×
Ad

ಬಿಸಿಸಿಐ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿದ ರೋಜರ್ ಬಿನ್ನಿ | ಮಧ್ಯಂತರ ಅಧ್ಯಕ್ಷರಾಗಿ ರಾಜೀವ್ ಶುಕ್ಲಾ ನೇಮಕ: ವರದಿ

Update: 2025-08-29 18:56 IST

 ರೋಜರ್ ಬಿನ್ನಿ |PC :  X \ BCCI  

ಮುಂಬೈ: ಮಹತ್ವದ ಬೆಳವಣಿಗೆಯೊಂದರಲ್ಲಿ ಬಿಸಿಸಿಐ ಅಧ್ಯಕ್ಷರಾಗಿದ್ದ ರೋಜರ್ ಬಿನ್ನಿ, ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದು, ಮಧ್ಯಂತರ ಅಧ್ಯಕ್ಷರನ್ನಾಗಿ ಕ್ರಿಕೆಟ್ ಮಂಡಳಿಯ ಹಿರಿಯ ಅಧಿಕಾರಿ ಹಾಗೂ ಹಾಲಿ ಉಪಾಧ್ಯಕ್ಷ ರಾಜೀವ್ ಶುಕ್ಲಾರನ್ನು ನೇಮಕ ಮಾಡಲಾಗಿದೆ ಎಂದು ‘Dainik Jagaran’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅಕ್ಟೋಬರ್ 2022ರಲ್ಲಿ ಸೌರವ್ ಗಂಗುಲಿ ತೆರವುಗೊಳಿಸಿದ್ದ ಅಧ್ಯಕ್ಷ ಹುದ್ದೆಗೆ ಏರಿದ್ದ ರೋಜರ್ ಬಿನ್ನಿಗೆ ಜುಲೈ 19ರಂದು 70 ವರ್ಷ ತುಂಬಿದೆ. ಬಿಸಿಸಿಐ ಸಂವಿಧಾನದ ಪ್ರಕಾರ, ಯಾವುದೇ ಪದಾಧಿಕಾರಿ 70 ವರ್ಷ ಪೂರೈಸಿದರೆ, ಅಂತಹ ಪದಾಧಿಕಾರಿ ತಮ್ಮ ಹುದ್ದೆಯಲ್ಲಿ ಮುಂದುವರಿಯಲು ಅನರ್ಹರಾಗುತ್ತಾರೆ.

ಸೆಪ್ಟೆಂಬರ್ ತಿಂಗಳಲ್ಲಿ ಬಿಸಿಸಿಐ ವಾರ್ಷಿಕ ಮಹಾಸಭೆ ನಡೆಯುವ ಸಾಧ್ಯತೆ ಇರುವುದರಿಂದ ಅಲ್ಲಿಯವರೆಗೆ 2020ರಿಂದ ಹಾಲಿ ಉಪಾಧ್ಯಕ್ಷರಾಗಿರುವ ರಾಜೀವ್ ಶುಕ್ಲಾ ಅವರು ಮಂಡಳಿಯ ದೈನಂದಿನ ವ್ಯವಹಾರಗಳನ್ನು ನಿರ್ವಹಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಮೂಲಗಳ ಪ್ರಕಾರ, ಅವರು ಹಂಗಾಮಿಯಾಗಿ ಅಧ್ಯಕ್ಷ ಹುದ್ದೆಯನ್ನು ನಿರ್ವಹಿಸಲಿದ್ದು, ಮುಂದಿನ ವಾರ್ಷಿಕ ಮಹಾಸಭೆಯಲ್ಲಿ ರಾಜ್ಯ ಕ್ರಿಕೆಟ್ ಮಂಡಳಿಗಳ ಅಭಿಪ್ರಾಯವನ್ನು ಆಧರಿಸಿ ಪೂರ್ಣಕಾಲಿಕ ಅಧ್ಯಕ್ಷರ ಆಯ್ಕೆಯ ಕುರಿತು ತೀರ್ಮಾನ ಕೈಗೊಳ್ಳಯಲಾಗುತ್ತದೆ ಎಂದು ಹೇಳಲಾಗಿದೆ.

ಕುತೂಹಲಕರ ಸಂಗತಿಯೆಂದರೆ, ಇತ್ತೀಚೆಗೆ ಸಂಸತ್ತಿನಲ್ಲಿ ಅಂಗೀಕಾರಗೊಂಡಿರುವ ರಾಷ್ಟ್ರೀಯ ಕ್ರೀಡಾ ಮಸೂದೆಯಲ್ಲಿ ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳ ಪದಾಧಿಕಾರಿಗಳ ವಯೋಮಿತಿಯನ್ನು 75 ವರ್ಷಗಳಿಗೆ ಏರಿಕೆ ಮಾಡಿರುವುದರಿಂದ, ರೋಜರ್ ಬಿನ್ನಿ ಮುಂದಿನ ವಾರ್ಷಿಕ ಮಹಾಸಭೆಯವರೆಗೂ ತಮ್ಮ ಹುದ್ದೆಯಲ್ಲಿ ಮುಂದುವರಿಯುವ ಸಾಧ್ಯತೆ ಇದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿತ್ತು. ಆದರೆ, ಬಿಸಿಸಿಐನ ಹಾಲಿ ಸಂವಿಧಾನದ ಪ್ರಕಾರ, ಬಿಸಿಸಿಐ ಪದಾಧಿಕಾರಿಗಳ ವಯೋಮಿತಿ 70 ವರ್ಷಗಳಾಗಿಯೇ ಮುಂದುವರಿದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News