ಮಳೆಬಾಧಿತ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಪಾಕಿಸ್ತಾನಕ್ಕೆ ಜಯ
Photo : PTI
ಬೆಂಗಳೂರು: ಮಳೆಬಾಧಿತ ವಿಶ್ವಕಪ್‌ನ 35ನೇ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು ನ್ಯೂಝಿಲ್ಯಾಂಡ್ ತಂಡವನ್ನು ಡಿಎಲ್‌ಎಸ್ ನಿಯಮದ ಪ್ರಕಾರ 21 ರನ್ ಅಂತರದಿಂದ ಸೋಲಿಸಿದೆ. ಇದರೊಂದಿಗೆ ಸೆಮಿ ಫೈನಲ್ ತಲುಪುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ರೋಚಕವಾಗಿ ಸಾಗುವ ಸೂಚನೆ ನೀಡಿದ್ದ ಪಂದ್ಯವು ಮಳೆಯಿಂದಾಗಿ ನೀರಸ ಅಂತ್ಯ ಕಂಡಿತು. ಸ್ಪರ್ಧೆಯಲ್ಲಿ ಪಾಕಿಸ್ತಾನ ವಿಜಯಿ ಎಂದು ಘೋಷಿಸಲಾಯಿತು. ಡಿಎಲ್‌ಎಸ್ ನಿಯಮದಡಿ ಜಯ ಸಾಧಿಸಿರುವ ಬಾಬರ್ ಆಝಮ್ ಬಳಗವು ಪ್ರಸಕ್ತ ವಿಶ್ವಕಪ್‌ನಲ್ಲಿ ಸೆಮಿ ಫೈನಲ್ ರೇಸ್‌ನಲ್ಲಿ ಉಳಿದುಕೊಂಡಿದೆ.
ಈ ಗೆಲುವಿನ ಮೂಲಕ ಪಾಕಿಸ್ತಾನವು ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. 401 ರನ್ ಗಳಿಸಿದ ಹೊರತಾಗಿಯೂ ನ್ಯೂಝಿಲ್ಯಾಂಡ್ ಸೋಲುಂಡಿದೆ. ಸತತ ನಾಲ್ಕನೇ ಸೋಲು ಕಂಡಿರುವ ಕಿವೀಸ್‌ಗೆ ಇಂದಿನ ಸೋಲು ನೋವುಂಟು ಮಾಡಿದೆ. ಇಂದಿನ ಪಂದ್ಯದಲ್ಲಿ ಸೋತಿದ್ದರೂ ಕಿವೀಸ್ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿ ಮುಂದುವರಿದಿದೆ. ಕಿವೀಸ್‌ಗೆ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ತಂಡಗಳು ಪೈಪೋಟಿ ನೀಡುತ್ತಿವೆ. ಈ ಮೂರು ತಂಡಗಳು ತಲಾ 8 ಅಂಕವನ್ನು ಗಳಿಸಿದ್ದು, ನೆಟ್‌ರನ್‌ರೇಟ್‌ನಿಂದಾಗಿ ಬೇರೆ ಬೇರೆ ಸ್ಥಾನದಲ್ಲಿವೆ.
ಶನಿವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನವು 402 ರನ್ ಚೇಸ್ ಮಾಡುವಾಗ ಮಳೆ ಆಗಮಿಸಿ ಪಂದ್ಯಕ್ಕೆ ಅಡ್ಡಿಪಡಿಸಿತು. ಪಂದ್ಯ ಪುನರಾರಂಭಗೊಂಡಾಗ ಪಾಕ್‌ಗೆ 41 ಓವರ್‌ಗಳಲ್ಲಿ 342 ರನ್ ಪರಿಷ್ಕೃತ ಗುರಿ ನೀಡಲಾಯಿತು. 2ನೇ ಬಾರಿ ಮಳೆ ಪಂದ್ಯಕ್ಕೆ ಅಡ್ಡಿಪಡಿಸಿದಾಗ ಪಾಕಿಸ್ತಾನ ತಂಡ 25.3 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿತ್ತು. ಡಿಎಲ್‌ಎಸ್ ನಿಯಮದ ಪ್ರಕಾರ 21 ರನ್ ಮುನ್ನಡೆಯಲ್ಲಿತ್ತು. 2ನೇ ಬಾರಿ ಮಳೆ ಅಡ್ಡಿಯಾದಾಗ ಪಾಕ್‌ಗೆ 25.3 ಓವರ್‌ಗಳಲ್ಲಿ 180 ರನ್ ಪರಿಷ್ಕೃತ ಗುರಿ ನೀಡಲಾಯಿತು. ಪಾಕ್ ಅದಾಗಲೇ ಮುನ್ನಡೆಯಲ್ಲಿದ್ದ ಕಾರಣ ಪಂದ್ಯ ಗೆದ್ದುಕೊಂಡಿತು.
ಫಖರ್ ಝಮಾನ್ ಹಾಗೂ ಬಾಬರ್ ಆಝಮ್ 24 ಎಸೆತಗಳಲ್ಲಿ 40 ರನ್ ಗಳಿಸಿದರು. ಪಾಕ್ ಪರ ಆರಂಭಿಕ ಬ್ಯಾಟರ್ ಫಖರ್ ಝಮಾನ್(ಔಟಾಗದೆ 126 ರನ್, 81 ಎಸೆತ, 8 ಬೌಂಡರಿ, 11 ಸಿಕ್ಸರ್) ಹಾಗೂ ಬಾಬರ್ ಆಝಮ್(ಔಟಾಗದೆ 66 ರನ್, 63 ಎಸೆತ, 6 ಬೌಂಡರಿ, 2 ಸಿಕ್ಸರ್)ಗಳಿಸಿದ್ದಾರೆ.
ನ್ಯೂಝಿಲ್ಯಾಂಡ್ 401/6: ಪಾಕಿಸ್ತಾನದಿಂದ ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ನ್ಯೂಝಿಲ್ಯಾಂಡ್ ತಂಡ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 401 ರನ್ ಗಳಿಸಿತು.
ಯುವ ಬ್ಯಾಟರ್ ರಚಿನ್ ರವೀಂದ್ರ ಟೂರ್ನಮೆಂಟ್‌ನಲ್ಲಿ 3ನೇ ಶತಕ(108 ರನ್, 94 ಎಸೆತ)ಗಳಿಸಿದ್ದಲ್ಲದೆ, ನಾಯಕ ಕೇನ್ ವಿಲಿಯಮ್ಸನ್(95 ರನ್, 79 ಎಸೆತ)ಅವರೊಂದಿಗೆ 2ನೇ ವಿಕೆಟ್‌ಗೆ 180 ರನ್ ಜೊತೆಯಾಟದಲ್ಲಿ ಭಾಗಿಯಾದರು. ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ವಾಪಸಾಗಿರುವ ವಿಲಿಯಮ್ಸನ್ ಪ್ರಸಕ್ತ ವಿಶ್ವಕಪ್‌ನಲ್ಲಿ ಮೊದಲ ಬಾರಿ ಕಿವೀಸ್ ತಂಡವನ್ನು ಮುನ್ನಡೆಸಿದರು.
ರವೀಂದ್ರ ಹಾಗೂ ವಿಲಿಯಮ್ಸನ್ ಹಾಕಿಕೊಟ್ಟ ಭದ್ರ ಬುನಾದಿಯ ಲಾಭ ಪಡೆದ ಮಾರ್ಕ್ ಚಾಪ್‌ಮನ್(39 ರನ್, 27 ಎಸೆತ), ಡ್ಯಾರಿಲ್ ಮಿಚೆಲ್(29 ರನ್, 18 ಎಸೆತ), ಗ್ಲೆನ್ ಫಿಲಿಪ್ಸ್(41 ರನ್, 25 ಎಸೆತ) ಹಾಗೂ ಮಿಚೆಲ್ ಸ್ಯಾಂಟ್ನರ್(ಔಟಾಗದೆ 26, 17 ಎಸೆತ)ತಂಡದ ಮೊತ್ತವನ್ನು 400ರ ಗಡಿ ದಾಟಿಸಿದರು.
ನ್ಯೂಝಿಲ್ಯಾಂಡ್ ಬ್ಯಾಟರ್‌ಗಳು ಮಾಡಿರುವ ಹಾನಿಯು ಪಾಕಿಸ್ತಾನದ ಬೌಲಿಂಗ್ ಅಂಕಿ-ಅಂಶದಲ್ಲಿ ಪ್ರತಿಫಲಿಸುತ್ತಿತ್ತು. ಮುಹಮ್ಮದ್ ವಸೀಂ(3-60)ಹೊರತುಪಡಿಸಿ ಉಳಿದ ಬೌಲರ್‌ಗಳು ದುಬಾರಿ ಎನಿಸಿಕೊಂಡರು.
ವಿಶ್ವದ ನಂ.1 ಬೌಲರ್ ಶಾಹೀನ್ ಅಫ್ರಿದಿ ವಿಶ್ವಕಪ್ ಪಂದ್ಯದಲ್ಲಿ ಅತ್ಯಂತ ಕಳಪೆ ಬೌಲಿಂಗ್(0/90)ಮಾಡಿದ ಪಾಕಿಸ್ತಾನದ ಬೌಲರ್ ಎನಿಸಿಕೊಂಡರು. ಹಾರಿಸ್ ರವೂಫ್(1-85) ಹಾಗೂ ಹಸನ್ ಅಲಿ(1-82) ತಮ್ಮ ಸ್ಪೆಲ್‌ನಲ್ಲಿ 80ಕ್ಕೂ ಅಧಿಕ ರನ್ ನೀಡಿದರು