ಭಾರತ ಟೆಸ್ಟ್ ತಂಡಕ್ಕೆ ಸರ್ಫರಾಝ್ ಖಾನ್ ಆಯ್ಕೆ
ಸರ್ಫ್ರಾಝ್ ಖಾನ್ | Photo : x/@mufaddal_vohra
ಹೊಸದಿಲ್ಲಿ : ಹಿಂದೆ ಉತ್ತರಪ್ರದೇಶ ಕ್ರಿಕೆಟ್ ತಂಡದಲ್ಲಿ ಆಡಿದ್ದ, ಈಗ ಮುಂಬೈ ಕ್ರಿಕೆಟ್ ಸಂಸ್ಥೆಯ ತಂಡದ ಭಾಗವಾಗಿರುವ ಐಪಿಎಲ್ ನಲ್ಲಿ ಆರ್ ಸಿ ಬಿ ಯ ಮಾಜಿ ಆಟಗಾರ ಸರ್ಫ್ರಾಝ್ ಖಾನ್ ಅವರನ್ನು ಭಾರತೀಯ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಆ ಮೂಲಕ ಭಾರತ ತಂಡದ ಆಯ್ಕೆಗಾಗಿ ʼಶಬರಿʼಯಂತೆ ಕಾದಿದ್ದ ಸರ್ಫ್ರಾಝ್ ಖಾನ್ ಕಾಯುವಿಕೆ ಅಂತ್ಯಗೊಂಡಿದೆ.
ಇಂಗ್ಲೆಂಡ್ ವಿರುದ್ಧ ವಿಶಾಖಪಟ್ಟಣಂನಲ್ಲಿ ಆಡಲಿರುವ ಭಾರತೀಯ ಟೆಸ್ಟ್ ತಂಡದಲ್ಲಿ ಸರ್ಫರಾಝ್ ಖಾನ್ ಅವರು ರಾಹುಲ್ ದ್ರಾವಿಡ್ ಅವರಿಂದ ತಮ್ಮ ಟೆಸ್ಟ್ ಕ್ಯಾಪ್ ಪಡೆಯಲಿದ್ದಾರೆ. ಭಾರತ ತಂಡದ ಬೌಲರ್‌ಗಳಾದ ರವೀಂದ್ರ ಜಡೇಜಾ ಮತ್ತು ವಿಕೆಟ್ ಕೀಪರ್-ಬ್ಯಾಟರ್ ಕೆಎಲ್ ರಾಹುಲ್ ಗಾಯಗೊಂಡಿರುವ ಕಾರಣ ಎರಡನೇ ಟೆಸ್ಟ್‌ನಿಂದ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಘೋಷಿಸಿದ ನಂತರ ಸರ್ಫ್ರಾಝ್ ಖಾನ್ ಆಯ್ಕೆಯ ಸುದ್ದಿ ಬಂದಿದೆ.
ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಸರ್ಫ್ರಾಝ್ ಖಾನ್ ಗೆ ಇದು ಉತ್ತಮ ಸಮಯ. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಲು ಸಿಕ್ಕಿರುವ ಅವಕಾಶವನ್ನು ಅವರು ಹೇಗೆ ಬಳಸಲಿದ್ದಾರೆ ಎನ್ನುವ ಕುತೂಹಲ ಹೆಚ್ಚಿದೆ. ಸರ್ಫ್ರಾಝ್ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಬೇಕು ಎಂಬ ಕೂಗು ಈ ಹಿಂದೆಯೇ ಕೇಳಿ ಬಂದಿತ್ತು. ಆದರೆ ಅವರಿಗೆ ಅವಕಾಶ ಸಿಕ್ಕಿರಲಿಲ್ಲ.