×
Ad

ವಿಜಯ್ ಹಝಾರೆ ಟ್ರೋಫಿ: ವೇಗದ ಅರ್ಧಶತಕ ಗಳಿಸಿದ ಸರ್ಫರಾಝ್ ಖಾನ್

ಪಂಜಾಬ್ ವಿರುದ್ಧ 1 ರನ್‌ನಿಂದ ಸೋತ ಮುಂಬೈ

Update: 2026-01-08 22:25 IST

PTI Photo

ಹೊಸದಿಲ್ಲಿ, ಜ.8: ಪಂಜಾಬ್ ವಿರುದ್ಧ ಮುಂಬೈ ಕ್ರಿಕೆಟ್ ತಂಡವು ಒಂದು ರನ್ ಅಂತರದಿಂದ ಸೋತಿದ್ದರೂ ವಿಜಯ್ ಹಝಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಸರ್ಫರಾಝ್ ಖಾನ್ ಹೊಸ ದಾಖಲೆ ನಿರ್ಮಿಸಿದರು.

ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ದಾಖಲೆ ಹೊಂದಿರುವ ಹೊರತಾಗಿಯೂ ಟೆಸ್ಟ್ ತಂಡದಿಂದ ಕಡೆಗಣಿಸಲ್ಪಟ್ಟಿರುವ ಮುಂಬೈ ಬ್ಯಾಟರ್ ಸರ್ಫರಾಝ್ ಗುರುವಾರ ನಡೆದ ಪಂದ್ಯಾವಳಿಯ ಏಳನೇ ಸುತ್ತಿನ ಪಂದ್ಯದಲ್ಲಿ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ವಿಜಯ್ ಹಝಾರೆ ಟ್ರೋಫಿ ಟೂರ್ನಿಯ ಇತಿಹಾಸದಲ್ಲಿ ಅತ್ಯಂತ ವೇಗದ ಅರ್ಧಶತಕ ದಾಖಲಿಸಿದರು. 2020-21ರ ಋತುವಿನಲ್ಲಿ ಛತ್ತೀಸ್‌ಗಢ ವಿರುದ್ದ 16 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದ ಬರೋಡದ ಅತೀತ್ ಶೇಟ್ ಅವರ ವೇಗದ ಅರ್ಧಶತಕದ ದಾಖಲೆಯನ್ನು ಸರ್ಪರಾಝ್ ಮುರಿದರು.

ಸರ್ಫರಾಝ್ ಅವರು ಅಭಿಷೇಕ್ ಶರ್ಮಾ ಅವರ ಓವರ್‌ವೊಂದರಲ್ಲೇ 30 ರನ್ ಕಲೆ ಹಾಕಿದರು. ಕೇವಲ 20 ಎಸೆತಗಳಲ್ಲಿ ಏಳು ಬೌಂಡರಿ ಹಾಗೂ ಐದು ಸಿಕ್ಸರ್‌ಗಳನ್ನು ಸಿಡಿಸಿದ ಸರ್ಫರಾಝ್ ಅವರ ಸ್ಫೋಟಕ ಇನಿಂಗ್ಸ್‌ಗೆ ಮಯಾಂಕ್ ಮರ್ಕಂಡೆ ತೆರೆ ಎಳೆದರು.

ಸರ್ಫರಾಝ್ ಸ್ಫೋಟಕ ಬ್ಯಾಟಿಂಗ್ ಹೊರತಾಗಿಯೂ ಮುಂಬೈ ತಂಡವು ಕೇವಲ ಒಂದು ರನ್‌ನಿಂದ ಪಂದ್ಯವನ್ನು ಸೋತಿದೆ.

ಗೆಲ್ಲಲು 216 ರನ್ ಗುರಿ ಪಡೆದಿದ್ದ ಮುಂಬೈ ತಂಡವು 26.2 ಓವರ್‌ಗಳಲ್ಲಿ 215 ರನ್ ಗಳಿಸಿ ಆಲೌಟಾಯಿತು. ರಘುವಂಶಿ(23 ರನ್) ಹಾಗೂ ಮುಶೀರ್ ಖಾನ್(21 ರನ್)ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡು ಆರಂಭಿಕ ಹಿನ್ನಡೆ ಕಂಡಿತು. ಪ್ರತಿ ದಾಳಿ ನಡೆಸಿದ ಸರ್ಫರಾಝ್ ಅವರು ಮುಂಬೈ ತಂಡದ ರನ್ ಚೇಸ್‌ಗೆ ಬಲ ತುಂಬಿದರು. ನಾಯಕ ಶ್ರೇಯಸ್ ಅಯ್ಯರ್ 45 ರನ್ ಗಳಿಸಿ ಇನಿಂಗ್ಸ್ ಆಧರಿಸಿದರು. ಆದರೆ ಅವರು ಮರ್ಕಂಡೆಗೆ ವಿಕೆಟ್ ಒಪ್ಪಿಸಿದರು.

ಕೆಳ ಮಧ್ಯಮ ಸರದಿಯ ಬ್ಯಾಟರ್‌ಗಳಾದ ಸೂರ್ಯಕುಮಾರ್‌ ಯಾದವ್(15 ರನ್), ಶಿವಂ ದುಬೆ(12 ರನ್)ಹಾಗೂ ಹಾರ್ದಿಕ್ ಟಾಮೋರ್(15 ರನ್) ಅಲ್ಪ ಮೊತ್ತಕ್ಕೆ ಔಟಾಗಿ ಪಂಜಾಬ್ ತಂಡವು ಪಂದ್ಯದ ಮೇಲೆ ಹಿಡಿತ ಸಾಧಿಸುವಲ್ಲಿ ಕಾರಣರಾದರು.

ಮಯಾಂಕ್ ಮರ್ಕಂಡೆ (4-31)ಹಾಗೂ ಗುರ್ನೂರ್ ಬ್ರಾರ್(4-57) ತಲಾ ನಾಲ್ಕು ವಿಕೆಟ್‌ಗಳನ್ನು ಕಬಳಿಸಿ ಮುಂಬೈ ತಂಡಕ್ಕೆ ಗೆಲುವನ್ನು ನಿರಾಕರಿಸಿದರು.

ಪಂಜಾಬ್ 216 ರನ್: ಇದಕ್ಕೂ ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಂಜಾಬ್ ತಂಡವು 216 ರನ್ ಗಳಿಸುವಲ್ಲಿ ಶಕ್ತವಾಯಿತು. ರಮಣ್‌ದೀಪ್ ಸಿಂಗ್(72 ರನ್, 74 ಎಸೆತ)ಹಾಗೂ ಅನ್ಮೋಲ್‌ಪ್ರೀತ್ ಸಿಂಗ್(57 ರನ್, 75 ಎಸೆತ)ಅರ್ಧಶತಕಗಳ ಕೊಡುಗೆ ನೀಡಿದರು.

ಮುಂಬೈ ಬೌಲರ್‌ಗಳ ಪೈಕಿ ಮುಶೀರ್ ಖಾನ್(3-37) ಮೂರು ವಿಕೆಟ್‌ಗಳನ್ನು ಪಡೆದರೆ, ಓಂಕಾರ್ ತರ್ಮಾಲೆ(2-38), ಶಿವಂ ದುಬೆ (2-20)ಹಾಗೂ ಶಶಾಂಕ್(2-57) ತಲಾ ಎರಡು ವಿಕೆಟ್‌ಗಳನ್ನು ಪಡೆದರು.

ಒಂದು ರನ್‌ನಿಂದ ರೋಚಕ ಜಯ ಸಾಧಿಸಿರುವ ಪಂಜಾಬ್ ತಂಡ ‘ಸಿ’ ಗುಂಪಿನಲ್ಲಿ ಅಗ್ರ ಸ್ಥಾನ ಖಚಿತಪಡಿಸಿದೆ. ಪಂಜಾಬ್ ಹಾಗೂ ಮುಂಬೈ ತಂಡಗಳು ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಸ್ಥಾನವನ್ನು ಗಿಟ್ಟಿಸಿಕೊಂಡಿವೆ.

ಮಧ್ಯ ಪ್ರದೇಶ ವಿರುದ್ಧ ಎಡವಿದ ಕರ್ನಾಟಕ ತಂಡ

ಶಿವಾಂಗ್ ಕುಮಾರ್(5-45)ಶಿಸ್ತುಬದ್ಧ ಬೌಲಿಂಗ್ ಹಾಗೂ ನಾಯಕ ವೆಂಕಟೇಶ ಅಯ್ಯರ್ ಅರ್ಧಶತಕದ(ಔಟಾಗದೆ 65, 33 ಎಸೆತ, 4 ಬೌಂಡರಿ,5 ಸಿಕ್ಸರ್)ಕೊಡುಗೆಯ ನೆರವಿನಿಂದ ಮಧ್ಯ ಪ್ರದೇಶ ತಂಡವು ವಿಜಯ್ ಹಝಾರೆ ಟ್ರೋಫಿ ಟೂರ್ನಿಯ ‘ಎ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡವನ್ನು 7 ವಿಕೆಟ್‌ಗಳ ಅಂತರದಿಂದ ಮಣಿಸಿದೆ.

ಏಕದಿನ ಟೂರ್ನಿಯಲ್ಲಿ ಐದನೇ ಗೆಲುವು ದಾಖಲಿಸಿರುವ ಮಧ್ಯಪ್ರದೇಶ ತಂಡ ‘ಎ’ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದು ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದೆ.

ಏಳನೇ ಹಾಗೂ ಕೊನೆಯ ಸುತ್ತಿನ ಪಂದ್ಯದಲ್ಲಿ ಟಾಸ್ ಜಯಿಸಿದ ಮಧ್ಯಪ್ರದೇಶ ತಂಡ ಕರ್ನಾಟಕ ತಂಡವನ್ನು ಬ್ಯಾಟಿಂಗ್‌ಗೆ ಇಳಿಸಿತು.

ಕರ್ನಾಟಕ ತಂಡವು 47.4 ಓವರ್‌ಗಳಲ್ಲಿ 207 ರನ್ ಗಳಿಸಿ ಆಲೌಟಾಯಿತು. ನಾಯಕ ಮಯಾಂಕ ಅಗರ್ವಾಲ್(49 ರನ್, 59 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು. ಮಯಾಂಕ್ ಹಾಗೂ ದೇವದತ್ತ ಪಡಿಕ್ಕಲ್(35 ರನ್, 39 ಎಸೆತ)ಮೊದಲ ವಿಕೆಟ್‌ಗೆ 77 ರನ್ ಜೊತೆಯಾಟ ನಡೆಸಿದರೂ ಬ್ಯಾಟಿಂಗ್ ಕುಸಿತಕ್ಕೆ ಒಳಗಾದ ಕರ್ನಾಟಕ ತಂಡ ಕನಿಷ್ಠ ಮೊತ್ತ ಗಳಿಸಿತು. ವಿದ್ಯಾಧರ ಪಾಟೀಲ್(ಔಟಾಗದೆ 34, 37 ಎಸೆತ) ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.

ಗೆಲ್ಲಲು ಸುಲಭ ಸವಾಲು ಪಡೆದಿದ್ದ ಮಧ್ಯಪ್ರದೇಶ ತಂಡವು 23.2 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 208 ರನ್ ಗಳಿಸಿತು.

ಯಶ್ ದುಬೆ(40 ರನ್, 43 ಎಸೆತ)ಹಾಗೂ ಹಿಮಾಂಶು ಮಂತ್ರಿ(34 ರನ್, 35 ಎಸೆತ)ಮೊದಲ ವಿಕೆಟ್‌ಗೆ 78 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ವೆಂಕಟೇಶ ಅಯ್ಯರ್ ಹಾಗೂ ತ್ರಿಪುರೇಶ್ ಸಿಂಗ್(ಔಟಾಗದೆ 36, 12 ಎಸೆತ)ನಾಲ್ಕನೇ ವಿಕೆಟ್‌ಗೆ 78 ರನ್ ಸೇರಿಸಿ ಇನ್ನೂ 160 ಎಸೆತಗಳು ಬಾಕಿ ಇರುವಾಗಲೇ ಮಧ್ಯಪ್ರದೇಶ ತಂಡಕ್ಕೆ ಗೆಲುವು ತಂದುಕೊಟ್ಟರು.

ಕರ್ನಾಟಕದ ಪರವಾಗಿ ವಿದ್ಯಾಧರ ಪಾಟೀಲ್(1-24), ಶ್ರೇಯಸ್ ಗೋಪಾಲ್(1-36)ಹಾಗೂ ಶ್ರೀಶಾ ಆಚಾರ್(1-42)ತಲಾ ಒಂದು ವಿಕೆಟ್‌ಗಳನ್ನು ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News