ಪುರುಷರ, ಮಹಿಳೆಯರ ಫಿಫಾ ವಿಶ್ವಕಪ್ ಟ್ರೋಫಿಗೆದ್ದ ಮೊದಲ ದೇಶ ಸ್ಪೇನ್
Photo credit : AP
ನ್ಯೂಜರ್ಸಿ, ಜು.20: ಸ್ಪೇನ್ ತಂಡವು ರವಿವಾರ ತಡರಾತ್ರಿ ಅರ್ಜೆಂಟೀನ ತಂಡವನ್ನು ಫೈನಲ್ ಪಂದ್ಯದಲ್ಲಿ 1-0 ಅಂತರದಿಂದ ಮಣಿಸಿ ಎರಡನೇ ಬಾರಿ ವಿಶ್ವಕಪ್ ಜಯಿಸಿತು. ಇದರೊಂದಿಗೆ ಸ್ಪೇನ್ ತಂಡವು ಪುರುಷರ ಹಾಗೂ ಮಹಿಳೆಯರ ವಿಶ್ವಕಪ್ ಪ್ರಶಸ್ತಿ ಗೆದ್ದ ಮೊದಲ ದೇಶವೆಂಬ ಹಿರಿಮೆಗೆ ಪಾತ್ರವಾಗಿದೆ.
ಮಹಿಳೆಯರ ಫುಟ್ಬಾಲ್ ತಂಡವು 2023ರ ಆವೃತ್ತಿಯ ಫಿಫಾ ವಿಶ್ವಕಪ್ ಫೈನಲ್ನಲ್ಲಿ ಇಂಗ್ಲೆಂಡ್ ತಂಡವನ್ನು 1-0 ಅಂತರದಿಂದ ಮಣಿಸಿ ಪ್ರಶಸ್ತಿ ಜಯಿಸಿತ್ತು.
ಎರಡು ಬಾರಿ ಬೆನ್ನುಬೆನ್ನಿಗೆ ಯುರೋ, ಫಿಫಾ ವಿಶ್ವಕಪ್ ಗೆದ್ದ ಮೊದಲ ತಂಡ ಸ್ಪೇನ್
ಎರಡನೇ ಬಾರಿ ವಿಶ್ವ ಚಾಂಪಿಯನ್ ಕಿರೀಟ ಧರಿಸಿರುವ ಸ್ಪೇನ್ ತಂಡವು ಮತ್ತೊಂದು ಮಹತ್ವದ ಸಾಧನೆ ಮಾಡಿದೆ.
ಎರಡು ವಿಭಿನ್ನ ಸಂದರ್ಭಗಳಲ್ಲಿ ಯುರೋ ಹಾಗೂ ವಿಶ್ವಕಪ್ ಟ್ರೋಫಿಗಳನ್ನು ಬೆನ್ನುಬೆನ್ನಿಗೆ ಗೆದ್ದಿರುವ ಮೊದಲ ತಂಡವೆಂಬ ಹಿರಿಮೆಗೆ ಸ್ಪೇನ್ ತಂಡ ಪಾತ್ರವಾಗಿದೆ. 2008ರಲ್ಲಿ ಯುರೋ ಹಾಗೂ 2010ರಲ್ಲಿ ವಿಶ್ವಕಪ್ ಟ್ರೋಫಿಯನ್ನು ಜಯಿಸಿದ್ದ ಸ್ಪೇನ್ ಮೊದಲ ಬಾರಿ ಈ ಸಾಧನೆ ಮಾಡಿತ್ತು.
ಪಶ್ಚಿಮ ಜರ್ಮನಿ( 1972ರಲ್ಲಿ ಯುರೋ, 1974ರಲ್ಲಿ ವಿಶ್ವಕಪ್)ಹಾಗೂ ಫ್ರಾನ್ಸ್(1998ರಲ್ಲಿ ವಿಶ್ವಕಪ್, 2000ರಲ್ಲಿ ಯುರೋ)ಈ ಸಾಧನೆ ಮಾಡಿದ ಇತರ ದೇಶಗಳಾಗಿವೆ. ಆದರೆ ಇದೀಗ ಸ್ಪೇನ್ ತಂಡ ಮಾತ್ರ ಎರಡೆರಡು ಬಾರಿ ಈ ಸಾಧನೆ ಮಾಡಿದೆ.
ಅಂಕಿ-ಅಂಶಗಳು
2: ಸ್ಪೇನ್ ತಂಡವು 2010ರ ನಂತರ ಎರಡನೇ ಬಾರಿ ಫಿಫಾ ವಿಶ್ವಕಪ್ ಪ್ರಶಸ್ತಿ ಜಯಿಸಿದೆ. ಒಂದಕ್ಕಿಂತ ಹೆಚ್ಚು ವಿಶ್ವಕಪ್ ಟ್ರೋಫಿಗಳನ್ನು ಗೆದ್ದ ಏಳನೇ ತಂಡವಾಗಿದೆ.
2: ಸ್ಪೇನ್ ತಂಡ ಫಿಫಾ ವಿಶ್ವಕಪ್ ಗೆದ್ದ ಮೂರನೇ ಹಾಲಿ ಯುರೋ ಚಾಂಪಿಯನ್ ಆಗಿದೆ.
3: ಫೆರನ್ ಟೊರಿಸ್ ತನ್ನ ವೃತ್ತಿಜೀವನದಲ್ಲಿ ಮೂರನೇ ವಿಶ್ವಕಪ್ ಗೋಲು ಗಳಿಸಿದರು. ಪ್ರಸಕ್ತ ಟೂರ್ನಿಯಲ್ಲಿ ಮೊದಲ ಗೋಲು ಗಳಿಸಿದರು. 2022ರಲ್ಲಿ ಕೋಸ್ಟರಿಕಾ ತಂಡದ ವಿರುದ್ಧ ಎರಡು ಗೋಲು ಗಳಿಸಿದ್ದರು.
7: ಸ್ಪೇನ್ ಪ್ರಸಕ್ತ ವಿಶ್ವಕಪ್ನಲ್ಲಿ ಏಳು ಕ್ಲೀನ್ ಶೀಟ್ಗಳನ್ನು ಸಾಧಿಸಿದೆ. ಒಂದೇ ಟೂರ್ನಮೆಂಟ್ನಲ್ಲಿ ಅತಿ ಹೆಚ್ಚು ಬಾರಿ ಈ ಸಾಧನಗೈದು ದಾಖಲೆ ನಿರ್ಮಿಸಿದೆ.
1: ಸ್ಪೇನ್ ತಂಡವು ಇಡೀ ಟೂರ್ನಿಯಲ್ಲಿ ಕೇವಲ ಒಂದು ಗೋಲು(ಬೆಲ್ಜಿಯಮ್ ವಿರುದ್ಧ್ದ)ಬಿಟ್ಟುಕೊಟ್ಟಿದೆ.
38: ಸ್ಪೇನ್ ತಂಡವು ಎಲ್ಲ ಸ್ಪರ್ಧಾವಳಿಗಳಲ್ಲಿ ಅಜೇಯ ಗೆಲುವಿನ ಓಟವನ್ನು 38 ಪಂದ್ಯಗಳಿಗೆ ವಿಸ್ತರಿಸಿದೆ. ಇಟಲಿಯ ಸಾರ್ವಕಾಲಿಕ ದಾಖಲೆಯನ್ನು(2018-21ರಲ್ಲಿ 37 ಪಂದ್ಯ)ಮುರಿದಿದೆ.
6/7: ಸ್ಪೇನ್ ತಂಡವು ಏಳು ಪ್ರಮುಖ ಟೂರ್ನಮೆಂಟ್ನ ಫೈನಲ್ ಪಂದ್ಯಗಳ ಪೈಕಿ ಆರರಲ್ಲಿ ಜಯ ಸಾಧಿಸಿದೆ. ಯುರೋಪ್ ದೇಶಗಳ ಪೈಕಿ ಜರ್ಮನಿ ಮಾತ್ರ(7)ಅತಿ ಹೆಚ್ಚು ಪ್ರಮುಖ ಪ್ರಶಸ್ತಿಗಳನ್ನು ಎತ್ತಿಹಿಡಿದಿದೆ.
65: ಲೂಯಿಸ್ ಡೆ ಲಾ ಫ್ಯುಯೆಂಟ್(65 ವರ್ಷ)ವಿಶ್ವಕಪ್ ಗೆದ್ದ ಹಿರಿಯ ವಯಸ್ಸಿನ ಕೋಚ್ ಆಗಿದ್ದಾರೆ.
14/15: ಸ್ಪೇನ್ ತಂಡವು ವಿಶ್ವಕಪ್ ಹಾಗೂ ಯುರೋ ಟೂರ್ನಿಗಳಲ್ಲಿ 15 ಪಂದ್ಯಗಳ ಪೈಕಿ 14ರಲ್ಲಿ ಜಯ ಸಾಧಿಸಿದೆ. ಕೇಪ್ ವರ್ಡ್(0-0 ಡ್ರಾ)ತಂಡವನ್ನು ಮಾತ್ರ ಮಣಿಸಲು ವಿಫಲವಾಗಿದೆ.
19: ಲಾಮಿನ್ ಯಮಾಲ್(19 ವರ್ಷ,6 ದಿನ)ಫಿಫಾ ವಿಶ್ವಕಪ್ ಗೆದ್ದ ನಾಲ್ಕನೇ ಯುವ ಆಟಗಾರನಾಗಿದ್ದಾರೆ. ಪೌ ಕುಬರ್ಸೀ(19 ವರ್ಷ, 178 ದಿನ)ಅವರು ಏಳನೇ ಕಿರಿಯ ಆಟಗಾರನಾಗಿದ್ದಾರೆ. ಯಮಾಲ್ ಫಿಫಾ ವಿಶ್ವಕಪ್ ಫೈನಲ್ನಲ್ಲಿ ಆಡಿದ ಮೂರನೇ ಕಿರಿಯ ವಯಸ್ಸಿನ ಆಟಗಾರನಾಗಿದ್ದಾರೆ.
1: ಯಮಾಲ್ ಅವರು ಯುರೋಸ್ ಹಾಗೂ ಫಿಫಾ ವಿಶ್ವಕಪ್ ಗೆದ್ದಿರುವ ಮೊತ್ತ ಮೊದಲ ಕಿರಿಯ ವಯಸ್ಸಿನ ಆಟಗಾರನಾಗಿದ್ದಾರೆ.
10: ಫ್ಯಾಬಿಯನ್ ರುಯಿಝ್ ಒಂದೇ ಋತುವಿನಲ್ಲಿ ವಿಶ್ವಕಪ್ ಹಾಗೂ ಯುಇಎಫ್ಎ ಚಾಂಪಿಯನ್ಸ್ ಲೀಗ್ ಜಯಿಸಿದ 10ನೇ ಆಟಗಾರನಾಗಿದ್ದಾರೆ.
112: ಕುಬರ್ಸೀ 121 ಪಾಸ್ಗಳನ್ನು ಪೂರ್ಣಗೊಳಿಸಿದರು, ಹಿಂದಿನ 60 ವರ್ಷಗಳಲ್ಲಿ ಫಿಫಾ ವಿಶ್ವಕಪ್ ಫೈನಲ್ನಲ್ಲಿ ಎರಡನೇ ಶ್ರೇಷ್ಠ ಸಾಧನೆ ಇದಾಗಿದೆ. 1994ರಲ್ಲಿ ಬ್ರೆಝಿಲ್ನ ಡುಂಗಾ 130 ಪಾಸ್ ಪೂರ್ಣಗೊಳಿಸಿದ್ದರು.
1: ರೋಡ್ರಿ ಫಿಫಾ ವಿಶ್ವಕಪ್ನಲ್ಲಿ ‘ಗೋಲ್ಡನ್ ಬಾಲ್’ ಗೆದ್ದಿರುವ ಸ್ಪೇನ್ನ ಮೊದಲ ಆಟಗಾರನಾಗಿದ್ದಾರೆ. ಕುಬರ್ಸೀ ಫಿಫಾ ವಿಶ್ವಕಪ್ ಶ್ರೇಷ್ಠ ಯುವ ಆಟಗಾರ ಪ್ರಶಸ್ತಿ ಜಯಿಸಿದ ಮೊದಲ ಸ್ಪೇನ್ ಆಟಗಾರ ಎನಿಸಿಕೊಂಡರು.
2: ಉನೈ ಸೀಮೋನ್ ಅವರು ಫಿಫಾ ವಿಶ್ವಕಪ್ನಲ್ಲಿ ‘ಗೋಲ್ಡನ್ ಗ್ಲವ್’ ಗೆದ್ದಿರುವ ಸ್ಪೇನ್ನ ಎರಡನೇ ಆಟಗಾರನಾಗಿದ್ದಾರೆ.
4: ಫೈನಲ್ಗೆ ತಲುಪಿದ ಹಿಂದಿನ ನಾಲ್ಕು ಹಾಲಿ ಚಾಂಪಿಯನ್ ತಂಡಗಳು ರನ್ನರ್ ಅಪ್ಗೆ ತೃಪ್ತಿಪಟ್ಟುಕೊಂಡಿವೆ. 1990ರಲ್ಲಿ ಅರ್ಜೆಂಟೀನ, 1998ರಲ್ಲಿ ಬ್ರೆಝಿಲ್, 2022ರಲ್ಲಿ ಫ್ರಾನ್ಸ್, ಇದೀಗ 2026ರಲ್ಲಿ ಅರ್ಜೆಂಟೀನ ಎರಡನೇ ಸ್ಥಾನ ಪಡೆದಿದೆ.
3/4: ಅರ್ಜೆಂಟೀನ ತಂಡವು ಹಿಂದಿನ ನಾಲ್ಕು ಫಿಫಾ ವಿಶ್ವಕಪ್ ಫೈನಲ್ ಪಂದ್ಯಗಳಲ್ಲಿ ಮೂರು ಬಾರಿ ರನ್ನರ್ಸ್ ಅಪ್ ಆ ಗಿದೆ.
13: ವಿಶ್ವಕಪ್ ಟೂರ್ನಿಯಲ್ಲಿ ಅರ್ಜೆಂಟೀನ ತಂಡದ ಸತತ 13 ಪಂದ್ಯಗಳ ಗೆಲುವಿನ ಓಟಕ್ಕೆ ತೆರೆ ಬಿದ್ದಿದೆ. 2022ರಲ್ಲಿ ಸೌದಿ ಅರೇಬಿಯ ತಂಡದ ವಿರುದ್ಧ ವಿಶ್ವಕಪ್ ಪಂದ್ಯದಲ್ಲಿ ತನ್ನ ಗೆಲುವಿನ ಓಟ ಆರಂಭಿಸಿತ್ತು.
1: ಕಳೆದ 60 ವರ್ಷಗಳಲ್ಲಿ ವಿಶ್ವಕಪ್ ಫೈನಲ್ನಲ್ಲಿ ಗುರಿಯತ್ತ ಶೂನ್ಯ ಹೊಡೆತಗಳನ್ನು ದಾಖಲಿಸಿದ ಏಕೈಕ ತಂಡ ಅರ್ಜೆಂಟೀನ. ಮೂರನೇ ಬಾರಿ(1990,2014,2026)ಈ ಕಳಪೆ ಸಾಧನೆ ಮಾಡಿದೆ.
1: ಮೂರು ಫಿಫಾ ವಿಶ್ವಕಪ್ ಫೈನಲ್ಗಳಲ್ಲಿ ತನ್ನ ತಂಡದ ನಾಯಕತ್ವ ವಹಿಸಿದ ಮೊದಲಿಗ ಲಿಯೊನೆಲ್ ಮೆಸ್ಸಿ
11: ಎಮಿಲಿಯಾನೊ ಮಾರ್ಟಿನೆಝ್ ಸ್ಪೇನ್ ವಿರುದ್ಧ 11 ಗೋಲುಗಳನ್ನು ಉಳಿಸಿದರು. ಹಿಂದಿನ 60 ವರ್ಷಗಳಲ್ಲಿ ವಿಶ್ವಕಪ್ ಫೈನಲ್ನಲ್ಲಿ ಗೋಲ್ಕೀಪರ್ನ ಶ್ರೇಷ್ಠ ಸಾಧನೆ ಇದಾಗಿದೆ.
6: ಎಂರೊ ಫೆರ್ನಾಂಡಿಸ್ ವಿಶ್ವಕಪ್ ಟೂರ್ನಿಯ ಫೈನಲ್ನಲ್ಲಿ ರೆಡ್ ಕಾರ್ಡ್ ಪಡೆದ ಅರನೇ ಆಟಗಾರನಾಗಿದ್ದಾರೆ.
1: ಕೈಲಿಯನ್ ಎಂಬಾಪೆ ಎರಡು ವಿಶ್ವಕಪ್ ಟೂರ್ನಿಗಳಲ್ಲಿ(2022, 2026)‘ಗೋಲ್ಡನ್ ಬೂಟ್‘(ಟಾಪ್ ಸ್ಕೋರರ್)ಗೆದ್ದಿರುವ ಮೊದಲ ಆಟಗಾರನಾಗಿದ್ದಾರೆ.