ಡಬ್ಲ್ಯುಟಿಟಿ ಸ್ಟಾರ್ ಕಂಟೆಂಡರ್ ಟೂರ್ನಿ | ಕ್ವಾರ್ಟರ್ ಫೈನಲ್ ನಲ್ಲಿ ಮುಗ್ಗಿರಿಸಿದ ಮಣಿಕಾ ಬಾತ್ರಾ
ಮಣಿಕಾ ಬಾತ್ರಾ - Photo Credit: RAVINDRAN R
ಬ್ರಸಿಲಿಯಾ, ಆ.3: ಭಾರತದ ಟೇಬಲ್ ಟೆನಿಸ್ ಆಟಗಾರ್ತಿ ಮಣಿಕಾ ಬಾತ್ರಾ ಡಬ್ಲ್ಯುಟಿಟಿ ಸ್ಟಾರ್ ಕಂಟೆಂಡರ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಪಾನ್ ಆಟಗಾರ್ತಿ ಹೊನೊಕಾ ಹಶಿಮೊಟೊ ವಿರುದ್ಧ ಸೋತಿದ್ದಾರೆ.
ಬ್ರೆಝಿಲ್ನಲ್ಲಿ ಶನಿವಾರ ಕೇವಲ 28 ನಿಮಿಷಗಳಲ್ಲಿ ಕೊನೆಗೊಂಡ ಮಹಿಳೆಯರ ಸಿಂಗಲ್ಸ್ ವಿಭಾಗದ ಅಂತಿಮ-8ರ ಸುತ್ತಿನ ಪಂದ್ಯದಲ್ಲಿ ಮಣಿಕಾ ಅವರು ಹೊಶಿಮೊಟೊ ವಿರುದ್ಧ 0-3(7-11, 6-11, 7-11)ಅಂತರದಿಂದ ಸೋತಿದ್ದಾರೆ.
ಭಾರತೀಯ ಆಟಗಾರ್ತಿಯು ದಕ್ಷಿಣ ಕೊರಿಯಾದ ಕಿಮ್ ನಯೊಂಗ್ರನ್ನು 3-2 ಅಂತರದಿಂದ ಮಣಿಸುವ ಮೂಲಕ ಅಂತಿಮ-8ರ ಘಟ್ಟ ತಲುಪಿದ್ದರು.
ಪುರುಷರ ಡಬಲ್ಸ್ ಫೈನಲ್ ಪಂದ್ಯದಲ್ಲಿ ಭಾರತದ ಅಗ್ರ ಶ್ರೇಯಾಂಕದ ಜೋಡಿ ಮನುಶ್ ಶಾ ಹಾಗೂ ಮಾನವ್ ಥಕ್ಕರ್ ಅವರು ವೀರೋಚಿತ ಸೋಲುಂಡಿದ್ದಾರೆ.
42 ನಿಮಿಷಗಳಲ್ಲಿ ಕೊನೆಗೊಂಡಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಶಾ-ಥಕ್ಕರ್ ಜೋಡಿ ಜರ್ಮನಿಯ ಎರಡನೇ ಶ್ರೇಯಾಂಕದ ಬೆನೆಡಿಕ್ ಡುಡಾ ಹಾಗೂ ಡಾಂಗ್ ಕ್ಸಿಯು ವಿರುದ್ಧ 2-3(3-11, 11-7, 7-11, 15-13, 5-11)ಅಂತರದಿಂದ ಸೋತಿದ್ದಾರೆ. ಕಳೆದ ಜೂನ್ನಲ್ಲಿ ನಡೆದಿದ್ದ ಡಬ್ಲ್ಯುಟಿಟಿ ಕಂಟೆಂಡರ್ ಟೂರ್ನಿಯಲ್ಲೂ ಶಾ ಹಾಗೂ ಥಕ್ಕರ್ 2ನೇ ಸ್ಥಾನ ಪಡೆದಿದ್ದರು.
ಇದಕ್ಕೂ ಮೊದಲು ನಡೆದ ಪುರುಷರ ಡಬಲ್ಸ್ ವಿಭಾಗದ ಸೆಮಿ ಫೈನಲ್ ನಲ್ಲಿ ಭಾರತೀಯ ಜೋಡಿ ಚೈನೀಸ್ ತೈಪೆಯ ಹ್ವಾಂಗ್ ಯಾನ್-ಚೆಂಗ್ ಹಾಗೂ ಕುವೊ ಗ್ವಾನ್-ಹಾಂಗ್ರನ್ನು 3-2(5-11, 11-9, 11-6, 8-11, 11-5)ಅಂತರದಿಂದ ಸೋಲಿಸಿದ್ದರು.