ಐದನೇ ಆ್ಯಶಸ್ ಟೆಸ್ಟ್| ವಿರಾಟ್ ಕೊಹ್ಲಿ, ವಿವಿ ರಿಚರ್ಡ್ಸ್ ದಾಖಲೆ ಮುರಿದ ಟ್ರಾವಿಸ್ ಹೆಡ್
photo:x/@CricketNDTV
ಸಿಡ್ನಿ, ಜ.9: ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಗುರುವಾರ ಕೊನೆಗೊಂಡಿರುವ ಐದನೇ ಹಾಗೂ ಅಂತಿಮ ಆ್ಯಶಸ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯ ಕ್ರಿಕೆಟ್ ತಂಡವು ಇಂಗ್ಲೆಂಡ್ ತಂಡವನ್ನು ಐದು ವಿಕೆಟ್‌ಗಳ ಅಂತರದಿಂದ ಮಣಿಸಿ ಸರಣಿಯನ್ನು 4-1 ಅಂತರದಿಂದ ವಶಪಡಿಸಿಕೊಂಡಿದೆ. ಈ ಪಂದ್ಯದಲ್ಲಿ ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್ ಬ್ಯಾಟಿಂಗ್‌ನಲ್ಲಿ ಮತ್ತೊಮ್ಮೆ ಮಿಂಚಿದ್ದಾರೆ.
ಎಡಗೈ ಬ್ಯಾಟರ್ ಹೆಡ್ ಮೊದಲ ಇನಿಂಗ್ಸ್‌ನಲ್ಲಿ ಕೇವಲ 166 ಎಸೆತಗಳಲ್ಲಿ 163 ರನ್ ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 29 ರನ್ ಗಳಿಸಿದ್ದರು. ಇದರೊಂದಿಗೆ ಪಂದ್ಯದಲ್ಲಿ ಒಟ್ಟು 192 ರನ್ ಗಳಿಸಿ ‘ಪಂದ್ಯಶ್ರೇಷ್ಠ’ ಪ್ರಶಸ್ತಿಗೆ ಭಾಜನರಾದರು.
ಹೆಡ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 11ನೇ ಬಾರಿ ‘ಪಂದ್ಯಶ್ರೇಷ್ಠ’ ಪ್ರಶಸ್ತಿಗೆ ಆಯ್ಕೆಯಾದರು. ಈ ಮೂಲಕ ಟೆಸ್ಟ್‌ನಲ್ಲಿ ಗರಿಷ್ಠ ‘ಪಂದ್ಯಶ್ರೇಷ್ಠ’ ಪ್ರಶಸ್ತಿ ಪಡೆದವರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿದ್ದಾರೆ.
ಕಳೆದ ವರ್ಷ ಟೆಸ್ಟ್ ಕ್ರಿಕೆಟಿಗೆ ವಿದಾಯ ಹೇಳಿರುವ ಕೊಹ್ಲಿ ಸದ್ಯ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ.
ಮಾಲ್ಕಂ ಮಾರ್ಷಲ್, ಮ್ಯಾಥ್ಯೂ ಹೇಡನ್, ಕೆವಿನ್ ಪೀಟರ್ಸನ್, ಆರ್.ಅಶ್ವಿನ್, ಯೂನಿಸ್ ಖಾನ್, ವಿವಿ ರಿಚರ್ಡ್ಸ್, ಅನಿಲ್ ಕುಂಬ್ಳೆ ಹಾಗೂ ಸ್ಟುವರ್ಟ್ ಬ್ರಾಡ್ ಕೂಡ ಟೆಸ್ಟ್ ಕ್ರಿಕೆಟ್‌ನಲ್ಲಿ 10 ಬಾರಿ ‘ಪಂದ್ಯಶ್ರೇಷ್ಠ’ ಪ್ರಶಸ್ತಿ ಸ್ವೀಕರಿಸಿದ್ದರು.
ಹೆಡ್ ಅವರು ಇಮ್ರಾನ್ ಖಾನ್, ರವೀಂದ್ರ ಜಡೇಜ, ಅರವಿಂದ ಡಿಸಿಲ್ವ, ರಂಗನ ಹೆರಾತ್, ಶಾನ್ ಪೊಲಾಕ್, ಕೇನ್ ವಿಲಿಯಮ್ಸನ್, ಗ್ಲೆನ್ ಮೆಕ್‌ಗ್ರಾತ್, ಡೇನಿಯಲ್ ವೆಟೋರಿ, ಅಲನ್ ಬಾರ್ಡರ್, ಶಿವನಾರಾಯಣ ಚಂದರ್‌ಪಾಲ್ ಹಾಗೂ ರಾಹುಲ್ ದ್ರಾವಿಡ್ ದಾಖಲೆಯನ್ನು ಸರಿಗಟ್ಟಿದರು.
ದಕ್ಷಿಣ ಆಫ್ರಿಕಾದ ಲೆಜೆಂಡರಿ ಆಲ್‌ರೌಂಡರ್ ಜಾಕಸ್ ಕಾಲಿಸ್ 23 ಬಾರಿ ‘ಪಂದ್ಯಶ್ರೇಷ್ಠ’ ಪ್ರಶಸ್ತಿ ಗೆಲ್ಲುವುದರೊಂದಿಗೆ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.
ಟ್ರಾವಿಸ್ ಹೆಡ್ ಅವರು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ತನ್ನ ಚೊಚ್ಚಲ ಶತಕ ದಾಖಲಿಸಿದ್ದರು.