ಪಾಕಿಸ್ತಾನ ಮತ್ತೊಮ್ಮೆ ಭಾರತ ತಂಡವನ್ನು ಎದುರಿಸಲಿದೆಯೇ?
ಏಶ್ಯ ಕಪ್ ಪಂದ್ಯಾವಳಿಯ ಫೈನಲ್ ಸ್ಪರ್ಧೆ ಈಗಲೂ ಮುಕ್ತ
PC : PTI
ಹೊಸದಿಲ್ಲಿ, ಸೆ.22: ಯುಎಇನಲ್ಲಿ ನಡೆಯುತ್ತಿರುವ 2025ರ ಆವೃತ್ತಿಯ ಏಶ್ಯ ಕಪ್ ಟಿ-20 ಪಂದ್ಯಾವಳಿಯ ಸೂಪರ್-4 ಸುತ್ತಿನಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಗೆಲುವಿನೊಂದಿಗೆ ತಮ್ಮ ಅಭಿಯಾನ ಆರಂಭಿಸಿವೆ. ಆದರೆ ಫೈನಲ್ ಸ್ಥಾನಕ್ಕಾಗಿ ಸ್ಪರ್ಧೆಯು ಈಗಲೂ ಮುಕ್ತವಾಗಿದೆ.
ಹಾಲಿ ಚಾಂಪಿಯನ್ ಭಾರತ ತಂಡವು ರವಿವಾರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 6 ವಿಕೆಟ್ ಗಳಿಂದ ಮಣಿಸುವ ಮೂಲಕ ತನ್ನ ಪ್ರಾಬಲ್ಯ ಮುಂದುವರಿಸಿದೆ. ಮತ್ತೊಂದೆಡೆ, ಬಾಂಗ್ಲಾದೇಶ ತಂಡವು ಶನಿವಾರ ಶ್ರೀಲಂಕಾ ತಂಡದ ವಿರುದ್ಧ 4 ವಿಕೆಟ್ ಗಳ ಅಂತರದಿಂದ ಜಯಶಾಲಿಯಾಗಿತ್ತು.
ಈ ಫಲಿತಾಂಶದಿಂದಾಗಿ ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಸೂಪರ್-4 ಅಂಕಪಟ್ಟಿಯಲ್ಲಿ ತಲಾ 4 ಅಂಕ ಗಳಿಸಿವೆ. ಭಾರತ ತಂಡವು +0.689 ನೆಟ್ ರನ್‌ರೇಟ್‌ನೊಂದಿಗೆ ಅಗ್ರ ಸ್ಥಾನದಲ್ಲಿದೆ. ಬಾಂಗ್ಲಾದೇಶ(+0.121)ಎರಡನೇ ಸ್ಥಾನದಲ್ಲಿದೆ. ಪಾಕಿಸ್ತಾನ ಹಾಗೂ ಶ್ರೀಲಂಕಾ ಇನ್ನಷ್ಟೇ ತಮ್ಮ ಅಂಕದ ಖಾತೆ ತೆರೆಯಬೇಕಾಗಿದೆ. ಆದರೆ ಸೂಪರ್-4 ಹಂತದಲ್ಲಿ 4 ಪಂದ್ಯಗಳು ಆಡಲು ಬಾಕಿ ಉಳಿದಿದ್ದು, ಈ ಎರಡು ತಂಡಗಳು ಫೈನಲ್ ಸುತ್ತಿಗೇರುವ ಸ್ಪರ್ಧೆಯಲ್ಲಿ ಉಳಿದುಕೊಂಡಿವೆ.
ಪಾಕಿಸ್ತಾನ ತಂಡಕ್ಕೆ ಫೈನಲ್ ತಲುಪಲು ಮುಂಬರುವ ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ. ಮಂಗಳವಾರ ಶ್ರೀಲಂಕಾ ತಂಡವನ್ನು ಹಾಗೂ ಗುರುವಾರ ಬಾಂಗ್ಲಾದೇಶ ತಂಡವನ್ನು ಮಣಿಸಬೇಕಾಗಿದೆ. ಈ ಎರಡು ಗೆಲುವಿನೊಂದಿಗೆ ಸಲ್ಮಾನ್ ಅಲಿ ತಂಡವು 4 ಅಂಕ ಗಳಿಸಲಿದೆ. ರವಿವಾರದಂದು ನಡೆಯುವ ಫೈನಲ್‌ನಲ್ಲಿ ಭಾರತ ವಿರುದ್ಧದ ಹಣಾಹಣಿಗೆ ಸಜ್ಜಾಗುವ ಸಾಧ್ಯತೆಯಿದೆ.
ಒಂದು ವೇಳೆ ಪಾಕಿಸ್ತಾನ ತಂಡವು ಮಂಗಳವಾರ ಶ್ರೀಲಂಕಾ ತಂಡವನ್ನು ಸೋಲಿಸಿದರೆ, ದ್ವೀಪ ರಾಷ್ಟ್ರವು ಸತತ 2ನೇ ಸೋಲಿನಿಂದಾಗಿ ಸ್ಪರ್ಧೆಯಿಂದ ಹೊರಗುಳಿಯಲಿದೆ. ಅಗ್ರ-2 ಸ್ಥಾನದಲ್ಲಿರುವ ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಬುಧವಾರ ಸೆಣಸಾಡಲಿವೆ. ಭಾರತದ ಪ್ರಸಕ್ತ ಫಾರ್ಮ್ ಪರಿಗಣಿಸಿದರೆ ಅಜೇಯ ಓಟವನ್ನು ಮುಂದುವರಿಸಿ ಫೈನಲ್ ಗೆ ತಲುಪುವ ನಿರೀಕ್ಷೆ ಹೆಚ್ಚಾಗಿದೆ. ಆಗ ಪಾಕಿಸ್ತಾನ ತಂಡವು ಗುರುವಾರ ಆಡಲಿರುವ ತನ್ನ ಕೊನೆಯ ಸೂಪರ್-4 ಪಂದ್ಯದಲ್ಲಿ ಬಾಂಗ್ಲಾದೇಶದ ಸವಾಲನ್ನು ಮೆಟ್ಟಿ ನಿಲ್ಲಬೇಕಾಗುತ್ತದೆ. ಈ ಪಂದ್ಯವು ಸೆಮಿ ಫೈನಲ್ ಸ್ವರೂಪ ಪಡೆಯಲಿದೆ.
ಇಂತಹ ಸನ್ನಿವೇಶದಲ್ಲಿ ಭಾರತ ಹಾಗೂ ಶ್ರೀಲಂಕಾದ ನಡುವೆ ಶುಕ್ರವಾರ ನಡೆಯಲಿರುವ ಕೊನೆಯ ಸೂಪರ್-4 ಪಂದ್ಯವು ಫೈನಲ್ ಗೆ ಅರ್ಹತೆ ಪಡೆಯುವ ವಿಚಾರದಲ್ಲಿ ಮಹತ್ವ ಕಳೆದುಕೊಳ್ಳಲಿದೆ.
ಶ್ರೀಲಂಕಾ ಹಾಗೂ ಪಾಕಿಸ್ತಾನ ತಂಡಗಳು ಮಂಗಳವಾರ ಮಾಡು ಇಲ್ಲವೇ ಮಡಿ ಪಂದ್ಯವನ್ನಾಡಲಿವೆ.
ಒಂದು ವೇಳೆ ಭಾರತ ಹಾಗೂ ಪಾಕಿಸ್ತಾನ ಫೈನಲ್ ಗೆ ಪ್ರವೇಶಿಸಿದರೆ, ಸತತ ಮೂರನೇ ವಾರವೂ ಮುಖಾಮುಖಿಯಾದಂತಾಗುತ್ತದೆ.
ಸತತ ಮೂರನೇ ಬಾರಿ ಭಾರತ-ಪಾಕಿಸ್ತಾನ ಕ್ರಿಕೆಟ್ ತಂಡಗಳು ಪರಸ್ಪರ ಮುಖಾಮುಖಿಯಾಗುವ ಮೂಲಕ 2025ರ ಆವೃತ್ತಿಯ ಏಶ್ಯ ಕಪ್ ಚಾಂಪಿಯನ್ ನಿರ್ಧಾರವಾಗಲಿದೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.