ಜಪಾನ್ನಲ್ಲಿ ಲೈಂಗಿಕ ಕಿರುಕುಳ ಆರೋಪ: ಭಾರತೀಯ ಪ್ಯಾರಾ ಈಜುಪಟು ಗಡೀಪಾರು
ಮಹಮ್ಮದ್ ಶಮ್ಸ್ ಆಲಂ ಶೇಖ್ (Photo: SAI)
ನಾಗೋಯಾ: ಮಹಿಳಾ ಹೋಟೆಲ್ ಸಿಬ್ಬಂದಿಯೊಬ್ಬರಿಗೆ ಲೈಂಗಿಕ ಕಿರುಕುಳ ಹಾಗೂ ಅಸಭ್ಯ ವರ್ತನೆ ತೋರಿದ ಆರೋಪದ ಹಿನ್ನೆಲೆಯಲ್ಲಿ ಭಾರತೀಯ ಪ್ಯಾರಾ ಈಜುಪಟು ಮಹಮ್ಮದ್ ಶಮ್ಸ್ ಆಲಂ ಶೇಖ್ ಅವರನ್ನು ಜಪಾನ್ ಪೊಲೀಸರು ವಶಕ್ಕೆ ಪಡೆದಿದ್ದು, ಬಳಿಕ ಭಾರತಕ್ಕೆ ವಾಪಸ್ ಕಳುಹಿಸಿದ್ದಾರೆ. ಈ ಬೆಳವಣಿಗೆಯಿಂದ ನಾಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಭಾರತೀಯ ತಂಡಕ್ಕೆ ಮುಜುಗರ ಉಂಟಾಗಿದೆ. 40 ವರ್ಷದ ಶೇಖ್ ವಿರುದ್ಧ ಶಿಸ್ತು ಕ್ರಮವಾಗಿ ಜೀವಿತಾವಧಿ ನಿಷೇಧ ಹೇರುವ ಸಾಧ್ಯತೆಯನ್ನು ಭಾರತೀಯ ಪ್ಯಾರಾಲಿಂಪಿಕ್ ಸಮಿತಿ (PCI) ಪರಿಶೀಲಿಸುತ್ತಿದೆ ಎಂದು ವರದಿಯಾಗಿದೆ.
ಭಾರತೀಯ ತಂಡದ ಮೂಲವೊಂದರ ಪ್ರಕಾರ, ಸೋಮವಾರ ಭಾರತೀಯ ಪ್ಯಾರಾ ಈಜು ತಂಡ ತಂಗಿದ್ದ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಶೇಖ್ ಅವರ ಕೊಠಡಿಯಲ್ಲಿ ಮಹಿಳಾ ಹೌಸ್‌ಕೀಪಿಂಗ್ ಸಿಬ್ಬಂದಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅಸಭ್ಯ ವರ್ತನೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಬಳಿಕ ಈ ಕುರಿತು ಸ್ಥಳೀಯ ಸಂಘಟನಾ ಸಮಿತಿ ಹಾಗೂ ಭಾರತೀಯ ತಂಡದ ಅಧಿಕಾರಿಗಳಿಗೆ ದೂರು ನೀಡಲಾಗಿದೆ.
ದೂರಿನ ಹಿನ್ನೆಲೆಯಲ್ಲಿ ಜಪಾನ್ ಪೊಲೀಸರು ಶೇಖ್ ಅವರನ್ನು ವಶಕ್ಕೆ ಪಡೆದಿದ್ದು, ಆರೋಪಿತ ಘಟನೆ ನಡೆದ ಮರುದಿನವಾದ ಮಂಗಳವಾರ ಭಾರತಕ್ಕೆ ವಾಪಸ್ ಕಳುಹಿಸಿದ್ದಾರೆ. ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ನಿಗದಿಯಾಗಿದ್ದ ಸ್ಪರ್ಧೆಗಳಲ್ಲಿ ಅವರು ಭಾಗವಹಿಸಬೇಕಿತ್ತು. ಆದರೆ, ಭಾರತಕ್ಕೆ ವಾಪಸ್ ಕಳುಹಿಸಿದ ಹಿನ್ನೆಲೆಯಲ್ಲಿ ಯಾವುದೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ.
ಕ್ರೀಡಾಕೂಟ ಮುಗಿದ ಬಳಿಕ ಪ್ರಕರಣವನ್ನು ಪರಿಶೀಲಿಸಿ ಕಠಿಣ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಜೀವಿತಾವಧಿ ನಿಷೇಧದ ಪ್ರಸ್ತಾಪವೂ ಇದೆ ಎನ್ನಲಾಗಿದ್ದು, ಈ ಕುರಿತು ಅಂತಿಮ ನಿರ್ಧಾರ ಇನ್ನೂ ಪ್ರಕಟವಾಗಿಲ್ಲ.
ಯಾರು ಈ ಶಮ್ಸ್ ಆಲಂ ಶೇಖ್?
ಬಿಹಾರ ಮೂಲದ 40 ವರ್ಷದ ಮೊಹಮ್ಮದ್ ಶಮ್ಸ್ ಆಲಂ ಶೇಖ್ ಭಾರತದ ಪರ ಹಲವು ಅಂತಾರಾಷ್ಟ್ರೀಯ ಪ್ಯಾರಾ ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ವರ್ಲ್ಡ್ ಪ್ಯಾರಾ ಸ್ವಿಮ್ಮಿಂಗ್ ದಾಖಲೆಗಳ ಪ್ರಕಾರ, ಪುರುಷರ 100 ಮೀಟರ್ ಬಟರ್‌ಫ್ಲೈ S5 ಮತ್ತು 50 ಮೀಟರ್ ಬ್ರೆಸ್ಟ್‌ಸ್ಟ್ರೋಕ್ SB4 ವಿಭಾಗಗಳಲ್ಲಿ ಅವರು ಈ ಹಿಂದೆ ವಿಶ್ವದ ನಂ.1 ಶ್ರೇಯಾಂಕ ಪಡೆದಿದ್ದರು.
2018ರಲ್ಲಿ ಜಕಾರ್ತಾದಲ್ಲಿ ನಡೆದ ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಅವರು, 200 ಮೀಟರ್ ಮತ್ತು 50 ಮೀಟರ್ ಬ್ರೆಸ್ಟ್‌ಸ್ಟ್ರೋಕ್ ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದರು. 2025ರಲ್ಲಿ ರೇಕ್ಯಾವಿಕ್ ಅಂತಾರಾಷ್ಟ್ರೀಯ ಕ್ರೀಡಾಕೂಟದ 200 ಮೀಟರ್ ಬ್ರೆಸ್ಟ್‌ಸ್ಟ್ರೋಕ್ ಸ್ಪರ್ಧೆಯಲ್ಲೂ ಚಿನ್ನದ ಪದಕ ಗೆದ್ದಿದ್ದರು. ಈ ವೇಳೆ ಭಾರತೀಯ ಮತ್ತು ಏಷ್ಯನ್ ದಾಖಲೆಗಳನ್ನು ನಿರ್ಮಿಸಿದ್ದರು ಎಂದು ವರದಿಯಾಗಿದೆ.