ಖತರ್ ಓಪನ್ ಪಂದ್ಯಾವಳಿ | ವಿಶ್ವ ನಂಬರ್ ವನ್ ಅರೈನಾ ಸಬಲೆಂಕಾ ಹೊರಕ್ಕೆ
ಅರೈನಾ ಸಬಲೆಂಕಾ | PC : NDTV
ದೋಹಾ (ಖತರ್): ಖತರ್ ಓಪನ್ ಟೆನಿಸ್ ಪಂದ್ಯಾವಳಿಯ ಎರಡನೇ ಸುತ್ತಿನಲ್ಲಿ, ವಿಶ್ವದ ನಂಬರ್ ವನ್ ಆಟಗಾರ್ತಿ ಬೆಲಾರುಸ್‌ನ ಅರೈನಾ ಸಬಲೆಂಕಾ ಮಂಗಳವಾರ ಆಘಾತಕಾರಿ ಸೋಲನುಭವಿಸಿದ್ದಾರೆ. ಎರಡೂವರೆ ಗಂಟೆಗಳಿಗೂ ಅಧಿಕ ಸಮಯ ನಡೆದ ಪಂದ್ಯದಲ್ಲಿ, ಸಬಲೆಂಕರನ್ನು ರಶ್ಯದ ಎಕಟರೀನಾ ಅಲೆಕ್ಸಾಂಡ್ರೋವ 3-6, 6-3, 7-6(7/5) ಸೆಟ್‌ಗಳಿಂದ ಸೋಲಿಸಿದರು.
ಜನವರಿಯಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ಮ್ಯಾಡಿಸನ್ ಕೀಸ್ ವಿರುದ್ಧ ಸೋತ ಬಳಿಕ, ಸಬಲೆಂಕ ಆಡಿದ ಮೊದಲ ಪಂದ್ಯ ಇದಾಗಿದೆ.
26ನೇ ವಿಶ್ವ ರ್ಯಾಂಕಿಂಗ್ಸ್‌ನ ಅಲೆಕ್ಸಾಂಡ್ರೋವ ಕಳೆದ ವಾರ ಲಿಂಝ್‌ನಲ್ಲಿ ತನ್ನ ಐದನೇ ಡಬ್ಲ್ಯುಟಿಎ ಪ್ರಶಸ್ತಿ ಗೆದ್ದು ಉತ್ತಮ ಫಾರ್ಮ್‌ನೊಂದಿಗೆ ದೋಹಕ್ಕೆ ಬಂದಿದ್ದಾರೆ. ಮೊದಲ ಸೆಟ್ಟನ್ನು ಕಳೆದುಕೊಂಡ ಬಳಿಕ ಅವರು ತೀವ್ರ ಪ್ರತಿ ಹೋರಾಟ ನೀಡಿದರು. ಎರಡನೇ ಸೆಟ್ಟನ್ನು ಗೆದ್ದು ಅಂಕಗಳನ್ನು ಸಮಬಲಗೊಳಿಸಿದರು.
ಮೂರನೇ ಸೆಟ್‌ನಲ್ಲಿ ಉಭಯ ಆಟಗಾರ್ತಿಯರು ಸಮಬಲದ ಪ್ರದರ್ಶನ ನೀಡಿದರು. ಹಾಗಾಗಿ, ಟೈಬ್ರೇಕರ್ ಅನಿವಾರ್ಯವಾಯಿತು. ಟೈಬ್ರೇಕರ್‌ನಲ್ಲಿ ಅವರು ಆ ಸೆಟ್ಟನ್ನು 7-5ರಿಂದ ಗೆದ್ದರು.
ಸಬಲೆಂಕ 2022ರ ಬಳಿಕ ಖತರ್ ಓಪನ್‌ನಲ್ಲಿ ಮೊದಲ ಬಾರಿಗೆ ಆಡಿದ್ದಾರೆ. ಅವರು 2020ರಲ್ಲಿ ಇಲ್ಲಿ ಪ್ರಶಸ್ತಿ ಗೆದ್ದಿದ್ದರು.
ಅಲೆಕ್ಸಾಂಡ್ರೋವ ಮುಂದಿನ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಬೆಲ್ಜಿಯಮ್‌ನ ಎಲಿಸ್ ಮರ್ಟನ್ಸ್‌ರನ್ನು ಎದುರಿಸಲಿದ್ದಾರೆ.
► ಕೋಕೋ ಗೌಫ್ ಹೊರಗೆ
ಮಂಗಳವಾರ ಅಮೆರಿಕದ ಕೋಕೊ ಗೌಫ್ ಕೂಡ ಖತರ್ ಓಪನ್ ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ.
ಅವರನ್ನು ಉಕ್ರೇನ್‌ನ ಮಾರ್ತಾ ಕೋಸ್ಟಿಯುಕ್ 6-2, 7-5ರ ನೇರ ಸೆಟ್‌ಗಳಿಂದ ಸೋಲಿಸಿದರು. ಅವರು ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಪೋಲ್ಯಾಂಡ್‌ನ ಮ್ಯಾಗ್ಡ ಲಿನೆಟ್‌ರನ್ನು ಎದುರಿಸಲಿದ್ದಾರೆ.
ಆಸ್ಟ್ರೇಲಿಯನ್ ಓಪನ್‌ನಲ್ಲಿ, ಕ್ವಾರ್ಟರ್‌ಫೈನಲ್‌ನಲ್ಲಿ ಪೌಲಾ ಬಡೋಸ ವಿರುದ್ಧ ಸೋಲನುಭವಿಸಿದ ಬಳಿಕ ಮೂರನೇ ವಿಶ್ವ ರ್ಯಾಂಕಿಂಗ್‌ನ ಕೋಕೋ ಗೌಫ್ ಮೊದಲ ಬಾರಿಗೆ ಟೆನಿಸ್ ಅಂಗಳಕ್ಕೆ ಮರಳಿದ್ದಾರೆ.
► ಎಲೀನಾ ರೈಬಕೀನಾ ಪ್ರಿಕ್ವಾರ್ಟರ್‌ಫೈನಲ್‌ಗೆ
ಖತರ್ ಓಪನ್ ಪಂದ್ಯಾವಳಿಯಲ್ಲಿ ಮಂಗಳವಾರ ಮಾಜಿ ವಿಂಬಲ್ಡನ್ ಚಾಂಪಿಯನ್ ಎಲೀನಾ ರೈಬಕೀನಾ ಪ್ರಿಕ್ವಾರ್ಟರ್‌ಫೈನಲ್ ತಲುಪಿದ್ದಾರೆ. ಎರಡನೇ ಸುತ್ತಿನ ಪಂದ್ಯದಲ್ಲಿ ಅವರು ಅಮೆರಿಕದ ಪೀಟನ್ ಸ್ಟರ್ನ್ಸ್‌ರನ್ನು 6-2, 6-4 ಸೆಟ್‌ಗಳಿಂದ ಮಣಿಸಿದರು.
ಅವರು ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಸ್ಲೊವೇಕಿಯದ ರೆಬೆಕಾ ಸ್ರಮ್ಕೋವರನ್ನು ಎದುರಿಸಲಿದ್ದಾರೆ.
ರೆಬೆಕಾ ರಶ್ಯದ ಹದಿಹರೆಯದ ಮಿರಾ ಆಂಡ್ರೀವಾರನ್ನು 3-6, 6-3, 7-5 ಸೆಟ್‌ಗಳಿಂದ ಮಣಿಸಿದರು.
► ಉನಸ್ ಜಾಬಿರ್ 16ರ ಸುತ್ತಿಗೆ
ಟುನೀಶ್ಯದ ಉನಸ್ ಜಾಬಿರ್ ಏಳನೇ ಶ್ರೇಯಾಂಕದ ಚೀನಾದ ಝೆಂಗ್ ಕಿನ್‌ವೆನ್‌ರನ್ನು 6-4, 6-2 ಸೆಟ್‌ಗಳಿಂದ ಪರಾಭವಗೊಳಿಸಿ ಪ್ರಿಕ್ವಾರ್ಟರ್‌ಫೈನಲ್ ತಲುಪಿದ್ದಾರೆ.
ಮೂರು ಬಾರಿಯ ಗ್ರ್ಯಾನ್‌ಸ್ಲಾಮ್ ಫೈನಲಿಸ್ಟ್ ಜಾಬಿರ್, ಕಳೆದ ವರ್ಷದ ಮ್ಯಾಡ್ರಿಡ್ ಓಪನ್ ಬಳಿಕ ಅಗ್ರ 10ರ ರ್ಯಾಂಕಿಂಗ್‌ನಲ್ಲಿ ಬರುವ ಆಟಗಾರ್ತಿಯೊಬ್ಬರನ್ನು ಮೊದಲ ಬಾರಿಗೆ ಸೋಲಿಸಿದ್ದಾರೆ. ಅವರು ಗಾಯದಿಂದ ಬಳಲುತ್ತಿದ್ದರು.
ಅವರು ಪ್ರಿಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ 2020ರ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಸೋಫಿಯಾ ಕೆನಿನ್‌ರನ್ನು ಎದುರಿಸಲಿದ್ದಾರೆ.