ಟಾಮ್ ಬ್ಲಂಡೆಲ್ | Photo Credit : X 

ಕ್ರೈಸ್ಟ್‌ಚರ್ಚ್: ಭಾರತದ ಬೌಲರ್‌ ಗಳ ಸಂಘಟಿತ ದಾಳಿಗೆ ಸಿಲುಕಿ 110 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ನ್ಯೂಝಿಲೆಂಡ್ ತಂಡಕ್ಕೆ ಟಾಮ್ ಬ್ಲಂಡೆಲ್ ಮತ್ತು ಗ್ಲೆನ್ ಫಿಲಿಪ್ಸ್ ಆಸರೆಯಾದರು. ಇಬ್ಬರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಆತಿಥೇಯ ತಂಡ ಭಾರತದ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ 85 ಓವರ್‌ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 246 ರನ್ ಗಳಿಸಿದೆ.

ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಆರಂಭದಲ್ಲಿ ಹ್ಯಾಗ್ಲಿ ಓವಲ್‌ ನ ಹಸಿರು ಹುಲ್ಲುಹಾಸಿನ ಪಿಚ್ ವೇಗದ ಬೌಲರ್‌ಗಳಿಗೆ ಸ್ವಿಂಗ್ ಮತ್ತು ಬೌನ್ಸ್‌ ನ ನೆರವು ನೀಡುತ್ತಿದ್ದರೂ, ಭಾರತೀಯ ವೇಗಿಗಳು ಅದರ ಸಂಪೂರ್ಣ ಲಾಭ ಪಡೆಯುವಲ್ಲಿ ವಿಫಲರಾದರು. ಶಿಸ್ತುಬದ್ಧ ಬೌಲಿಂಗ್ ಕೊರತೆಯ ಜತೆಗೆ ಫೀಲ್ಡಿಂಗ್‌ ನಲ್ಲಿಯೂ ಕೆಲವು ತಪ್ಪುಗಳು ನಡೆದವು. ನ್ಯೂಝಿಲೆಂಡ್ ನಾಯಕ ಟಾಮ್ ಲ್ಯಾಥಮ್ 29 ರನ್ ಗಳಿಸಿದ್ದಾಗ ಕೆ.ಎಲ್. ರಾಹುಲ್ ಜೀವದಾನ ನೀಡಿದರು.

ಈ ಅವಕಾಶದ ಲಾಭ ಪಡೆದ ಲ್ಯಾಥಮ್ ಮತ್ತು ಡೆವೊನ್ ಕಾನ್ವೇ ಮೊದಲ ವಿಕೆಟ್‌ ಗೆ ಉತ್ತಮ ಜೊತೆಯಾಟ ನೀಡಿದರು. ಎಚ್ಚರಿಕೆಯಿಂದ ಆಡಿದ ಇಬ್ಬರೂ ಎಸೆತಗಳನ್ನು ದಂಡಿಸುತ್ತಾ ರನ್ ಗಳಿಸಿದರು. ಊಟದ ವಿರಾಮದ ಬಳಿಕ ಗುರ್ನೂರ್ ಬ್ರಾರ್ ಅವರು ಕಾನ್ವೇ (31) ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸುವ ಮೂಲಕ ಭಾರತಕ್ಕೆ ಮೊದಲ ಯಶಸ್ಸು ತಂದುಕೊಟ್ಟರು.

ಮಧ್ಯಾಹ್ನದ ಅವಧಿಯಲ್ಲಿ ಭಾರತೀಯ ಬೌಲರ್‌ಗಳು ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಪಿಚ್ ಬ್ಯಾಟಿಂಗ್‌ ಗೆ ಹೆಚ್ಚು ಅನುಕೂಲಕರವಾಗುತ್ತಿದ್ದರೂ, ಸ್ಟಂಪ್‌ ಗಳನ್ನು ಗುರಿಯಾಗಿಸಿಕೊಂಡು ಬೌಲಿಂಗ್ ಮಾಡಿದ ಬೌಲರ್‌ ಗಳು ನ್ಯೂಝಿಲೆಂಡ್‌ ನ ರನ್ ಗಳಿಕೆಗೆ ಕಡಿವಾಣ ಹಾಕಿದರು. 24 ಓವರ್‌ ಗಳಲ್ಲಿ ತಂಡ ಕೇವಲ 54 ರನ್ ಗಳಿಸಲಷ್ಟೇ ಶಕ್ತವಾಯಿತು.

ಅಂಶುಲ್ ಕಂಬೋಜ್ ಅವರು ಹೆನ್ರಿ ನಿಕೋಲ್ಸ್ (16) ಅವರನ್ನು ಔಟ್ ಮಾಡಿದರೆ, ಆಕಾಶ್ ದೀಪ್ ಅವರು 59 ರನ್ ಗಳಿಸಿದ್ದ ಲ್ಯಾಥಮ್ ಅವರನ್ನು ಪೆವಿಲಿಯನ್‌ ಗೆ ಕಳುಹಿಸಿದರು. ಬಳಿಕ ರಚಿನ್ ರವೀಂದ್ರ ಅವರನ್ನು ಶೂನ್ಯಕ್ಕೆ ಔಟ್ ಮಾಡುವ ಮೂಲಕ ಆಕಾಶ್ ದೀಪ್ ಮತ್ತೊಂದು ಯಶಸ್ಸು ಪಡೆದರು. ಇದರೊಂದಿಗೆ 110/1ರಲ್ಲಿದ್ದ ನ್ಯೂಝಿಲೆಂಡ್ 110/4ಕ್ಕೆ ಕುಸಿಯಿತು.

ಬುಮ್ರಾ ಮತ್ತು ಗುರ್ನೂರ್ ಬ್ರಾರ್ ಕೂಡ ಶಿಸ್ತುಬದ್ಧ ಬೌಲಿಂಗ್ ಮೂಲಕ ಒತ್ತಡ ಕಾಯ್ದುಕೊಂಡರು. ಬ್ಯಾಟರ್‌ ಗಳ ಬ್ಯಾಟ್‌ ನ ಅಂಚಿಗೆ ಹಲವು ಬಾರಿ ಚೆಂಡು ತಾಗಿದರೂ ಭಾರತಕ್ಕೆ ಮತ್ತಷ್ಟು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.

ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ನ್ಯೂಝಿಲೆಂಡ್‌ ಗೆ ಮಿಚೆಲ್ ಮತ್ತು ಟಾಮ್ ಬ್ಲಂಡೆಲ್ ಆಸರೆಯಾದರು. ಐದನೇ ವಿಕೆಟ್‌ಗೆ 74 ರನ್‌ಗಳ ಜೊತೆಯಾಟವಾಡಿದ ಈ ಜೋಡಿ ತಂಡವನ್ನು ಕುಸಿತದಿಂದ ಪಾರುಮಾಡಿತು.

ಆದರೆ, ವಾಷಿಂಗ್ಟನ್ ಸುಂದರ್ ತಮ್ಮ ಸ್ಪಿನ್ ಮತ್ತು ಬೌನ್ಸ್ ಮೂಲಕ ಮಿಚೆಲ್ ಅವರನ್ನು ನಿಯಂತ್ರಿಸಿದರು. ಅಂತಿಮವಾಗಿ 74 ಎಸೆತಗಳಲ್ಲಿ 4 ಬೌಂಡರಿಗಳ ಸಹಿತ 31 ರನ್ ಗಳಿಸಿದ್ದ ಮಿಚೆಲ್, ಸುಂದರ್ ಬೌಲಿಂಗ್‌ ನಲ್ಲಿ ಧ್ರುವ್ ಜುರೆಲ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಆಗ ನ್ಯೂಝಿಲೆಂಡ್ 184 ರನ್‌ ಗಳಿಗೆ ಐದನೇ ವಿಕೆಟ್ ಕಳೆದುಕೊಂಡಿತ್ತು.

ಮಿಚೆಲ್ ನಿರ್ಗಮನದ ಬಳಿಕ ಗ್ಲೆನ್ ಫಿಲಿಪ್ಸ್ ಕ್ರೀಸ್‌ ಗೆ ಬಂದರು. ಬ್ಲಂಡೆಲ್ ಜೊತೆಗೂಡಿ ತಂಡದ ಇನಿಂಗ್ಸ್‌ ಗೆ ಚೇತರಿಕೆ ನೀಡಿದರು. ತಮ್ಮ 50ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಬ್ಲಂಡೆಲ್ 117 ಎಸೆತಗಳಲ್ಲಿ 6 ಬೌಂಡರಿಗಳ ಸಹಿತ ಅರ್ಧಶತಕ ಪೂರೈಸಿದರು. ಇದು ಅವರ 13ನೇ ಟೆಸ್ಟ್ ಅರ್ಧಶತಕವಾಗಿದೆ.

ಫಿಲಿಪ್ಸ್ ಕೂಡ ಎಚ್ಚರಿಕೆಯ ಆಟವಾಡಿ ರನ್ ಗಳಿಸುತ್ತಾ ಬ್ಲಂಡೆಲ್‌ಗೆ ಉತ್ತಮ ಸಾಥ್ ನೀಡಿದರು. ದಿನದಾಟದ ಅಂತ್ಯಕ್ಕೆ ಬ್ಲಂಡೆಲ್ 53 ಮತ್ತು ಫಿಲಿಪ್ಸ್ 36 ರನ್ ಗಳಿಸಿ ಅಜೇಯರಾಗುಳಿದರು.

80 ಓವರ್‌ ಗಳ ಬಳಿಕ ಭಾರತಕ್ಕೆ ಎರಡನೇ ಹೊಸ ಚೆಂಡು ಪಡೆಯುವ ಅವಕಾಶವಿದ್ದರೂ, ತಕ್ಷಣವೇ ಅದನ್ನು ಬಳಸಿಕೊಳ್ಳಲಿಲ್ಲ. ನಂತರ ಹೊಸ ಚೆಂಡಿನೊಂದಿಗೆ ಬೌಲಿಂಗ್ ಮಾಡಿದರೂ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.

ಮೊದಲ ಎರಡು ಅವಧಿಗಳಲ್ಲಿ ಭಾರತ ಮೇಲುಗೈ ಸಾಧಿಸಿತ್ತು. ಆದರೆ, ಅಂತಿಮ ಅವಧಿಯಲ್ಲಿ ನ್ಯೂಝಿಲೆಂಡ್ ರನ್ ಗಳಿಕೆಯ ವೇಗ ಹೆಚ್ಚಿಸಿಕೊಂಡಿತು. ಮೊದಲ ಎರಡು ಅವಧಿಗಳಲ್ಲಿ ಕ್ರಮವಾಗಿ ಪ್ರತಿ ಓವರ್‌ ಗೆ 2.96 ಮತ್ತು 2.25 ರನ್ ಗಳಿಸಿದ್ದ ತಂಡ, ಕೊನೆಯ ಅವಧಿಯಲ್ಲಿ 3.29ರ ಸರಾಸರಿಯಲ್ಲಿ ರನ್ ಗಳಿಸಿತು. ದಿನದ ಕೊನೆಯ ಓವರ್‌ ನಲ್ಲಿ ಆಕಾಶ್ ದೀಪ್ ಬೌಲಿಂಗ್ ಎದುರಿಸಿದ ಬ್ಲಂಡೆಲ್ ಮತ್ತು ಫಿಲಿಪ್ಸ್ ವಿಕೆಟ್ ಕಳೆದುಕೊಳ್ಳದೆ ದಿನದಾಟ ಮುಗಿಸಿದರು.

ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತ್ತು. ಇದೀಗ ಎರಡನೇ ಪಂದ್ಯದಲ್ಲಿ ಗೆಲುವು ಸಾಧಿಸಿ ಸರಣಿಯಲ್ಲಿ ಮುನ್ನಡೆ ಪಡೆಯಲು ಉಭಯ ತಂಡಗಳು ಎದುರು ನೋಡುತ್ತಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಇರ್ಷಾದ್ ಎಂ. ವೇಣೂರು/ವಾರ್ತಾಭಾರತಿ

contributor

ಇರ್ಷಾದ್ ಎಂ. ವೇಣೂರು ಅವರು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು, ಪತ್ರಿಕೋದ್ಯಮ ಕ್ಷೇತ್ರದಲ್ಲಿ 13 ವರ್ಷಗಳ ಅನುಭವ ಹೊಂದಿದ್ದಾರೆ. ಪ್ರಸ್ತುತ ‘ವಾರ್ತಾಭಾರತಿ’ಯಲ್ಲಿ ಡಿಜಿಟಲ್ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಡೆಕ್ಕನ್ ಹೆರಾಲ್ಡ್–ಪ್ರಜಾವಾಣಿ’ ಸಮೂಹದಲ್ಲಿ ಫೋಟೊ ಜರ್ನಲಿಸ್ಟ್ ಆಗಿಯೂ ಕೆಲಸ ಮಾಡಿದ್ದಾರೆ. ಅಂತರರಾಷ್ಟ್ರೀಯ ವಿದ್ಯಮಾನಗಳು, ಮಧ್ಯಪ್ರಾಚ್ಯದ ಸಂಘರ್ಷಗಳು, ಗಲ್ಫ್ ರಾಷ್ಟ್ರಗಳ ಬೆಳವಣಿಗೆಗಳು, ರಾಜಕೀಯ, ವಾಯುಯಾನ, ಅಪರಾಧ ಮತ್ತು ಕ್ರೀಡೆ ಅವರ ಆಸಕ್ತಿಯ ಸುದ್ದಿ ಕ್ಷೇತ್ರಗಳಾಗಿವೆ.