2025 ಡಕರ್ ರ್‍ಯಾಲಿಯಲ್ಲಿ ಸಂಜಯ್ ಟಕಾಳೆ ಸ್ಪರ್ಧೆ
ಸಂಜಯ್ ಟಕಾಳೆ | NDTV
ಮುಂಬೈ : ಸೌದಿ ಅರೇಬಿಯದಲ್ಲಿ ಮುಂದಿನ ವರ್ಷ ನಡೆಯಲಿರುವ 2025 ಡಕರ್ ರ್ಯಾಲಿಯಲ್ಲಿ ಭಾರತೀಯ ರ್ಯಾಲಿ ಚಾಲಕ ಸಂಜಯ್ ಟಕಾಳೆ ಭಾಗವಹಿಸಲಿದ್ದಾರೆ.
ಅವರು ಈ ರ್ಯಾಲಿಯ ಯಾವುದೇ ವರ್ಗದ ಚತುಷ್ಚಕ್ರ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಮೊದಲ ಭಾರತೀಯನಾಗಿದ್ದಾರೆ.
ರ್ಯಾಲಿಯು ಜನವರಿ 3ರಿಂದ 17ರವರೆಗೆ ನಡೆಯಲಿದೆ.
ಅವರು ಫ್ರಾನ್ಸ್ ತಂಡ ಕಂಪೆನೀ ಸಹರೀನ್ ಪರವಾಗಿ ಸ್ಪರ್ಧಿಸಲಿದ್ದು 2025 ಡಕರ್ ಕ್ಲಾಸಿಕ್ ವರ್ಗದಲ್ಲಿ ಟೊಯೋಟ ಲ್ಯಾಂಡ್ ಕ್ರೂಸರ್ ವಾಹನವನ್ನು ಓಡಿಸಲಿದ್ದಾರೆ. ಅವರು 14 ದಿನಗಳ ಕಾಲ 8,000 ಕಿ.ಮೀ.ಗೂ ಅಧಿಕ ದೂರ ಕಾರು ಓಡಿಸಲಿದ್ದಾರೆ.
‘‘ಡಕರ್‌ನ ಶಕ್ತಿಯನ್ನು ಅನುಭವಿಸುವುದು ಮತ್ತು ಮರಣ ದಿಣ್ಣೆಗಳಲ್ಲಿ ವಾಹನ ಚಲಾಯಿಸುವ ಆನಂದವನ್ನು ಅನುಭವಿಸುವುದು ನನ್ನ ಗುರಿಯಾಗಿದೆ. ಇದೊಂದು ಸುದೀರ್ಘ ಪ್ರಯಾಣವಾಗಿದೆ ಮತ್ತು ಅದು ಉತ್ತಮ ಕಲಿಕಾ ಅನುಭವವನ್ನು ಒದಗಿಸಲಿದೆ’’ ಎಂದು ಟಕಾಳೆ ಹೇಳಿದರು.
ಟಕಾಳೆ ತನ್ನ ವಾಹನ ಓಟದ ಬದುಕನ್ನು 1987 ಜೂನ್‌ನಲ್ಲಿ ಮೋಟೊಕ್ರಾಸ್ ರೇಸ್‌ಗಳ ಮೂಲಕ ಆರಂಭಿಸಿದರು. ಅವರು 2001ರವರೆಗೆ 100ಕ್ಕೂ ಅಧಿಕ ಟ್ರೋಫಿಗಳನ್ನು ಗೆದ್ದಿದ್ದಾರೆ. 2001ರಲ್ಲಿ ಅವರು ನಾಶಿಕ್‌ನಲ್ಲಿ ನಡೆದ ಬೈಕ್ ನ್ಯಾಶನಲ್ ರೌಂಡ್‌ನಲ್ಲಿ ಪ್ರಶಸ್ತಿ ಗೆದ್ದ ಬಳಿಕ ದ್ವಿಚಕ್ರ ವಾಹನಗಳ ರೇಸ್‌ಗೆ ವಿದಾಯ ಕೋರಿದರು.
2009ರಲ್ಲಿ ಅವರು ಎಂಡ್ಯೂರೆನ್ಸ್ ರ್ಯಾಲಿಗಳಲ್ಲಿ ಸ್ಪರ್ಧಿಸಲು ಆರಂಭಿಸಿದರು. ಈಗ ಅವರು ಮಲೇಶ್ಯನ್ ರ್ಯಾಲಿಗಳು ಮತ್ತು ಭಾರತೀಯ ರಾಷ್ಟ್ರೀಯ ರ್ಯಾಲಿ ಚಾಂಪಿಯನ್‌ಶಿಪ್ ಸ್ಪರ್ಧೆಗಳಲ್ಲಿ ಸ್ಪರ್ಧಿಸುತ್ತಿರುವ ಅನುಭವಿ ಚಾಲಕನಾಗಿದ್ದಾರೆ.