×
Ad

ಎಲ್ಲ ಐದು ಟೆಸ್ಟ್ ಪಂದ್ಯಗಳಲ್ಲಿ ಟಾಸ್ ಸೋತ ಭಾರತದ 4ನೇ ನಾಯಕ ಗಿಲ್

Update: 2025-07-31 21:57 IST

PC  :  PTI

ಲಂಡನ್, ಜು.31: ಶುಭಮನ್ ಗಿಲ್ ಅವರು ಕ್ರಿಕೆಟ್ ಚರಿತ್ರೆಯಲ್ಲಿ ಅಪರೂಪದ ಹಾಗೂ ಅನಪೇಕ್ಷಿತ ಕ್ಲಬ್‌ ಗೆ ಪ್ರವೇಶಿಸಿದ್ದಾರೆ. ದ ಓವಲ್‌ ನಲ್ಲಿ ಆ್ಯಂಡರ್ಸನ್-ತೆಂಡುಲ್ಕರ್ ಟ್ರೋಫಿಗಾಗಿ ನಡೆಯುತ್ತಿರುವ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ವೇಳೆ ಟಾಸ್ ಪ್ರಕ್ರಿಯೆಯಲ್ಲಿ ಗಿಲ್ ಅವರು ಸತತ 5ನೇ ಬಾರಿ ಸೋತಿದ್ದಾರೆ. ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎಲ್ಲ ಐದೂ ಟಾಸ್‌ ಗಳನ್ನು ಸೋತಿರುವ ಭಾರತದ ನಾಲ್ಕನೇ ನಾಯಕ ಎನಿಸಿಕೊಂಡಿದ್ದಾರೆ.

ಅಂತರ್‌ರಾಷ್ಟ್ರೀಯ ಕ್ರಿಕೆಟ್‌ ನಲ್ಲಿ ಭಾರತ ತಂಡವು ಸತತ 15ನೇ ಬಾರಿ ಟಾಸ್ ಸೋತಿದೆ. ಟಾಸ್ ಗೆದ್ದಿರುವ ಇಂಗ್ಲೆಂಡ್ ನಾಯಕ ಓಲಿ ಪೋಪ್ ಅವರು ಮೋಡ ಕವಿದ ವಾತಾವರಣದಲ್ಲಿ ಮೊದಲು ಬೌಲಿಂಗ್ ಆಯ್ದುಕೊಂಡಿದ್ದಾರೆ.

ಟೆಸ್ಟ್ ಇತಿಹಾಸದಲ್ಲಿ 14ನೇ ಬಾರಿ ತಂಡವೊಂದು ಐದು ಪಂದ್ಯಗಳ ಸರಣಿಯಲ್ಲಿ ಎಲ್ಲ ಐದು ಟಾಸ್‌ ಗಳನ್ನು ಸೋತಿದೆ. ಗಿಲ್ ಇದೀಗ ಇದೇ ರೀತಿ ಐದು ಬಾರಿ ಟಾಸ್ ಸೋತಿರುವ ಭಾರತೀಯ ನಾಯಕರ ಪಟ್ಟಿಗೆ ಸೇರಿದ್ದಾರೆ.

ಸದ್ಯ ಸರಣಿಯಲ್ಲಿ ಇಂಗ್ಲೆಂಡ್ ತಂಡವು 2-1ರಿಂದ ಮುನ್ನಡೆಯಲ್ಲಿದೆ. ಸತತ ಟಾಸ್ ಸೋತ ನಂತರ ಸರಣಿಯನ್ನೂ ಸೋತು ಮತ್ತೊಂದು ಅನಪೇಕ್ಷಿತ ದಾಖಲೆ ತಪ್ಪಿಸಿಕೊಳ್ಳಲು ಗಿಲ್ ಬಯಸಿದ್ದಾರೆ. ದ ಓವಲ್ ಟೆಸ್ಟ್‌ ನಲ್ಲಿ ಭಾರತ ತಂಡವು ಜಯ ಸಾಧಿಸಿದರೆ, ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎಲ್ಲ ಟಾಸ್ ಸೋತ ನಂತರ ಸರಣಿ ಸೋಲಿನಿಂದ ಪಾರಾದ ಕೇವಲ 4ನೇ ತಂಡ ಎನಿಸಿಕೊಳ್ಳಲಿದೆ.

►ಲಾಲಾ ಅಮರನಾಥ್(1948-49, ವೆಸ್ಟ್‌ಇಂಡಿಸ್ ವಿರುದ್ಧ)

ಸ್ವತಂತ್ರ ಭಾರತದ ಮೊದಲ ಟೆಸ್ಟ್ ನಾಯಕ ಲಾಲಾ ಅಮರನಾಥ್ 1948-49ರಲ್ಲಿ ವೆಸ್ಟ್‌ಇಂಡೀಸ್ ತಂಡವು ಭಾರತ ಪ್ರವಾಸ ಕೈಗೊಂಡಿದ್ದಾಗ ಎಲ್ಲ ಐದು ಟಾಸ್‌ ಗಳನ್ನು ಸೋತಿದ್ದರು. ವಿಂಡೀಸ್ ತಂಡದ ನಾಯಕ ಜಾನ್ ಗಡ್ಡಾರ್ಡ್ ಎಲ್ಲ ಐದೂ ಟಾಸ್‌ ಗಳನ್ನು ಗೆದ್ದಿದ್ದರು. ಪ್ರವಾಸಿ ತಂಡ ವಿಂಡೀಸ್ ಸರಣಿಯನ್ನು 1-0 ಅಂತರದಿಂದ ಗೆದ್ದಿತ್ತು.

►ಕಪಿಲ್‌ ದೇವ್(1982-83ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ)

ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್‌ಪಟ್ಟಕ್ಕೇರುವ ಮೊದಲು ಕಪಿಲ್‌ ದೇವ್ ವೆಸ್ಟ್‌ಇಂಡೀಸ್‌ಗೆ ಪ್ರವಾಸ ಕೈಗೊಂಡಿದ್ದರು. ಆಗ ಅವರು ಎಲ್ಲ 5 ಟಾಸ್‌ ಗಳನ್ನು ಸೋತಿದ್ದರು. ಕ್ಲೈವ್ ಲಾಯ್ಡ್ ನಾಯಕತ್ವದ ವಿಂಡೀಸ್ ವಿರುದ್ಧ ಭಾರತ ತಂಡವು ಒಂದೂ ಟೆಸ್ಟ್ ಪಂದ್ಯವನ್ನು ಗೆದ್ದಿರಲಿಲ್ಲ. ಸರಣಿಯನ್ನು ವಿಂಡೀಸ್ 2-0 ಅಂತರದಿಂದ ಗೆದ್ದುಕೊಂಡಿತ್ತು.

►ವಿರಾಟ್ ಕೊಹ್ಲಿ(2018ರಲ್ಲಿ ಇಂಗ್ಲೆಂಡ್ ವಿರುದ್ಧ)

ಗಿಲ್‌ಗಿಂತ ಮೊದಲು ವಿರಾಟ್ ಕೊಹ್ಲಿ ಕೂಡ 2018ರಲ್ಲಿ ಭಾರತ ತಂಡವು ಇಂಗ್ಲೆಂಡ್‌ಗೆ ಪ್ರವಾಸಕೈಗೊಂಡಿದ್ದಾಗ ಒಂದೂ ಟಾಸ್ ಗೆದ್ದಿರಲಿಲ್ಲ. ಜೋ ರೂಟ್ ನಾಯಕತ್ವದಲ್ಲಿ ಇಂಗ್ಲೆಂಡ್ ತಂಡವು ಸರಣಿಯನ್ನು 4-1 ಅಂತರದಿಂದ ಗೆದ್ದುಕೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News