FIFA ವಿಶ್ವಕಪ್ ಫೈನಲ್ ನಲ್ಲಿ ಸೋಲಿನ ಬೆನ್ನಲ್ಲೇ ಮೆಸ್ಸಿ ನಿವೃತ್ತಿ ಕುರಿತು ಚರ್ಚೆ; ಅರ್ಜೆಂಟೀನಾ ತಂಡದ ಮುಖ್ಯ ಕೋಚ್ ಹೇಳಿದ್ದೇನು?

Update: 2026-07-20 15:40 IST

ಲಿಯೋನೆಲ್ ಮೆಸ್ಸಿ | Photo Credit ; PTI 

ನ್ಯೂಯಾರ್ಕ್: ಇಂದು ನಡೆದ ಫಿಫಾ ವಿಶ್ವಕಪ್ ನಲ್ಲಿ ಸ್ಪೇನ್ ತಂಡದೆದುರು ಆಘಾತಕಾರಿಯಾಗಿ ಪರಾಭವಗೊಂಡ ಬಳಿಕ, ಅರ್ಜೆಂಟೀನಾ ನಾಯಕ ಲಿಯೋನೆಲ್ ಮೆಸ್ಸಿ ನಿವೃತ್ತರಾಗಲಿದ್ದಾರೆಯೇ ಎಂಬ ಚರ್ಚೆಗಳು ಭುಗಿಲೆದ್ದಿವೆ.

ನ್ಯೂಯಾರ್ಕ್ ನ ನ್ಯೂಜೆರ್ಸಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡ 0-1 ಅಂತರದಲ್ಲಿ ಸ್ಪೇನ್ ತಂಡದೆದುರು ಪರಾಭವಗೊಂಡಿತು. ಇದರ ಬೆನ್ನಿಗೇ, ಲಿಯೋನೆಲ್ ಮೆಸ್ಸಿಯ ನಿವೃತ್ತಿ ಕುರಿತ ಚರ್ಚೆಗಳು ಮುನ್ನೆಲೆಗೆ ಬಂದಿವೆ.

ಆದರೆ, ಲಿಯೋನೆಲ್ ಮೆಸ್ಸಿ ನಿವೃತ್ತಿಯ ವದಂತಿಗಳನ್ನು ಅಲ್ಲಗಳೆದಿರುವ ಅರ್ಜೆಂಟೀನಾ ತಂಡದ ಮುಖ್ಯ ಕೋಚ್ ಲಿಯೋನೆಲ್ ಸ್ಕಲೋನಿ, ಮೆಸ್ಸಿಯ ಭವಿಷ್ಯವನ್ನು ಸಂಪೂರ್ಣವಾಗಿ ಅವರೇ ನಿರ್ಧರಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಫೈನಲ್ ಪಂದ್ಯ ಮುಕ್ತಾಯಗೊಂಡ ಬಳಿಕ, 39 ವರ್ಷದ ಲಿಯೋನೆಲ್ ಮೆಸ್ಸಿಯನ್ನು ಪ್ರಶಂಸಿಸಿದ ಲಿಯೋನೆಲ್ ಸ್ಕಲೋನಿ, ಅವರು ಎಲ್ಲಿಯವರೆಗೂ ಬಯಸುತ್ತಾರೊ ಅಲ್ಲಿಯವರೆಗೂ ಅವರು ಆಡುವುದನ್ನು ಮುಂದುವರಿಸಲಿದ್ದಾರೆ ಎಂದು ಘೋಷಿಸಿದ್ದಾರೆ.

“ಅವರಿಗೆ 39 ವರ್ಷ ವಯಸ್ಸಾಗಿದೆ ಎಂಬುದನ್ನು ನಂಬಲೇ ಸಾಧ್ಯವಾಗುತ್ತಿಲ್ಲ. ನನ್ನ ಕಡೆಯಿಂದ ಹೊಸದಾಗಿ ಏನನ್ನೂ ಬಯಸಲು ಸಾಧ್ಯವಿಲ್ಲ. ಅವರು ತಾನು ನಿವೃತ್ತನಾಗಬೇಕು ಎಂದು ನಿರ್ಧರಿಸುವವರೆಗೂ ಅವರು ಆಡುವುದನ್ನು ಮುಂದುವರಿಸಲಿದ್ದಾರೆ ಎಂಬ ಸಂಗತಿ ನನಗೆ ಸ್ಫಟಿಕ ಸ್ಪಷ್ಟವಾಗಿದೆ. ಅದಕ್ಕೆ ಅವರ ತಂಡದ ಎಲ್ಲ ಸಹ ಆಟಗಾರರು, ತಂಡದ ಸಹೋದ್ಯೋಗಿಗಳು ಹಾಗೂ ಅವರನ್ನು ಇಷ್ಟಪಡುವ ಎಲ್ಲರೂ ಬೆಂಬಲ ನೀಡಲಿದ್ದಾರೆ” ಎಂದು ಅವರು ಹೇಳಿದ್ದಾರೆ.

“ಅವರು ಸಾರ್ವಕಾಲಿಕ ಶ್ರೇಷ್ಠ ಆಟಗಾರರಾಗಿದ್ದು, ಅವರ ಇಲ್ಲಿಯವರೆಗಿನ ಸಾಧನೆಯ ಬಗ್ಗೆ ಎಲ್ಲರೂ ಹೆಮ್ಮೆ ಪಡುತ್ತಾರೆ ಎಂಬ ಭರವಸೆ ನನಗಿದೆ” ಎಂದೂ ಅವರು ಹೇಳಿದ್ದಾರೆ ಎಂದು The Athletic ಸುದ್ದಿ ಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News