×
Ad

ಸಿಡ್ನಿಯಲ್ಲಿ ಐತಿಹಾಸಿಕ ಶತಕ: ಕಪಿಲ್ ದೇವ್ ಅವರ ಅಪರೂಪದ ದಾಖಲೆ ಸರಿಗಟ್ಟಿದ ಜೇಕಬ್ ಬೆಥೆಲ್

Update: 2026-01-07 21:57 IST

ಜೇಕಬ್ ಬೆಥೆಲ್ | Photo Credit : AP \ PTI

ಹೊಸದಿಲ್ಲಿ: ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಬುಧವಾರ ಆಸ್ಟ್ರೇಲಿಯ ವಿರುದ್ಧ ಐದನೇ ಹಾಗೂ ಅಂತಿಮ ಆ್ಯಶಸ್ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ತನ್ನ ಚೊಚ್ಚಲ ಶತಕವನ್ನು ಸಿಡಿಸಿರುವ ಇಂಗ್ಲೆಂಡ್‌ನ ಜೇಕಬ್ ಬೆಥೆಲ್ ಪ್ರಮುಖ ವೇದಿಕೆಯಲ್ಲಿ ತನ್ನ ಆಗಮನವನ್ನು ಜಗತ್ತಿಗೆ ಸಾರಿದರು.

ನಾಲ್ಕನೇ ದಿನದಾಟವಾದ ಬುಧವಾರ ಒತ್ತಡದಲ್ಲೂ ಉತ್ತಮ ಪ್ರದರ್ಶನ ನೀಡಿದ 22ರ ಹರೆಯದ ಬ್ಯಾಟರ್ ಬೆಥೆಲ್ ಮೂರಂಕೆಯನ್ನು ತಲುಪಿ ದಾಖಲೆ ನಿರ್ಮಿಸಿದರು. ಈ ಇನಿಂಗ್ಸ್‌ನ ಮೂಲಕ ಬೆಥೆಲ್ ಅವರು 22ರ ವಯಸ್ಸಿನಲ್ಲಿ ಆಸ್ಟ್ರೇಲಿಯದ ವಿರುದ್ಧ ಟೆಸ್ಟ್ ಶತಕವನ್ನು ಗಳಿಸಿದ ಇಂಗ್ಲೆಂಡ್‌ನ 9ನೇ ಬ್ಯಾಟರ್ ಎನಿಸಿಕೊಂಡರು. ಜಾನಿ ಬ್ರಿಗ್ಸ್, ಯಂಗ್ ಜಾಕ್ ಹೀರ್ನ್, ಇಫ್ತಿಖರ್ ಅಲಿ ಖಾನ್ ಪಟೌಡಿ, ಕಾಲಿನ್ ಕೌಡ್ರೆ, ಡೇವಿಡ್ ಗೋವೆರ್, ಮೈಕ್ ಅಥೆರ್ಟನ್, ಅಲಸ್ಟೈರ್ ಕುಕ್ ಹಾಗೂ ಬೆನ್ ಸ್ಟೋಕ್ಸ್ ಅವರನ್ನೊಳಗೊಂಡ ಗುಂಪಿಗೆ ಸೇರಿದ್ದಾರೆ.

ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತನ್ನ ಚೊಚ್ಚಲ ಪ್ರಥಮ ದರ್ಜೆ ಹಾಗೂ ಲಿಸ್ಟ್ ಎ ಶತಕಗಳನ್ನು ಗಳಿಸಿದ ಕ್ರಿಕೆಟಿಗರನ್ನು ಒಳಗೊಂಡ ಅಪರೂಪದ ಪಟ್ಟಿಗೆ ಬೆಥೆಲ್ ಸೇರ್ಪಡೆಯಾಗಿದ್ದಾರೆ. ಕಪಿಲ್ ದೇವ್, ಮರ್ಲಾನ್ ಸ್ಯಾಮುಯೆಲ್ಸ್, ಮೆಹಿದಿ ಹಸನ್ ಹಾಗೂ ಕರ್ಟಿಸ್ ಕ್ಯಾಂಫರ್ ಈ ಹಿಂದೆ ಈ ಸಾಧನೆ ಮಾಡಿದ್ದಾರೆ.

ಎರಡನೇ ವಿಶ್ವ ಮಹಾಯುದ್ಧದ ನಂತರ ಆ್ಯಶಸ್ ಟೆಸ್ಟ್ ಸರಣಿಯಲ್ಲಿ ಶತಕ ಗಳಿಸಿದ ಇಂಗ್ಲೆಂಡ್‌ನ ಯುವ ಆಟಗಾರರ ಪೈಕಿ ಒಬ್ಬರೆಂಬ ಹಿರಿಮೆಗೆ ಪಾತ್ರರಾದರು. 22 ವರ್ಷ, 76 ದಿನಗಳಲ್ಲಿ ಶತಕ ಗಳಿಸಿರುವ ಬೆಥೆಲ್, ಡೇವಿಡ್ ಗೊವೆರ್(1978ರಲ್ಲಿ 21 ವರ್ಷ, 258 ದಿನಗಳು), ಅಲಸ್ಟೈರ್ ಕುಕ್(2006ರಲ್ಲಿ ಪರ್ತ್‌ನಲ್ಲಿ 21 ವರ್ಷ, 357 ದಿನಗಳು) ಹಾಗೂ ಕಾಲಿನ್ ಕೌಡ್ರೆ(22 ವರ್ಷ, 7 ದಿನಗಳು, ಮೆಲ್ಬರ್ನ್, 1954)ಅವರ ನಂತರದ ಸ್ಥಾನದಲ್ಲಿದ್ದಾರೆ. ಬೆನ್ ಸ್ಟೋಕ್ಸ್ ಹಾಗೂ ಜೋ ರೂಟ್ ಇಬ್ಬರೂ 22ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದಾರೆ.

ಬೆಥೆಲ್ ಅವರು ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ಪ್ರಥಮ ದರ್ಜೆ ಶತಕ ಗಳಿಸಿದ ಇಂಗ್ಲೆಂಡ್‌ನ ಐದನೇ ಆಟಗಾರನಾಗಿದ್ದಾರೆ. ಹೆನ್ರಿ ವುಡ್(1892), ಜಾಕ್ ರಸೆಲ್(1989), ಸ್ಟುವರ್ಟ್ ಬ್ರಾಡ್(210) ಹಾಗೂ ಗಸ್ ಅಟ್ಕಿನ್ಸನ್(2024)ಈ ಸಾಧನೆ ಮಾಡಿದ್ದಾರೆ.

ಆ್ಯಶಸ್ ಟೆಸ್ಟ್‌ನಲ್ಲಿ ಚೊಚ್ಚಲ ಪ್ರಥಮ ದರ್ಜೆ ಶತಕ ಗಳಿಸಿದ ಇಂಗ್ಲೆಂಡ್‌ನ ಎರಡನೇ ಆಟಗಾರನಾಗಿದ್ದಾರೆ. ಜಾಕ್ ರಸೆಲ್ ಈ ಸಾಧನೆ ಮಾಡಿದ್ದರು.

ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ಪ್ರಥಮ ದರ್ಜೆ ಶತಕ ಗಳಿಸಿದ ಇಂಗ್ಲೆಂಡ್ ಆಟಗಾರರು:

► ಹೆನ್ರಿ ವುಡ್- 1892ರಲ್ಲಿ ಕೇಪ್‌ಟೌನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ

► ಜಾಕ್ ರಸೆಲ್-1989ರಲ್ಲಿ ಓಲ್ಡ್ ಟ್ರಾಫೋರ್ಡ್‌ನಲ್ಲಿ ಆಸ್ಟ್ರೇಲಿಯದ ವಿರುದ್ಧ

► ಸ್ಟುವರ್ಟ್ ಬ್ರಾಡ್-2010ರಲ್ಲಿ ಲಾರ್ಡ್ಸ್‌ನಲ್ಲಿ ಪಾಕಿಸ್ತಾನದ ವಿರುದ್ಧ

► ಅಟ್ಕಿನ್ಸನ್-2024ರಲ್ಲಿ ಲಾರ್ಡ್ಸ್‌ನಲ್ಲಿ ಶ್ರೀಲಂಕಾದ ವಿರುದ್ಧ

► ಜೇಕಬ್ ಬೆಥೆಲ್-2026ರಲ್ಲಿ ಸಿಡ್ನಿಯಲ್ಲಿ ಆಸ್ಟ್ರೇಲಿಯದ ವಿರುದ್ದ

ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಪ್ರಥಮ ದರ್ಜೆ, ಲಿಸ್ಟ್ ಎ ಶತಕ ಗಳಿಸಿದ ಆಟಗಾರರು:

► ಕಪಿಲ್ ದೇವ್

► ಮರ್ಲಾನ್ ಸ್ಯಾಮುಯೆಲ್ಸ್

► ಮೆಹಿದಿ ಹಸನ್ ಮಿರಾಝ್

► ಕರ್ಟಿಸ್ ಕಾಂಫರ್

► ಜೇಕಬ್ ಬೆಥೆಲ್

2ನೇ ಮಹಾಯುದ್ಧದ ನಂತರ ಇಂಗ್ಲೆಂಡ್ ಪರ ಆ್ಯಶಸ್ ಟೆಸ್ಟ್‌ನಲ್ಲಿ ಶತಕ ಗಳಿಸಿದ ಕಿರಿಯ ಆಟಗಾರರು

21 ವರ್ಷ,258 ದಿನಗಳು-ಡೇವಿಡ್ ಗೋವೆರ್, ಪರ್ತ್, 1978

21 ವರ್ಷ, 357 ದಿನಗಳು-ಅಲಸ್ಟೈರ್ ಕುಕ್, ಪರ್ತ್, 2006

22 ವರ್ಷ, 7 ದಿನ-ಕಾಲಿನ್ ಕೌಡ್ರೆ, ಮೆಲ್ಬರ್ನ್ 1954

22 ವರ್ಷ, 76 ದಿನ-ಜೇಕಬ್ ಬೆಥೆಲ್,ಸಿಡ್ನಿ, 2026

22 ವರ್ಷ, 196 ದಿನಗಳು-ಬೆನ್ ಸ್ಟೋಕ್ಸ್, ಪರ್ತ್, 2013

22 ವರ್ಷ, 202 ದಿನಗಳು-ಜೋ ರೂಟ್, ಲಾರ್ಡ್ಸ್, 2013.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News