×
Ad

ಭಾರತದ ವಿಶ್ವಕಪ್ ವಿಜೇತ ತಂಡದಿಂದ ನ.5ರಂದು ಪ್ರಧಾನಮಂತ್ರಿ ಭೇಟಿ

Update: 2025-11-03 21:01 IST

 ನರೇಂದ್ರ ಮೋದಿ | PC : PTI 

ಹೊಸದಿಲ್ಲಿ, ನ.3: ಭಾರತದ ಮಹಿಳೆಯರ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯರು ಬುಧವಾರ ಹೊಸದಿಲ್ಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಲಿದ್ದಾರೆ.

ಹರ್ಮನ್‌ ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ತಂಡವು ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ತನ್ನ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಲೀಗ್ ಹಂತದಲ್ಲಿ ಸತತ ಮೂರು ಪಂದ್ಯಗಳಲ್ಲಿ ಸೋತ ನಂತರ ಈ ಮಹತ್ವದ ಸಾಧನೆ ಮಾಡಿದೆ.

ಪ್ರಧಾನಮಂತ್ರಿ ಕಚೇರಿಯು ಸೋಮವಾರ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ(ಬಿಸಿಸಿಐ) ಅಧಿಕೃತ ಆಹ್ವಾನ ಕಳುಹಿಸಿದೆ. ಆಟಗಾರ್ತಿಯರು ಸದ್ಯ ಮುಂಬೈನಲ್ಲಿದ್ದು, ಮಂಗಳವಾರ ಸಂಜೆ ರಾಷ್ಟ್ರ ರಾಜಧಾನಿಗೆ ಪ್ರಯಾಣಿಸುವ ನಿರೀಕ್ಷೆ ಇದೆ. ಪ್ರಧಾನಮಂತ್ರಿಯನ್ನು ಭೇಟಿಯಾದ ನಂತರ ತಮ್ಮ ಮನೆಗಳಿಗೆ ತೆರಳಲಿದ್ದಾರೆ ಎಂದು ‘ಸ್ಪೋರ್ಟ್ಸ್‌ಸ್ಟಾರ್’ ವರದಿ ಮಾಡಿದೆ.

ಈ ತನಕ ವಿಜಯೋತ್ಸವದ ಯೋಜನೆಯನ್ನು ರೂಪಿಸಲಾಗಿಲ್ಲ. ಮೊತ್ತ ಮೊದಲ ಬಾರಿ ಐಸಿಸಿ ಪ್ರಶಸ್ತಿ ಗೆದ್ದಿರುವ ಮಹಿಳೆಯರ ತಂಡಕ್ಕೆ ಬಿಸಿಸಿಐ 51 ಕೋಟಿ ರೂಪಾಯಿ ನೀಡಲು ನಿರ್ಧರಿಸಿದೆ. ಈ ಬಹುಮಾನ ಮೊತ್ತವನ್ನು ಆಟಗಾರರು, ಸಹಾಯಕ ಸಿಬ್ಬಂದಿ ಹಾಗೂ ರಾಷ್ಟ್ರೀಯ ಆಯ್ಕೆ ಸಮಿತಿಯು ಹಂಚಿಕೊಳ್ಳಲಿದೆ.

ಆಟಗಾರರು ಹಾಗೂ ಮುಖ್ಯ ಕೋಚ್ ಸುಮಾರು 2.5ರಿಂದ 3 ಕೋಟಿ ರೂಪಾಯಿ, ಸಹಾಯಕ ಕೋಚ್‌ ಗಳು ಹಾಗೂ ಸಹಾಯಕ ಸಿಬ್ಬಂದಿಯು ಸುಮಾರು 25ರಿಂದ 30 ಲಕ್ಷ ರೂ. ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News