ನ.7ರಂದು ಎರಡನೇ ಏಕದಿನ: ಭಾರತ-ಕಿವೀಸ್ ಮುಖಾಮುಖಿ
ಸತತ ಎರಡನೇ ಪಂದ್ಯಕ್ಕೂ ಮಳೆ ಭೀತಿ; ಆಕಿಬ್ ನಬಿ ಬದಲಿಗೆ ಸಿರಾಜ್?
Photo Credit ; PTI
ವೆಲ್ಲಿಂಗ್ಟನ್, ನ. 6: ಭಾರತ ಹಾಗೂ ಆತಿಥೇಯ ನ್ಯೂಝಿಲ್ಯಾಂಡ್ ಕ್ರಿಕೆಟ್ ತಂಡಗಳು ಶನಿವಾರ ಎರಡನೇ ಏಕದಿನ ಅಂತರರಾಷ್ಟ್ರೀಯ ಪಂದ್ಯವನ್ನಾಡಲು ಸಜ್ಜಾಗಿವೆ. ಸತತ ಎರಡನೇ ಪಂದ್ಯಕ್ಕೂ ಮಳೆ ಅಡ್ಡಿಪಡಿಸುವ ಸಾಧ್ಯತೆ ಅಧಿಕವಿದೆ.
ಶುಕ್ರವಾರ ಬೆಳಗ್ಗೆ ನಿರಂತರ ಗುಡುಗು-ಸಿಡಿಲು ಸಹಿತ ಮಳೆ ಸುರಿದಿದೆ. ಹೀಗಾಗಿ ಉಭಯ ತಂಡಗಳು ತಮ್ಮ ತರಬೇತಿಯ ಯೋಜನೆಗಳನ್ನು ಬದಲಿಸಬೇಕಾಯಿತು. ಪಂದ್ಯ ನಡೆಯುವ ಹೆನ್ರಿ ಸ್ಟೇಡಿಯಂ ಬದಲಿಗೆ ಬಾಸಿನ್ ರಿಸರ್ವ್ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಲು ತಂಡಗಳು ಯೋಜಿಸಿದ್ದವು. ಮಳೆಯಿಂದಾಗಿ ನ್ಯೂಝಿಲ್ಯಾಂಡ್ ತಂಡವು ವೆಲ್ಲಿಂಗ್ಟನ್ ಕಾಲೇಜಿನ ಒಳಾಂಗಣಕ್ಕೆ ತನ್ನ ಅಭ್ಯಾಸವನ್ನು ಸ್ಥಳಾಂತರಿಸಿತ್ತು. ಭಾರತವು ತನ್ನ ತರಬೇತಿಯನ್ನು ರದ್ದುಪಡಿಸಿ ಹೋಟೆಲ್ ರೂಮ್ನಲ್ಲಿ ಉಳಿದುಕೊಂಡಿತು.
ಅಕ್ಯುವೆದರ್ ಪ್ರಕಾರ ಶನಿವಾರ ಭಾರೀ ಮಳೆಯಾಗುವ ಮುನ್ಸೂಚನೆ ಇದೆ.
ಆಕ್ಲೆಂಡ್ನಲ್ಲಿ ನಡೆದಿದ್ದ ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯಕ್ಕೂ ಮಳೆ ಅಡ್ಡಿಯಾಗಿತ್ತು. ಪಂದ್ಯವು 10 ನಿಮಿಷ ತಡವಾಗಿ ಆರಂಭವಾಗಿತ್ತು. ಎರಡು ಬಾರಿ ಮಳೆ ಅಡ್ಡಿಪಡಿಸಿದ ನಂತರ ಭಾರತಕ್ಕೆ ಗೆಲ್ಲಲು 50 ಓವರ್ ಗಳಲ್ಲಿ 186 ರನ್ ಗಳ ಬದಲಿಗೆ 32 ಓವರ್ ಗಳಲ್ಲಿ 143 ರನ್ ಗಳ ಪರಿಷ್ಕೃತ ಗುರಿ ನೀಡಲಾಗಿತ್ತು.
ಭಾರತ ತಂಡವು ಈ ಪಂದ್ಯವನ್ನು ಐದು ವಿಕೆಟ್ಗಳ ಅಂತರದಿಂದ ಗೆದ್ದುಕೊಂಡು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ರನ್ ಚೇಸ್ ವೇಳೆ ಹಿರಿಯ ಬ್ಯಾಟರ್ ವಿರಾಟ್ ಕೊಹ್ಲಿ 51 ಎಸೆತಗಳಲ್ಲಿ 74 ರನ್ ಗಳಿಸಿದ್ದರು. 10 ಓವರ್ ಗಳಲ್ಲಿ 22 ರನ್ ಗಳಿಗೆ ಎರಡು ವಿಕೆಟ್ಗಳನ್ನು ಪಡೆದಿದ್ದ ಅನ್ಶುಲ್ ಕಾಂಬೋಜ್ ‘ಪಂದ್ಯಶ್ರೇಷ್ಠ’ ಪ್ರಶಸ್ತಿ ಪಡೆದಿದ್ದರು.
ಭಾರತದ ಟಿ-20 ತಂಡದಲ್ಲಿದ್ದ ಆಟಗಾರರು ಈಗಾಗಲೇ ನ್ಯೂಝಿಲ್ಯಾಂಡ್ನ ವಾತಾವರಣಕ್ಕೆ ಹೊಂದಿಕೊಂಡಿದ್ದಾರೆ.
►ಆಕಿಬ್ ನಬಿ ಬದಲಿಗೆ ಸಿರಾಜ್?
ಭಾರತ ‘ಎ’ ತಂಡದಲ್ಲಿ ಆಡುತ್ತಿದ್ದ ಹಿರಿಯ ವೇಗದ ಬೌಲರ್ ಸಿರಾಜ್ ಅವರು ವೆಲ್ಲಿಂಗ್ಟನ್ನಲ್ಲಿ ಟೀಮ್ ಇಂಡಿಯಾವನ್ನು ಸೇರಿಕೊಂಡಿದ್ದು, ಆಯ್ಕೆಗೆ ಲಭ್ಯವಿದ್ದಾರೆ. ಆಕಿಬ್ ನಬಿ ಅವರನ್ನು ಆಡಿಸಬೇಕೇ ಅಥವಾ ಸಿರಾಜ್ಗೆ ಅವಕಾಶ ನೀಡಬೇಕೇ ಎಂದು ಟೀಮ್ ಮ್ಯಾನೇಜ್ ಮೆಂಟ್ ನಿರ್ಧರಿಸಲಿದೆ.
‘‘ಸಿರಾಜ್ ತಂಡವನ್ನು ಸೇರಿದ್ದಾರೆ, ಆಯ್ಕೆಗೆ ಲಭ್ಯವಿದ್ದಾರೆ. ಅವರು ಆಡಬೇಕೋ, ಬೇಡವೋ ಎಂಬ ಕುರಿತು ಟೀಮ್ ಮ್ಯಾನೇಜ್ಮೆಂಟ್ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ’’ ಎಂದು ಫೀಲ್ಡಿಂಗ್ ಕೋಚ್ ಶುಭದೀಪ್ ಘೋಷ್ ಹೇಳಿದ್ದಾರೆ.
ಸರಣಿ ಆರಂಭವಾಗುವ ಮೊದಲು ಅನನುಭವಿ ಬೌಲರ್ ಗಳು ಹೆಚ್ಚು ಸುದ್ದಿಯಾಗಿದ್ದರು. ಮೊದಲ ಏಕದಿನ ಪಂದ್ಯದಲ್ಲಿ ಗುರ್ನೂರ್ ಬ್ರಾರ್, ಅನ್ಶುಲ್ ಕಾಂಬೋಜ್ ಹಾಗೂ ಅರ್ಷದೀಪ್ ಸಿಂಗ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ವೇಗದ ಬೌಲರ್ ಗಳನ್ನು ಉತ್ತಮವಾಗಿ ಎದುರಿಸಬಲ್ಲ ನ್ಯೂಝಿಲ್ಯಾಂಡ್ ಬ್ಯಾಟಿಂಗ್ ಸರದಿಯ ವಿರುದ್ಧ ಇದೇ ಮಟ್ಟದ ಪ್ರದರ್ಶನ ಕಾಯ್ದುಕೊಳ್ಳುವ ಅಗತ್ಯವಿದೆ.
ಹೆನ್ರಿ ಸ್ಟೇಡಿಯಂ ಕಿರಿದಾದ ಬೌಂಡರಿಗಳನ್ನು ಹೊಂದಿದೆ. ಕಳೆದ ಪಂದ್ಯದಲ್ಲಿ ಶಾರ್ಟ್ ಬಾಲ್ ಗೆ ಮೊರೆ ಹೋಗಿದ್ದ ಉಭಯ ತಂಡಗಳು ಅದರಲ್ಲಿ ಬದಲಾವಣೆ ಮಾಡಬೇಕಾಗಿದೆ.
ಮೊದಲ ಏಕದಿನ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ ಯಶಸ್ವಿ ಪ್ರದರ್ಶನ ನೀಡಿದ್ದರು. ಕಾಂಬೋಜ್ ಅತ್ಯಂತ ಮಿತವ್ಯಯಿ ಎನಿಸಿಕೊಂಡಿದ್ದರು. ಒಂದು ವೇಳೆ ಮುಹಮ್ಮದ್ ಸಿರಾಜ್ ಫಿಟ್ ಇದ್ದು, ಆಯ್ಕೆಗೆ ಲಭ್ಯವಿದ್ದರೆ ಆಕಿಬ್ ನಬಿ ಬದಲಿಗೆ ಆಡುವ ಬಳಗ ಸೇರಬಹುದು. ನಬಿ ಕಳೆದ ಪಂದ್ಯದಲ್ಲಿ ವಿಕೆಟ್ ಪಡೆದಿರಲಿಲ್ಲ.
ಭಾರತದ ಬ್ಯಾಟರ್ ಗಳಲ್ಲಿ ವಿರಾಟ್ ಕೊಹ್ಲಿ ಉತ್ತಮ ಫಾರ್ಮ್ನಲ್ಲಿದ್ದಾರೆ. ಮುಂದಿನ ವರ್ಷದ ವಿಶ್ವಕಪ್ಗಿಂತ ಮೊದಲು ರೋಹಿತ್ ಶರ್ಮಾ ಒಂದಷ್ಟು ರನ್ ಗಳಿಸುವ ವಿಶ್ವಾಸದಲ್ಲಿದ್ದಾರೆ. ಶ್ರೇಯಸ್ ಅಯ್ಯರ್ ಹಾಗೂ ಅಕ್ಷರ್ ಪಟೇಲ್ ಮೊದಲ ಪಂದ್ಯದಲ್ಲಿ ಶಾರ್ಟ್ ಎಸೆತವನ್ನು ದಿಟ್ಟವಾಗಿ ಎದುರಿಸುವಲ್ಲಿ ವಿಫಲರಾಗಿದ್ದರು.
ಮೊದಲ ಪಂದ್ಯದ ಅಭ್ಯಾಸದ ವೇಳೆ ಸಹ ಆಟಗಾರ ಹೆನ್ರಿಗೆ ಢಿಕ್ಕಿಯಾಗಿ ಗಾಯಗೊಂಡಿದ್ದ ಡೆವೊನ್ ಕಾನ್ವೆ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಸರಣಿಯಿಂದಲೇ ಹೊರಗುಳಿದಿದ್ದಾರೆ. ವೇಗಿ ಮ್ಯಾಟ್ ಹೆನ್ರಿ ಎರಡನೇ ಪಂದ್ಯವನ್ನಾಡಲು ಸಜ್ಜಾಗಿದ್ದಾರೆ.
ಪಂದ್ಯ ಆರಂಭದ ಸಮಯ: ಬೆಳಗ್ಗೆ 7:30
(ಭಾರತೀಯ ಕಾಲಮಾನ)