ಜೈಪಾಲ್  | Photo Credit : X\ PTI 

ಹೊಸದಿಲ್ಲಿ, ನ. 6: ದೋಹಾದಲ್ಲಿ ನಡೆಯುತ್ತಿರುವ ISSF ವಿಶ್ವ ಚಾಂಪಿಯನ್‌ ಶಿಪ್ ನಲ್ಲಿ ಪುರುಷರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಜೈಪಾಲ್ ಮಾಳವೀಯ ಬೆಳ್ಳಿ ಪದಕ ಜಯಿಸಿದರು. ಈ ಗೆಲುವಿನೊಂದಿಗೆ ಭಾರತವು 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ಗಾಗಿ ಶೂಟಿಂಗ್ ಸ್ಪರ್ಧೆಯಲ್ಲಿ ತನ್ನ ಮೊದಲ ಕೋಟಾ ಸ್ಥಾನವನ್ನು ಖಾತರಿಪಡಿಸಿದೆ.

31ರ ವಯಸ್ಸಿನ ಜೈಪಾಲ್ ಗುರುವಾರ ನಡೆದ ಫೈನಲ್ನಲ್ಲಿ 242.2 ಅಂಕ ಗಳಿಸಿ ಎರಡನೇ ಸ್ಥಾನ ಪಡೆದರು. ಚೀನಾದ ಹು ಕಾಯ್ (243.9) ಚಿನ್ನದ ಪದಕ ಜಯಿಸಿದರೆ, ಝೆಕ್ ಗಣರಾಜ್ಯದ ಜಿನ್ಡ್ರಿಚ್ ಕಂಚಿನ ಪದಕ ಗೆದ್ದರು.

ಅರ್ಹತಾ ಸುತ್ತಿನಲ್ಲಿ 585 ಅಂಕ ಗಳಿಸಿ ಮೂರನೇ ಸ್ಥಾನ ಪಡೆದ ಮಾಳವೀಯ ಎಂಟು ಶೂಟರ್ ಗಳಿದ್ದ ಫೈನಲ್ಗೆ ಅರ್ಹತೆ ಪಡೆದಿದ್ದರು.

ಹಾಂಗ್ಝೌ ವಿಶ್ವಕಪ್ ನ ನಂತರ ಮಾಳವೀಯ ಸ್ಪರ್ಧಿಸುತ್ತಿರುವ ಎರಡನೇ ಅಂತರರಾಷ್ಟ್ರೀಯ ಟೂರ್ನಿ ಇದಾಗಿದೆ. ಅವರು ದೇಶೀಯ ಆಯ್ಕೆ ಟ್ರಯಲ್ಸ್ ಮೂಲಕ ಭಾರತೀಯ ತಂಡದಲ್ಲಿ ಸ್ಥಾನ ಪಡೆದಿದ್ದರು.

ಸ್ಪರ್ಧಾವಳಿಯಲ್ಲಿ 12 ವೈಯಕ್ತಿಕ ಶೂಟಿಂಗ್ ಸ್ಪರ್ಧೆಗಳಲ್ಲಿ ಒಟ್ಟು 36 ಒಲಿಂಪಿಕ್ಸ್ ಕೋಟಾ ಸ್ಥಾನಗಳಿದ್ದು, ಪ್ರತಿ ಸ್ಪರ್ಧೆಯಿಂದ ಮೂರು ಕೋಟಾ ಸ್ಥಾನಗಳು ಲಭಿಸಲಿವೆ. ಕೋಟಾಗಳನ್ನು ಅಥ್ಲೀಟ್ಗಳಿಗೆ ನೇರವಾಗಿ ನೀಡದೆ ರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಗೆ ನೀಡಲಾಗುತ್ತದೆ. ಮಾಳವೀಯ ಅವರ ಪ್ರದರ್ಶನದಿಂದ ಭಾರತವು ಪುರುಷರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಸ್ಥಾನ ಪಡೆದಿದೆ. 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ಗೆ ಶೂಟರ್ ಗಳ ಅಂತಿಮ ಆಯ್ಕೆಯನ್ನು ಬಳಿಕ ನಿರ್ಧರಿಸಲಾಗುತ್ತದೆ.

ಭಾರತವು ದೋಹಾದಲ್ಲಿ 54 ಸದಸ್ಯರನ್ನು ಕಣಕ್ಕಿಳಿಸಿದ್ದು, ಶೂಟರ್ ಗಳು ರೈಫಲ್, ಪಿಸ್ತೂಲ್ ಹಾಗೂ ಶಾಟ್ಗನ್ ಸ್ಪರ್ಧೆಗಳಲ್ಲಿ ಸ್ಪರ್ಧಿಸಲಿದ್ದಾರೆ.

2028ರ ಒಲಿಂಪಿಕ್ಸ್ ಜುಲೈ 14ರಿಂದ 30ರ ತನಕ ಅಮೆರಿಕದಲ್ಲಿ ನಡೆಯಲಿದೆ. 2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತವು ಶೂಟಿಂಗ್ ನಲ್ಲಿ 22 ಕೋಟಾ ಸ್ಥಾನಗಳನ್ನು ಗಿಟ್ಟಿಸಿಕೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor