ಬ್ರೆಂಡನ್ ಟೇಲರ್ | Photo Credit: timesofindia

ಅಬುಧಾಬಿ, ಅ.18: ಏಕದಿನ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಝಿಂಬಾಬ್ವೆ ಪರ ಗರಿಷ್ಠ ರನ್ ಗಳಿಸಿರುವ ಬ್ರೆಂಡನ್ ಟೇಲರ್, ಆ್ಯಂಡಿ ಫ್ಲವರ್ ಅವರ ದಾಖಲೆಯನ್ನು ಮುರಿದರು.

ಶನಿವಾರ ಅಬುಧಾಬಿಯಲ್ಲಿ ನಡೆದ ತ್ರಿಕೋನ ಏಕದಿನ ಸರಣಿಯ ಆರಂಭಿಕ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ನಿರ್ಣಾಯಕ 81 ರನ್ ಗಳಿಸುವ ಮೂಲಕ ಟೇಲರ್ ಈ ಸಾಧನೆ ಮಾಡಿದರು.

ಟೇಲರ್ ಹಾಗೂ ಕ್ರೆಗ್ ಎರ್ವಿನ್ (93 ರನ್) ಝಿಂಬಾಬ್ವೆ ತಂಡವು ಆರಂಭಿಕ ಕುಸಿತದಿಂದ ಚೇತರಿಸಿಕೊಂಡು 8 ವಿಕೆಟ್‌ಗಳ ನಷ್ಟಕ್ಕೆ 271 ರನ್ ಗಳಿಸಲು ನೆರವಾದರು. ಝಿಂಬಾಬ್ವೆ ಬೌಲರ್‌ಗಳು ಬಾಂಗ್ಲಾದೇಶ ತಂಡವನ್ನು 33.4 ಓವರ್‌ ಗಳಲ್ಲಿ 172 ರನ್‌ ಗಳಿಗೆ ನಿಯಂತ್ರಿಸಿದರು. ಇದರಿಂದ ತಂಡ 99 ರನ್‌ಗಳ ಅಂತರದಿಂದ ಪಂದ್ಯ ಗೆದ್ದಿತು.

40ರ ವಯಸ್ಸಿನ ಟೇಲರ್ 101 ಎಸೆತಗಳಲ್ಲಿ 10 ಬೌಂಡರಿಗಳ ನೆರವಿನಿಂದ 81 ರನ್ ಗಳಿಸಿ ಮಹತ್ವದ ಮೈಲಿಗಲ್ಲು ತಲುಪಿದರು. ಟೇಲರ್ 211 ಏಕದಿನ ಪಂದ್ಯಗಳಲ್ಲಿ 6,837 ರನ್ ಗಳಿಸಿದ್ದಾರೆ. ಇದರೊಂದಿಗೆ 213 ಪಂದ್ಯಗಳಲ್ಲಿ 6,786 ರನ್ ಗಳಿಸಿದ್ದ ಫ್ಲವರ್ ಅವರ ದಾಖಲೆಯನ್ನು ಮುರಿದರು. ಟೇಲರ್ ತಮ್ಮ ದಾಖಲೆಯ ಇನಿಂಗ್ಸ್ ಮೂಲಕ ಆರು ವರ್ಷಗಳ ಬಳಿಕ ಮೊದಲ ಅರ್ಧಶತಕ ಗಳಿಸಿದರು.

ಟಾಸ್ ಜಯಿಸಿದ ಝಿಂಬಾಬ್ವೆ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಬಾಂಗ್ಲಾದೇಶದ ವೇಗದ ಬೌಲರ್ ತಸ್ಕಿನ್ ಅಹ್ಮದ್ ಝಿಂಬಾಬ್ವೆಯ ಅಗ್ರ ಸರದಿಗೆ ಸವಾಲಾದರು. ತಸ್ಕಿನ್ ಮೊದಲ ಏಳು ಓವರ್‌ಗಳೊಳಗೆ ಮೂವರು ಬ್ಯಾಟರ್‌ಗಳ ವಿಕೆಟ್ ಉರುಳಿಸಿದ್ದರಿಂದ ಝಿಂಬಾಬ್ವೆ 24 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿತು.

ಆಗ ಜೊತೆಯಾದ ಟೇಲರ್ ಹಾಗೂ ಎರ್ವಿನ್ ನಾಲ್ಕನೇ ವಿಕೆಟ್‌ಗೆ 150 ರನ್‌ಗಳ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಅನುಭವಿ ಬ್ಯಾಟಿಂಗ್ ಜೋಡಿಯು ಬಾಂಗ್ಲಾದೇಶದ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ಎದುರಿಸಿ ಪಂದ್ಯವನ್ನು ಝಿಂಬಾಬ್ವೆ ಪರ ವಾಲಿಸಿತು.

ಟೇಲರ್ 81 ರನ್ ಗಳಿಸಿ ಸೈಫ್ ಹಸನ್‌ಗೆ ವಿಕೆಟ್ ಒಪ್ಪಿಸಿದರು. ಝಿಂಬಾಬ್ವೆ ತಂಡದ ನಾಯಕ ಎರ್ವಿನ್ 106 ಎಸೆತಗಳಲ್ಲಿ 9 ಬೌಂಡರಿಗಳ ಸಹಿತ 93 ರನ್ ಗಳಿಸಿ ಕೇವಲ 7 ರನ್‌ಗಳಿಂದ ಶತಕ ವಂಚಿತರಾದರು. ನ್ಯೂಮ್ಯಾನ್ (ಔಟಾಗದೆ 21) ಹಾಗೂ ವೆಲ್ಲಿಂಗ್ಟನ್ ಮಸಕಝ (ಔಟಾಗದೆ 21) ಝಿಂಬಾಬ್ವೆ ತಂಡವು 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 271 ರನ್ ಗಳಿಸಲು ನೆರವಾದರು.

ತಸ್ಕಿನ್ ಅಹ್ಮದ್ 44 ರನ್‌ಗಳಿಗೆ ಮೂರು ವಿಕೆಟ್ ಪಡೆದರೆ, ಶರೀಫುಲ್ 47 ರನ್ ನೀಡಿ ಎರಡು ವಿಕೆಟ್ ಪಡೆದರು.

ಗೆಲ್ಲಲು 272 ರನ್‌ಗಳ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡಕ್ಕೆ ತಂಝೀದ್ ಹಸನ್ (46 ರನ್, 38 ಎಸೆತ) ಬಿರುಸಿನ ಆರಂಭ ನೀಡಿದರು. ಆದರೆ, ಝಿಂಬಾಬ್ವೆ ತಂಡವು ಸೌಮ್ಯ ಸರ್ಕಾರ್ ಅವರ ವಿಕೆಟ್ ಉರುಳಿಸಿ ಆಘಾತ ನೀಡಿತು.

ಝಿಂಬಾಬ್ವೆ ಬೌಲರ್‌ಗಳು ವಾತಾವರಣದ ಲಾಭ ಪಡೆದು ಎದುರಾಳಿ ತಂಡದ ಮೇಲೆ ಒತ್ತಡ ಹೇರಿದರು. ಬ್ರಾಡ್ ಎವನ್ಸ್ (4-45) ಯಶಸ್ವಿ ಪ್ರದರ್ಶನ ನೀಡಿದರೆ, ವೆಲ್ಲಿಂಗ್ಟನ್ ಮಸಕಝ (2-18) ಎರಡು ವಿಕೆಟ್ ಪಡೆದರು. ಬಾಂಗ್ಲಾದೇಶ ತಂಡ 33.4 ಓವರ್‌ಗಳಲ್ಲಿ 172 ರನ್‌ಗಳಿಗೆ ಆಲೌಟಾಗಿ 99 ರನ್‌ಗಳಿಂದ ಸೋತಿತು.

ಆ್ಯಂಡಿ ಫ್ಲವರ್ ಹಿಂದಿಕ್ಕಿದ ಟೇಲರ್: ಟೇಲರ್ ಇದೀಗ ಝಿಂಬಾಬ್ವೆ ತಂಡದ ಸಾರ್ವಕಾಲಿಕ ಶ್ರೇಷ್ಠ ಏಕದಿನ ರನ್‌ಗಳ ಪಟ್ಟಿಯಲ್ಲಿ ಆ್ಯಂಡಿ ಫ್ಲವರ್ ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ.

2004ರಲ್ಲಿ ಏಕದಿನ ಕ್ರಿಕೆಟ್‌ಗೆ ಕಾಲಿಟ್ಟಿರುವ ಟೇಲರ್ 35.24ರ ಸರಾಸರಿಯಲ್ಲಿ 211 ಪಂದ್ಯಗಳಲ್ಲಿ 6,837 ರನ್ ಗಳಿಸಿದ್ದಾರೆ. ಇದರಲ್ಲಿ 11 ಶತಕಗಳು ಹಾಗೂ 40 ಅರ್ಧಶತಕಗಳು ಸೇರಿದ್ದು, ಔಟಾಗದೆ 145 ರನ್ ಗಳಿಸಿರುವುದು ಅವರ ಗರಿಷ್ಠ ವೈಯಕ್ತಿಕ ಮೊತ್ತವಾಗಿದೆ. ಫ್ಲವರ್ ಏಕದಿನ ಕ್ರಿಕೆಟ್‌ನಲ್ಲಿ 213 ಪಂದ್ಯಗಳಲ್ಲಿ ನಾಲ್ಕು ಶತಕಗಳು ಹಾಗೂ 55 ಅರ್ಧಶತಕಗಳ ಸಹಿತ ಒಟ್ಟು 6,786 ರನ್ ಗಳಿಸಿದ್ದಾರೆ.

ನಿವೃತ್ತಿಯ ನಿರ್ಧಾರವನ್ನು ಹಿಂತೆಗೆದುಕೊಂಡ ಬಳಿಕ ಟೇಲರ್ 2025ರಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ವಾಪಸಾಗಿದ್ದರು.

ಝಿಂಬಾಬ್ವೆ ತಂಡವು ಅಕ್ಟೋಬರ್ 19ರಂದು ನಡೆಯುವ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ಮೂರು ತಂಡಗಳ ಸ್ಪರ್ಧಾವಳಿ ಯುಎಇಯಲ್ಲಿ ನಡೆಯುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor