ಭಾರತ–ಪಾಕಿಸ್ತಾನ ಮಹಿಳಾ ವಿಶ್ವಕಪ್ ಪಂದ್ಯದಲ್ಲೂ ಹಸ್ತಲಾಘವ ವಿವಾದ
ಪಾಕ್ ನಾಯಕಿಗೆ ಹಸ್ತಲಾಘವ ನಿರಾಕರಿಸಿದ ಹರ್ಮನ್‌ಪ್ರೀತ್
Photo Credit : Associated Press
ಕೊಲಂಬೊ: ಮಹಿಳಾ ವಿಶ್ವಕಪ್ ಕ್ರಿಕೆಟ್ ನಲ್ಲಿ ಭಾರತ–ಪಾಕಿಸ್ತಾನ ನಡುವಿನ ರೋಚಕ ಹಣಾಹಣಿಯು ಟಾಸ್‌ನಿಂದಲೇ ಪ್ರಾರಂಭವಾಗಿದೆ. ಪಾಕಿಸ್ತಾನ ತಂಡದ ನಾಯಕಿ ಫಾತಿಮಾ ಸನಾ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ (ಬೌಲಿಂಗ್) ಆಯ್ಕೆ ಮಾಡಿಕೊಂಡರು. ಆದರೆ ಟಾಸ್ ಸಂದರ್ಭದಲ್ಲೇ ಭಾರತೀಯ ನಾಯಕಿ ಹರ್ಮನ್‌ಪ್ರೀತ್ ಕೌರ್ ಹ್ಯಾಂಡ್‌ಶೇಕ್ ಮಾಡಲು ನಿರಾಕರಿಸಿದ್ದಾರೆ.
ಸಾಂಪ್ರದಾಯಿಕ ಹಸ್ತಲಾಘವ ಪ್ರಕ್ರಿಯೆಯನ್ನು ತಪ್ಪಿಸಲು ಬಿಸಿಸಿಐ ಆಟಗಾರ್ತಿಯರಿಗೆ ಮುಂಚಿತ ಸೂಚನೆ ನೀಡಿರುವುದು ತಿಳಿದುಬಂದಿದೆ. ಇದರಿಂದ ಇತ್ತೀಚಿನ ಪುರುಷರ ಏಷ್ಯಾ ಕಪ್‌ನಲ್ಲಿ ಅನುಸರಿಸಿದನೀತಿ ಮಹಿಳಾ ತಂಡದಲ್ಲಿಯೂ ಮುಂದುವರಿದಂತಾಗಿದೆ. ಟಾಸ್ ಸಮಾರಂಭವನ್ನು ಮಾಜಿ ಆಸ್ಟ್ರೇಲಿಯಾ ಆಟಗಾರ್ತಿ ಮೆಲ್ ಜೋನ್ಸ್ ನಡೆಸಿದ್ದು, ಇಬ್ಬರೂ ನಾಯಕಿಯರು ಅಂತರ ಕಾಯ್ದುಕೊಂಡು ನಿಂತಿದ್ದರು.
ಭಾರತವು ಈ ಪಂದ್ಯಕ್ಕೆ ಗಾಯಗೊಂಡ ಅಮನ್‌ಜೋತ್ ಕೌರ್ ಬದಲಿಗೆ ರೇಣುಕಾ ಸಿಂಗ್ ಠಾಕೂರ್ ಅವರನ್ನು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಪಾಕಿಸ್ತಾನವು ಒಮೈಮಾ ಸೊಹಾಲಿ ಬದಲಿಗೆ ಸದಾಫ್ ಶಮಾಸ್ ಅವರಿಗೆ ಸ್ಥಾನ ನೀಡಿದೆ.
ಇತ್ತೀಚೆಗೆ ಮುಕ್ತಾಯಗೊಂಡ ಪುರುಷರ ಏಷ್ಯಾ ಕಪ್‌ನಲ್ಲಿಯೂ ಭಾರತ–ಪಾಕಿಸ್ತಾನ ತಂಡಗಳ ನಡುವೆ ಹ್ಯಾಂಡ್‌ಶೇಕ್ ನಡೆದಿರಲಿಲ್ಲ. ಅಲ್ಲದೆ, ಭಾರತ ತಂಡವು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಹಾಗೂ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಸಹ ನಿರಾಕರಿಸಿತ್ತು.
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಭಾರತೀಯ ಪ್ರವಾಸಿಗರು ಬಲಿಯಾದ ಹಿನ್ನೆಲೆ ಎರಡೂ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಿದ್ದು, ಅದರ ಪ್ರತಿಫಲ ಕ್ರಿಕೆಟ್ ಮೈದಾನದಲ್ಲಿಯೂ ಕಾಣಿಸುತ್ತಿದೆ. ದಾಳಿಗೆ ಪ್ರತಿಕ್ರಿಯೆಯಾಗಿ ಭಾರತವು “ಆಪರೇಷನ್ ಸಿಂದೂರ್” ಸೈನಿಕ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು.