U19 Asia Cup | ಫೈನಲ್ ಗೆ ಭಾರತ, ಪಾಕಿಸ್ತಾನ ಎದುರಾಳಿ
ಸೆಮಿ ಫೈನಲ್ ನಲ್ಲಿ ಶ್ರೀಲಂಕಾಕ್ಕೆ 8 ವಿಕೆಟ್ ಸೋಲು
Photo Credit : indiatoday.in
ಹೊಸದಿಲ್ಲಿ, ಡಿ.19: ದುಬೈನ ಐಸಿಸಿ ಅಕಾಡಮಿ ಗ್ರೌಂಡ್‌ನಲ್ಲಿ ಶುಕ್ರವಾರ ನಡೆದ ಮಳೆಬಾಧಿತ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 8 ವಿಕೆಟ್‌ಗಳ ಅಂತರದಿಂದ ಸುಲಭವಾಗಿ ಮಣಿಸಿರುವ ಭಾರತ ಕ್ರಿಕೆಟ್ ತಂಡವು 2025ರ ಆವೃತ್ತಿಯ ಅಂಡರ್-19 ಏಶ್ಯಕಪ್ ಟಿ020 ಟೂರ್ನಿಯಲ್ಲಿ ಫೈನಲ್ ಗೆ ಪ್ರವೇಶಿಸಿದೆ.
ರವಿವಾರ ಇದೇ ಮೈದಾನದಲ್ಲಿ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನ ತಂಡವನ್ನು ಎದುರಿಸಲಿದೆ.
ಶುಕ್ರವಾರ ನಡೆದ ಮೊದಲ ಸೆಮಿ ಫೈನಲ್‌ನಲ್ಲಿ ಗೆಲ್ಲಲು 139 ರನ್ ಗುರಿ ಪಡೆದಿದ್ದ ಭಾರತ ತಂಡವು ವಿಹಾನ್ ಮಲ್ಹೋತ್ರಾ (ಔಟಾಗದೆ 61, 45 ಎಸೆತ, 4 ಬೌಂಡರಿ, 2 ಸಿಕ್ಸರ್) ಹಾಗೂ ಆ್ಯರೊನ್ ಜಾರ್ಜ್(ಔಟಾಗದೆ 58, 49 ಎಸೆತ,4 ಬೌಂಡರಿ, 1 ಸಿಕ್ಸರ್) ಅಜೇಯ ಅರ್ಧಶತಕಗಳ ಕೊಡುಗೆಯ ನೆರವಿನಿಂದ 18 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು.
ಭಾರತ ತಂಡವು 3.3 ಓವರ್‌ಗಳಲ್ಲಿ ನಾಯಕ ಆಯುಷ್ ಮ್ಹಾತ್ರೆ(7ರನ್)ಹಾಗೂ ವೈಭವ ಸೂರ್ಯವಂಶಿ(9 ರನ್)ವಿಕೆಟ್ ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ಆಗ ಮೂರನೇ ವಿಕೆಟಿಗೆ 114 ರನ್ ಜೊತೆಯಾಟ ನಡೆಸಿದ ವಿಹಾನ್ ಹಾಗೂ ಆ್ಯರೊನ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 138 ರನ್ ಗಳಿಸಲಷ್ಟೇ ಶಕ್ತವಾಯಿತು. ಲಂಕಾದ ಪರ ಚಾಮಿಕಾ ಹೀನಾಟಿಗಲ(42 ರನ್, 38 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು.
ನಾಯಕ ವಿಮತ್ ದಿನ್ಸಾರ(32 ರನ್, 29 ಎಸೆತ)ಹಾಗೂ ಸೆಥ್ಮಿಕ ಸೆನೆವಿರತ್ನೆ (30 ರನ್, 22 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.
ಭಾರತದ ಪರ ಹೆನಿಲ್ ಪಟೇಲ್ (2-31)ಹಾಗೂ ಕನಿಷ್ಕ್ ಚೌಹಾಣ್(2-36)ತಲಾ ಎರಡು ವಿಕೆಟ್‌ಗಳನ್ನು ಪಡೆದರು.