Photo Credit: sports.ndtv

ಡರ್ಹಮ್ (ಬ್ರಿಟನ್): ಶ್ರೀಲಂಕಾ ವಿರುದ್ಧ ಮಂಗಳವಾರ ಡರ್ಹಮ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಬ್ಯಾಟರ್ ಜೋ ರೂಟ್ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ.

ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 23,000 ರನ್ ಗಳಿಸಿದ ವಿಶ್ವದ ಎರಡನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ರೂಟ್ ಪಾತ್ರರಾಗಿದ್ದಾರೆ. ಅವರು ತನ್ನ 521ನೇ ಅಂತರ್‌ರಾಷ್ಟ್ರೀಯ ಇನಿಂಗ್ಸ್‌ನಲ್ಲಿ ಈ ಮೈಲಿಗಲ್ಲನ್ನು ತಲುಪಿದರು.

ಈ ಮೂಲಕ 35 ವರ್ಷದ ರೂಟ್, 522 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿರುವ ಭಾರತದ ದಿಗ್ಗಜ ಬ್ಯಾಟರ್ ಸಚಿನ್ ತೆಂಡುಲ್ಕರ್‌ರನ್ನು ಹಿಂದಿಕ್ಕಿದ್ದಾರೆ. ವಿರಾಟ್ ಕೊಹ್ಲಿ ಕೇವಲ 490 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡುವ ಮೂಲಕ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಈ ಮೈಲಿಗಲ್ಲು ತಲುಪಲು ಕೇವಲ ಮೂರು ರನ್‌ಗಳ ಅಗತ್ಯವಿದ್ದಾಗ, ಸೊಗಸಾದ ಬೌಂಡರಿಯೊಂದರ ಮೂಲಕ ರೂಟ್ ದಾಖಲೆ ಪುಸ್ತಕಕ್ಕೆ ಸೇರ್ಪಡೆಗೊಂಡರು.

ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ 23,000 ರನ್ ಗಡಿ ದಾಟಿದ ವಿಶ್ವದ ಎಂಟನೇ ಹಾಗೂ ಇಂಗ್ಲೆಂಡ್‌ನ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ರೂಟ್ ಪಾತ್ರರಾಗಿದ್ದಾರೆ. ಭಾರತದ ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ ಮತ್ತು ರಾಹುಲ್ ದ್ರಾವಿಡ್, ಶ್ರೀಲಂಕಾದ ಕುಮಾರ ಸಂಗಕ್ಕರ ಮತ್ತು ಮಹೇಲಾ ಜಯವರ್ಧನೆ, ಆಸ್ಟ್ರೇಲಿಯದ ರಿಕಿ ಪಾಂಟಿಂಗ್ ಮತ್ತು ದಕ್ಷಿಣ ಆಫ್ರಿಕಾದ ಜಾಕ್ ಕಾಲಿಸ್ ಈ ಸಾಧನೆ ಮಾಡಿದ ಇತರ ಆಟಗಾರರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor