ್ಯಾಂಡ್(3-45)ಹಾಗೂ ಪ್ಯಾಟ್ ಕಮಿನ್ಸ್(3-69)ತಲಾ ಮೂರು ವಿಕೆಟ್‌ಗಳನ್ನು ಪಡೆದರು.
*ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯ ಮೊದಲ ಇನಿಂಗ್ಸ್: 371 ರನ್
ಇಂಗ್ಲೆಂಡ್ ಮೊದಲ ಇನಿಂಗ್ಸ್: 286 ರನ್
(ಬೆನ್ ಸ್ಟೋಕ್ಸ್ 83, ಜೋಫ್ರಾ ಆರ್ಚರ್ 51, ಹ್ಯಾರಿ ಬ್ರೂಕ್ 45, ಪ್ಯಾಟ್ ಕಮಿನ್ಸ್ 3-69, ಸ್ಕಾಟ್ ಬೋಲ್ಯಾಂಡ್ 3-45, ನಾಥನ್ ಲಿಯೊನ್ 2-70)
ಆಸ್ಟ್ರೇಲಿಯ ಎರಡನೇ ಇನಿಂಗ್ಸ್:66 ಓವರ್‌ಗಳಲ್ಲಿ 271/4
(ಟ್ರಾವಿಸ್ ಹೆಡ್ ಔಟಾಗದೆ 142, ಅಲೆಕ್ಸ್ ಕ್ಯಾರಿ ಔಟಾಗದೆ 52, ಉಸ್ಮಾನ್ ಖ್ವಾಜಾ 40, ಜೋಸ್ ಟೊಂಗ್ 2-59)