ಜಪಾನ್ ನಲ್ಲಿ ಏಶ್ಯನ್ ಪ್ಯಾರಾ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ
Photo Credit: IANS
ನಗೋಯ, ಅ.18: ಜಪಾನ್ನ ಐಚಿ-ನಗೋಯದಲ್ಲಿ ಏಶ್ಯನ್ ಪ್ಯಾರಾ ಕ್ರೀಡಾಕೂಟದ ಐದನೇ ಆವೃತ್ತಿಯು ರವಿವಾರ ಅಧಿಕೃತವಾಗಿ ಆರಂಭವಾಗುವುದರೊಂದಿಗೆ ಕಾಯುವಿಕೆ ಕೊನೆಗೊಂಡಿದೆ.
ಏಶ್ಯ ಖಂಡದ ಈ ಬೃಹತ್ ಕ್ರೀಡಾಕೂಟವು ಅ.24ರ ತನಕ ನಡೆಯಲಿದ್ದು, ಏಶ್ಯಾದಾದ್ಯಂತದ ಪ್ಯಾರಾ ಕ್ರೀಡಾಪಟುಗಳು ವಿವಿಧ ಕ್ರೀಡಾ ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ.
ಭಾರತವು ಗಮನಾರ್ಹ ಸಂಖ್ಯೆಯ ಪದಕಗಳನ್ನು ಗೆಲ್ಲುವ ವಿಶ್ವಾಸದೊಂದಿಗೆ ಸ್ಪರ್ಧೆಗೆ ಇಳಿಯಲಿದೆ. ಪ್ಯಾರಾ ಅತ್ಲೆಟಿಕ್ಸ್ ಹಾಗೂ ಪ್ಯಾರಾ ಬ್ಯಾಡ್ಮಿಂಟನ್ನಲ್ಲಿ ಹೆಚ್ಚಿನ ಯಶಸ್ಸನ್ನು ನಿರೀಕ್ಷಿಸಲಾಗುತ್ತಿದೆ.
► ಪ್ರಮೋದ್ ಭಗತ್ ಹಾಗೂ ಸಿಮ್ರಾನ್ ಶರ್ಮಾ ಭಾರತದ ಧ್ವಜಧಾರಿಗಳು
ಜಪಾನ್ ನ ನಗೋಯದಲ್ಲಿ ನಡೆದ ಏಶ್ಯನ್ ಪ್ಯಾರಾ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಪ್ಯಾರಾ ಕ್ರೀಡಾಪಟುಗಳು ಗಮನ ಸೆಳೆದರು. ಪ್ಯಾರಾಲಿಂಪಿಕ್ಸ್ನಲ್ಲಿ ಚಿನ್ನದ ಪದಕ ವಿಜೇತ ಪ್ರಮೋದ್ ಭಗತ್ ಹಾಗೂ ಸಿಮ್ರಾನ್ ಶರ್ಮಾ ಧ್ವಜಧಾರಿಗಳಾಗಿ ಭಾರತೀಯ ತಂಡವನ್ನು ಮುನ್ನಡೆಸಿದರು.
ಪಲೋಮಾ ಮಿಝುಹೊ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಭಗತ್ ಹಾಗೂ ಸಿಮ್ರಾನ್ ಭಾರತದ ತ್ರಿವರ್ಣ ಧ್ವಜವನ್ನು ಹಿಡಿದು ಸಾಗುವ ಮೂಲಕ ಏಶ್ಯನ್ ಕ್ರೀಡಾಕೂಟದಲ್ಲಿ ಭಾರತದ ಉಪಸ್ಥಿತಿಯನ್ನು ಸಾರಿದರು.
ಭಾರತದ ಪ್ರಮುಖ ಕ್ರೀಡಾಪಟುಗಳಲ್ಲಿ ಒಬ್ಬರಾದ ಭಾವಿನಾಬೆನ್ ಪಟೇಲ್ ಅವರನ್ನು ಮೊದಲಿಗೆ ಧ್ವಜಧಾರಿಣಿಯಾಗಿ ಆಯ್ಕೆ ಮಾಡಲಾಗಿತ್ತು. ಸೋಮವಾರ ನಡೆಯಲಿರುವ ತಮ್ಮ ಕ್ವಾರ್ಟರ್ ಫೈನಲ್ ಪಂದ್ಯದತ್ತ ಗಮನ ಹರಿಸಬೇಕಾಗಿರುವ ಕಾರಣ, ಸಮಾರಂಭ ನಡೆಯುವ ಸ್ಥಳಕ್ಕೆ ಹೋಗಿ ಬರಲು ಸುಮಾರು ಆರು ಗಂಟೆಗಳ ಸಮಯ ಹಿಡಿಯುವುದರಿಂದ ಭಾವಿನಾಬೆನ್ ಅವರ ವಿಶ್ರಾಂತಿ ಹಾಗೂ ಚೇತರಿಕೆಗೆ ಆದ್ಯತೆ ನೀಡಲು ಭಾರತೀಯ ತಂಡ ನಿರ್ಧರಿಸಿತು.
► ಭಾರತದ ಗುರಿ 100 ಪದಕಗಳು: ಸತ್ಯನಾರಾಯಣ
ನಮ್ಮ ಕ್ರೀಡಾಪಟುಗಳು ಅತ್ಯುತ್ಸಾಹದಲ್ಲಿದ್ದು, ತಮ್ಮ ಸಿದ್ಧತೆಗಳನ್ನು ಫಲಿತಾಂಶಗಳಾಗಿ ಪರಿವರ್ತಿಸಲು ಉತ್ಸುಕರಾಗಿದ್ದಾರೆ ಎಂದು ಭಾರತದ ಕ್ರೀಡಾಧಿಕಾರಿ ಸತ್ಯನಾರಾಯಣ ಹೇಳಿದ್ದಾರೆ.
‘‘ನಾವು ಭಾರತಕ್ಕಾಗಿ ಸುಮಾರು 100 ಪದಕಗಳನ್ನು ಗೆಲ್ಲುವ ಗುರಿ ಹೊಂದಿದ್ದೇವೆ. ನಮ್ಮ ಕ್ರೀಡಾಪಟುಗಳಿಗೆ ಇದನ್ನು ಸಾಧಿಸುವ ಸಾಮರ್ಥ್ಯ ಹಾಗೂ ದೃಢನಿಶ್ಚಯವಿದೆ ಎಂದು ನಾವು ನಂಬಿದ್ದೇವೆ. ಪ್ಯಾರಾ ಅತ್ಲೆಟಿಕ್ಸ್ ನಮ್ಮ ಪದಕ ಬೇಟೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ನಾಳೆ ಅತ್ಲೆಟಿಕ್ಸ್ ವಿಭಾಗದಲ್ಲಿ ನಾವು ಆರು ಪದಕಗಳನ್ನು ನಿರೀಕ್ಷಿಸುತ್ತಿದ್ದೇವೆ. ಇದರಲ್ಲಿ ಎರಡು ಅಥವಾ ಮೂರು ಚಿನ್ನದ ಪದಕಗಳು ಸೇರಿವೆ’’ ಎಂದು ಸತ್ಯನಾರಾಯಣ ಹೇಳಿದ್ದಾರೆ.
ಎರಡು ಬಾರಿ ಪ್ಯಾರಾಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಪ್ಯಾರಾ ಹೈಜಂಪರ್ ನಿಶಾದ್ ಕುಮಾರ್ ಬಗ್ಗೆ ಮಾತನಾಡಿದ ಸತ್ಯನಾರಾಯಣ, ‘‘ನಿಶಾದ್ ಕುಮಾರ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಅವರು ತಮ್ಮ ವೈಯಕ್ತಿಕ ಶ್ರೇಷ್ಠ ಪ್ರದರ್ಶನ ನೀಡಲಿದ್ದಾರೆ. ಬಹುಶಃ ಕ್ರೀಡಾಕೂಟದ ದಾಖಲೆಯನ್ನು ಮುರಿಯಲಿದ್ದಾರೆ ಎಂದು ನಿರೀಕ್ಷಿಸುತ್ತಿದ್ದೇವೆ. ನಮ್ಮ ಅಭಿಯಾನಕ್ಕೆ ಉತ್ತಮ ಆರಂಭ ನೀಡಲು ಇವು ನಮಗೆ ಸಿಕ್ಕಿರುವ ದೊಡ್ಡ ಅವಕಾಶಗಳಾಗಿವೆ’’ ಎಂದು ಹೇಳಿದರು.