ಸಚಿನ್ ತೆಂಡುಲ್ಕರ್ ದಾಖಲೆ ಹಿಂದಿಕ್ಕಿ ಮಾಂಜ್ರೇಕರ್ ದಾಖಲೆ ಸರಿಗಟ್ಟಿದ ಜೈಸ್ವಾಲ್
33 ವಿಭಿನ್ನ ಮೈದಾನಗಳಲ್ಲಿ ಟೆಸ್ಟ್ ಪಂದ್ಯವಾಡಿದ ಅಪರೂಪದ ಸಾಧನೆ
ಜೈಸ್ವಾಲ್ | Photo Credit : PTI
ಕ್ರೈಸ್ಟ್ಚರ್ಚ್, ನ. 27: ತಮ್ಮ ಮೊದಲ 33 ಟೆಸ್ಟ್ ಪಂದ್ಯಗಳನ್ನು 33 ವಿಭಿನ್ನ ಕ್ರೀಡಾಂಗಣಗಳಲ್ಲಿ ಆಡಿರುವ ಯಶಸ್ವಿ ಜೈಸ್ವಾಲ್, ಟೆಸ್ಟ್ ಕ್ರಿಕೆಟ್ನಲ್ಲಿ ಅಪರೂಪದ ಮೈಲಿಗಲ್ಲು ತಲುಪಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ನ್ಯೂಝಿಲೆಂಡ್ ತಂಡದ ವಿರುದ್ಧ ಕ್ರೈಸ್ಟ್ಚರ್ಚ್ನ ಹಾಗ್ಲೆ ಓವಲ್ ನಲ್ಲಿ ಶುಕ್ರವಾರ ಆರಂಭವಾದ ಎರಡನೇ ಟೆಸ್ಟ್ ಪಂದ್ಯದ ವೇಳೆ ಭಾರತ ತಂಡದ ಆರಂಭಿಕ ಆಟಗಾರ ಈ ಸಾಧನೆ ಮಾಡಿದ್ದಾರೆ.
2023ರ ಜುಲೈ 12ರಂದು ರೋಸೌದ ವಿಂಡ್ಸರ್ ಪಾರ್ಕ್ನಲ್ಲಿ ವೆಸ್ಟ್ಇಂಡೀಸ್ ವಿರುದ್ಧ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಜೈಸ್ವಾಲ್, ಈವರೆಗೆ ಆಡಿರುವ 33 ಪಂದ್ಯಗಳನ್ನೂ ವಿಭಿನ್ನ ಮೈದಾನಗಳಲ್ಲಿ ಆಡಿದ್ದಾರೆ.
ಭಾರತ ತಂಡದ ಮಾಜಿ ಬ್ಯಾಟರ್ ಸಂಜಯ್ ಮಾಂಜ್ರೇಕರ್ ಕೂಡ ತಮ್ಮ ಮೊದಲ 33 ಟೆಸ್ಟ್ ಪಂದ್ಯಗಳನ್ನು 33 ವಿಭಿನ್ನ ಮೈದಾನಗಳಲ್ಲಿ ಆಡಿದ್ದರು. ಹೀಗಾಗಿ ಜೈಸ್ವಾಲ್ ಅವರ ಈ ಸಾಧನೆಯು ಮಾಂಜ್ರೇಕರ್ ದಾಖಲೆಯನ್ನು ಸರಿಗಟ್ಟಿದೆ. ಲೆಜೆಂಡರಿ ಬ್ಯಾಟರ್ ಸಚಿನ್ ತೆಂಡುಲ್ಕರ್ ತಮ್ಮ ಮೊದಲ 32 ಟೆಸ್ಟ್ ಪಂದ್ಯಗಳನ್ನು 32 ವಿಭಿನ್ನ ಕ್ರೀಡಾಂಗಣಗಳಲ್ಲಿ ಆಡಿದ್ದರು. ಈ ಮೂಲಕ ಜೈಸ್ವಾಲ್ ಸಚಿನ್ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ.
ಭಾರತದ ಮಾಜಿ ವೇಗದ ಬೌಲರ್ ಜಾವಗಲ್ ಶ್ರೀನಾಥ್ ಹಾಗೂ ವೆಸ್ಟ್ಇಂಡೀಸ್ ನ ವಿಕೆಟ್ಕೀಪರ್-ಬ್ಯಾಟರ್ ದಿನೇಶ್ ರಾಮ್ದಿನ್ ಈ ಪಟ್ಟಿಯ ಅಗ್ರ-5ರಲ್ಲಿ ಸ್ಥಾನ ಪಡೆದಿದ್ದಾರೆ. ಈ ಇಬ್ಬರು ಆಟಗಾರರು ತಮ್ಮ ದೇಶದ ಪರ ಮೊದಲ 24 ಟೆಸ್ಟ್ ಪಂದ್ಯಗಳನ್ನು ವಿಭಿನ್ನ ತಾಣಗಳಲ್ಲಿ ಆಡಿದ್ದರು.
ಜೈಸ್ವಾಲ್ 33 ಟೆಸ್ಟ್ ಪಂದ್ಯಗಳನ್ನು ಏಳು ಎದುರಾಳಿ ತಂಡಗಳ ವಿರುದ್ಧ ಆಡಿದ್ದಾರೆ. ಇಂಗ್ಲೆಂಡ್ ವಿರುದ್ಧ 10 ಪಂದ್ಯಗಳನ್ನು ಆಡಿದ್ದರೆ, ನ್ಯೂಝಿಲೆಂಡ್ ಹಾಗೂ ಆಸ್ಟ್ರೇಲಿಯ ವಿರುದ್ಧ ತಲಾ ಐದು ಪಂದ್ಯಗಳನ್ನು ಆಡಿದ್ದಾರೆ. ವೆಸ್ಟ್ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ತಲಾ ನಾಲ್ಕು ಪಂದ್ಯಗಳನ್ನು ಆಡಿದ್ದಾರೆ. ಬಾಂಗ್ಲಾದೇಶ ಹಾಗೂ ಶ್ರೀಲಂಕಾ ವಿರುದ್ಧ ತಲಾ ಎರಡು ಮತ್ತು ಅಫ್ಘಾನಿಸ್ತಾನದ ವಿರುದ್ಧ ಒಂದು ಪಂದ್ಯವನ್ನಾಡಿದ್ದಾರೆ.
ಭಾರತ ತಂಡವು 2027ರಲ್ಲಿ ಆಸ್ಟ್ರೇಲಿಯ ವಿರುದ್ಧ ಐದು ಟೆಸ್ಟ್ ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಅಭಿಯಾನ ನಡೆಸುವಾಗ 24ರ ಹರೆಯದ ಜೈಸ್ವಾಲ್ಗೆ ಮಾಂಜ್ರೇಕರ್ ದಾಖಲೆಯನ್ನು ಹಿಂದಿಕ್ಕುವ ಅವಕಾಶವಿದೆ.
ಮೊದಲ ಟೆಸ್ಟ್ ಪಂದ್ಯವು ಜನವರಿ 21ರಿಂದ 25ರವರೆಗೆ ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ನಡೆಯಲಿದೆ. ಜೈಸ್ವಾಲ್ 2025ರಲ್ಲಿ ಇಂಗ್ಲೆಂಡ್ ವಿರುದ್ಧ ಇದೇ ಮೈದಾನದಲ್ಲಿ ತಮ್ಮ ಚೊಚ್ಚಲ ಏಕದಿನ ಪಂದ್ಯವನ್ನಾಡಿದ್ದರು. ಆದರೆ, ಅವರು ಈ ಮೈದಾನದಲ್ಲಿ ಟೆಸ್ಟ್ ಪಂದ್ಯವನ್ನಾಡಿಲ್ಲ.
2027ರ ಬಾರ್ಡರ್-ಗವಾಸ್ಕರ್ ಟ್ರೋಫಿಯ ಉಳಿದ ಪಂದ್ಯಗಳು ಚೆನ್ನೈನ ಚಿದಂಬರಂ ಸ್ಟೇಡಿಯಂ, ಗುವಾಹಟಿಯ ಬರ್ಸಪಾರಾ ಸ್ಟೇಡಿಯಂ, ರಾಂಚಿಯ ಜೆಎಸ್ಸಿಎ ಇಂಟರ್ನ್ಯಾಶನಲ್ ಸ್ಟೇಡಿಯಂ ಹಾಗೂ ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂಗಳಲ್ಲಿ ನಡೆಯಲಿವೆ. ಜೈಸ್ವಾಲ್ ಈ ಎಲ್ಲ ಮೈದಾನಗಳಲ್ಲಿ ಈಗಾಗಲೇ ಆಡಿದ್ದಾರೆ. ಹೀಗಾಗಿ ನಾಗ್ಪುರದಲ್ಲಿ ಟೆಸ್ಟ್ ಪಂದ್ಯವಾಡಿದ ನಂತರ, ಚೆನ್ನೈನಲ್ಲಿ ನಡೆಯುವ ಪಂದ್ಯವು ವಿಭಿನ್ನ ಮೈದಾನಗಳಲ್ಲಿ ಸತತವಾಗಿ ಟೆಸ್ಟ್ ಆಡಿದ ಅವರ ದಾಖಲೆಗೆ ಅಂತ್ಯ ಹಾಡಲಿದೆ.