Photo Credit : x

ಲಕ್ನೊ, ನ.29: ಸಯ್ಯದ್ ಮೋದಿ ಇಂಟರ್ನ್ಯಾಶನಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಅವಳಿ ಪ್ರಶಸ್ತಿ ಗೆಲ್ಲುವ ಭಾರತದ ಕನಸು ಭಗ್ನವಾಗಿದೆ. ಹಾಲಿ ಚಾಂಪಿಯನ್ಗಳಾದ ಟ್ರೀಸಾ ಜೋಲಿ ಹಾಗೂ ಗಾಯತ್ರಿ ಗೋಪಿಚಂದ್, ಯುವ ಆಟಗಾರ್ತಿ ತನ್ವಿ ಶರ್ಮಾ ಕ್ರಮವಾಗಿ ಮಹಿಳೆಯರ ಡಬಲ್ಸ್ ಹಾಗೂ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ ನಲ್ಲಿ ಎಡವಿದ್ದಾರೆ.

ಅಗ್ರ ಶ್ರೇಯಾಂಕದ ಟ್ರೀಸಾ ಹಾಗೂ ಗಾಯತ್ರಿ ಮಹಿಳೆಯರ ಡಬಲ್ಸ್ ಫೈನಲ್ ನಲ್ಲಿ ಇಂಡೋನೇಶ್ಯದ ನಾಲ್ಕನೇ ಶ್ರೇಯಾಂಕದ ಜೋಡಿ ಇಸ್ಯಾನಾ ಸಯಾಹಿರಾ ಮೇಡಾ ಹಾಗೂ ರಿಂಜನಿ ಕ್ವಿನ್ನರಾ ನಾಸ್ತಿನೆ ವಿರುದ್ಧ ಸೋತಿದ್ದಾರೆ.

17ರ ವಯಸ್ಸಿನ ತನ್ವಿ ಶರ್ಮಾ ಕೂಡ ಉತ್ತಮ ಆರಂಭದ ಹೊರತಾಗಿಯೂ ಪ್ರಶಸ್ತಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿದರು. ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ ನಲ್ಲಿ ಥಾಯ್ಲೆಂಡ್ ಆಟಗಾರ್ತಿ ಸುಪನಿದಾ ಕಾಟೆಥೊಂಗ್ ವಿರುದ್ಧ ಸೋತಿದ್ದಾರೆ.

ಪಂದ್ಯಾವಳಿಯಲ್ಲಿ ಸತತ ಮೂರನೇ ಪ್ರಶಸ್ತಿಯ ಬೇಟೆಯಲ್ಲಿದ್ದ ಟ್ರೀಸಾ ಹಾಗೂ ಗಾಯತ್ರಿ ಭರವಸೆಯ ಆರಂಭ ಪಡೆದಿದ್ದರು. ಆದರೆ ಅಂತಿಮವಾಗಿ 24-22, 12-21, 19-21 ಗೇಮ್ ಗಳ ಅಂತರದಿಂದ ಸೋತಿದ್ದಾರೆ.

ಭಾರತೀಯ ಜೋಡಿಯು ಮೊದಲ ಗೇಮ್ ಅನ್ನು 24-22 ಅಂತರದಿಂದ ರೋಚಕವಾಗಿ ಗೆದ್ದುಕೊಂಡು ಶುಭಾರಂಭ ಮಾಡಿತ್ತು. ಆದರೆ ಎರಡನೇ ಗೇಮ್ ಅನ್ನು 21-12ರಿಂದ ಗೆದ್ದುಕೊಂಡ ಇಂಡೋನೇಶ್ಯದ ಆಟಗಾರ್ತಿಯರು ತಿರುಗೇಟು ನೀಡಿದರು.

ಟ್ರೀಸಾ ಹಾಗೂ ಗಾಯತ್ರಿ ಮೂರನೇ ಹಾಗೂ ನಿರ್ಣಾಯಕ ಗೇಮ್ ನಲ್ಲಿ ಲಯ ಕಂಡುಕೊಂಡಂತೆ ಕಂಡುಬಂದರು. ಹೆಚ್ಚಿನ ಅವಧಿಯಲ್ಲಿ ಹಿಡಿತ ಸಾಧಿಸಿದರು. ಆದರೆ ಇಂಡೋನೇಶ್ಯದ ಜೋಡಿ ಪ್ರಬಲ ಪ್ರತಿಹೋರಾಟ ನೀಡಿ 21-19ರಿಂದ ಮೂರನೇ ಗೇಮ್ ಜಯಿಸಿ ಪ್ರಶಸ್ತಿಗೆ ಮುತ್ತಿಟ್ಟಿತು.

ಸೆಮಿಫೈನಲ್ ನಲ್ಲಿ ಉಕ್ರೇನ್ ನ ಪೊಲಿನಾ ಹಾಗೂ ಕಾಂಟೆಮಿರ್ರನ್ನು ಮಣಿಸಿ ಪಂದ್ಯಾವಳಿಯಲ್ಲಿ ಸತತ ಮೂರನೇ ಬಾರಿ ಫೈನಲ್‌ ಗೆ ತಲುಪಿದ್ದ ಭಾರತೀಯ ಜೋಡಿಯು ನಿರಾಶೆಯೊಂದಿಗೆ ತನ್ನ ಅಭಿಯಾನ ಅಂತ್ಯಗೊಳಿಸಿತು.

► ಸಿಂಗಲ್ಸ್ ಫೈನಲ್ ನಲ್ಲಿ ಸೋತ ತನ್ವಿ ಶರ್ಮಾ

ಭಾರತದ ನಿರಾಶಾದಾಯಕ ಪ್ರದರ್ಶನವು ಮಹಿಳೆಯರ ಸಿಂಗಲ್ಸ್ ಫೈನಲ್ ನಲ್ಲೂ ಮುಂದುವರಿಯಿತು. ದ್ವಿತೀಯ ಶ್ರೇಯಾಂಕದ ತನ್ವಿ ಥಾಯ್ಲೆಂಡ್ ನ ನಾಲ್ಕನೇ ಶ್ರೇಯಾಂಕದ ಸುಪನಿದಾ ಕಾಟೆಥೊಂಗ್ ವಿರುದ್ಧ ಸೋತಿದ್ದಾರೆ.

ಈ ವರ್ಷಾರಂಭದಲ್ಲಿ ತೈಪೆ ಓಪನ್ ಸೂಪರ್-300 ಪ್ರಶಸ್ತಿಯನ್ನು ಜಯಿಸಿದ್ದ 17ರ ವಯಸ್ಸಿನ ತನ್ವಿ ಮೊದಲ ಗೇಮ್ ಅನ್ನು 21-11 ಅಂತರದಿಂದ ಗೆದ್ದು ಪ್ರಾಬಲ್ಯ ಮೆರೆದಿದ್ದರು.

ಆದರೆ ಸುಪನಿದಾ ಅವರು ಎರಡನೇ ಗೇಮ್ ನಲ್ಲಿ ತಿರುಗೇಟು ನೀಡಿ ಭಾರತೀಯ ಯುವ ಆಟಗಾರ್ತಿಯನ್ನು ಒತ್ತಡಕ್ಕೆ ಸಿಲುಕಿಸಿದರು. 21-12 ಅಂತರದಿಂದ ಎರಡನೇ ಗೇಮ್ ಜಯಿಸಿ ಸ್ಪರ್ಧೆಯನ್ನು ಸಮಬಲಗೊಳಿಸಿದರು.

ಥಾಯ್ಲೆಂಡ್ ಶಟ್ಲರ್ ಮೂರನೇ ಗೇಮ್ ನಲ್ಲೂ ತನ್ನ ಪ್ರಾಬಲ್ಯ ಮುಂದುವರಿಸಿದರು. ತನ್ವಿ ತನ್ನ ಹಿಡಿತ ಸಾಧಿಸಲು ಪರದಾಟ ನಡೆಸಿದರು. ಕೊನೆಯ ಹಂತದಲ್ಲಿ ಮೇಲುಗೈ ಕಾಯ್ದುಕೊಂಡ ಥಾಯ್ಲೆಂಡ್ ಆಟಗಾರ್ತಿ 15-21ರಿಂದ ಮೂರನೇ ಗೇಮ್ ಗೆದ್ದು, 11-21, 21-12, 21-15 ಗೇಮ್ ಗಳ ಅಂತರದಿಂದ ಪಂದ್ಯ ಜಯಿಸಿದರು.

ಭಾರತದ ಇಬ್ಬರೂ ಫೈನಲಿಸ್ಟ್ ಗಳು ಅಂತಿಮ ತಡೆ ದಾಟುವಲ್ಲಿ ವಿಫಲವಾಗಿದ್ದಾರೆ. ಪಂದ್ಯಾವಳಿಯ ಕೊನೆಯ ದಿನ ಆತಿಥೇಯರ ಸವಾಲು ಪ್ರಶಸ್ತಿ ಇಲ್ಲದೆ ಕೊನೆಗೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ಸತೀಶ್ ಶೆಟ್ಟಿ , ವಾರ್ತಾಭಾರತಿ

contributor