ನೀರಜ್ ಚೋಪ್ರಾ ದಾಖಲೆ ಮುರಿದ ಬ್ರೆಝಿಲ್ ನ ಮೌರಿಸಿಯೊ
ಲೂಯಿಝ್ ಮೌರಿಸಿಯೊ | PC : X
ಸಾವೊಪೌಲೊ, ಆ.4: ಬ್ರೆಝಿಲ್ ನ ಜಾವೆಲಿನ್ ಎಸೆತಗಾರ ಲೂಯಿಝ್ ಮೌರಿಸಿಯೊ 2025ರ ಆವೃತ್ತಿಯ ಬ್ರೆಝಿಲಿಯನ್ ಅತ್ಲೆಟಿಕ್ಸ್ ಟ್ರೋಫಿಯಲ್ಲಿ 91 ಮೀ.ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ನೀರಜ್ ಚೋಪ್ರಾ ಅವರ ದಾಖಲೆಯನ್ನು ಮುರಿದರು.
ಲೂಯಿಝ್ ತನ್ನ ಮೊದಲ ಪ್ರಯತ್ನದಲ್ಲೇ ವೈಯಕ್ತಿಕ ಶ್ರೇಷ್ಠ ಪ್ರದರ್ಶನ(90.68 ಮೀ.)ನೀಡಿದರು. ತನ್ನ ಹಿಂದಿನ ದಾಖಲೆ(86.62 ಮೀ.)ಯನ್ನು ಉತ್ತಮಪಡಿಸಿಕೊಂಡರು. ತನ್ನ್ನೆಲ್ಲಾ ಸ್ಪರ್ಧಾಳುಗಳನ್ನು ಹಿಂದಿಕ್ಕಿದ ಮೌರಿಸಿಯೊ ಅವರು ಪ್ರಶಸ್ತಿಯನ್ನು ಗೆದ್ದದ್ದಾರೆ. ಪೆಡ್ರೊ ಹೆನ್ರಿಕ್ 2ನೇ ಸ್ಥಾನ ಪಡೆದರು.
ನೀರಜ್ ಅವರು ಈ ವರ್ಷಾರಂಭದಲ್ಲಿ ದೋಹಾ ಡೈಮಂಡ್ ಲೀಗ್‌ನಲ್ಲಿ 90.23 ಮೀ.ದೂರ ಜಾವೆಲಿನ್ ಎಸೆಯುವ ಮೂಲಕ ತನ್ನ ವೈಯಕ್ತಿಕ ಶ್ರೇಷ್ಠ ಪ್ರದರ್ಶನ ನೀಡಿದ್ದಲ್ಲದೆ, ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿದ್ದರು.
ಇದೀಗ ಚೋಪ್ರಾ ಅವರ ದಾಖಲೆಯನ್ನು ಮುರಿದಿರುವ ಮೌರಿಸಿಯೊ ಅವರು ಬ್ರೆಝಿಲ್ ತಂಡವನ್ನು ಅತ್ಲೀಟ್ ಗಳ ನಕ್ಷೆಯಲ್ಲಿ ಇರಿಸಿದ್ದಾರೆ.
‘‘ಇದೊಂದು ಐತಿಹಾಸಿಕ, ಬ್ರೆಝಿಲ್ ನಲ್ಲಿ ಈ ಸಾಧನೆ ಮಾಡಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ. ಇತಿಹಾಸದ ಪುಟದ ಭಾಗವಾಗಿರುವುದಕ್ಕೆ ನಿಜವಾಗಿಯೂ ಖುಷಿಯಾಗುತ್ತಿದೆ. ಈ ಖುಷಿಯನ್ನು ಬಣ್ಣಿಸಲು ಸಾಧ್ಯವಾಗುತ್ತಿಲ್ಲ. ನಾನು ಯಾವಾಗಲೂ 90 ಮೀ. ತಲುಪುವ ಗುರಿ ಇಟ್ಟುಕೊಂಡಿದ್ದೆ. ಕೆಲವೇ ಅತ್ಲೀಟ್ ಗಳು ಈ ಸಾಧನೆ ಮಾಡಿದ್ದಾರೆ’’ ಎಂದು ಪಂದ್ಯ ಗೆದ್ದ ನಂತರ ಮೌರಿಸಿಯೊ ಹೇಳಿದ್ದಾರೆ.
ಈ ಸಾಧನೆಯ ಮೂಲಕ ಮೌರಿಸಿಯೊ ಅವರು ಸಾರ್ವಕಾಲಿಕ ಶ್ರೇಷ್ಠ ಟಾಪ್-20ರಲ್ಲಿ ಸ್ಥಾನ ಪಡೆದಿದ್ದಾರೆ. 2025ರ ಋತುವಿನಲ್ಲಿ ಜುಲಿಯನ್ ವೆಬೆರ್ ನಂತರ ಈ ಸಾಧನೆ ಮಾಡಿದ 2ನೇ ಅತ್ಲೀಟ್ ಆಗಿದ್ದಾರೆ.
25ರ ಹರೆಯದ ಮೌರಿಸಿಯೊ 2024ರ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ನಲ್ಲಿ ಫೈನಲ್ ಗೆ ತಲುಪಿದ ಬ್ರೆಝಿಲ್ ನ ಮೊದಲ ಆಟಗಾರ ಎನಿಸಿಕೊಂಡಿದ್ದರು. 80.67 ಮೀ.ದೂರ ಜಾವೆಲಿನ್ ಎಸೆದು 11ನೇ ಸ್ಥಾನ ಪಡೆದಿದ್ದರು.