ಕಾಲ್ತುಳಿತ ದುರಂತದ ಹಿನ್ನೆಲೆ: ಬೆಂಗಳೂರಿನ ಹೊರಗೆ ತವರು ಪಂದ್ಯ ಆಡಲು ಆರ್‌ಸಿಬಿ ತೀರ್ಮಾನ
Photo Credit : PTI
ಬೆಂಗಳೂರು: ಕಳೆದ ಐಪಿಎಲ್ ಸೀಸನ್ ನಲ್ಲಿ ಪ್ರಶಸ್ತಿ ಜಯಿಸಿದ ಆರ್‌ಸಿಬಿಯ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭವಿಸಿದ ಕಾಲ್ತುಳಿತದ ವೇಳೆ 11 ಮಂದಿ ಮೃತಪಟ್ಟು ಇತರ ಹಲವು ಮಂದಿ ಗಾಯಗೊಂಡ ಹಿನ್ನೆಲೆಯಲ್ಲಿ ಪ್ರಸಕ್ತ ಸೀಸನ್ ನಲ್ಲಿ ತನ್ನ ತವರು ಪಂದ್ಯಗಳನ್ನು ಬೆಂಗಳೂರಿನಲ್ಲಿ ಆಡದಿರಲು ನಿರ್ಧರಿಸಿದೆ.
ತವರಿನ ಪಂದ್ಯಗಳನ್ನು ಬೆಂಗಳೂರಿನಲ್ಲಿ ಆಡದಿರಲು ಆರ್‌ಸಿಬಿ ನಿರ್ಧರಿಸಿದೆ ಎಂದು ಉನ್ನತ ಮೂಲಗಳು ದೃಢಪಡಿಸಿವೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯಗಳನ್ನು ಆಯೋಜಿಸುವ ಸಂಬಂಧ ಆರ್‌ಸಿಬಿ ಇದುವರೆಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯನ್ನು ಸಂಪರ್ಕಿಸಿಲ್ಲ ಎಂದು ಮೂಲಗಳು ಹೇಳಿವೆ. ಛತ್ತೀಸ್ಗಢದ ರಾಯಪುರ ಅಥವಾ ಮಧ್ಯಪ್ರದೇಶದ ಇಂಧೋರ್ ನಲ್ಲಿ ತವರು ಪಂದ್ಯಗಳನ್ನು ಆಡಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ. ಐಪಿಎಲ್ ಪಂದ್ಯಗಳು ಮಾರ್ಚ್ 21ರಿಂದ ಆರಂಭವಾಗುವ ನಿರೀಕ್ಷೆ ಇದ್ದು, ಪಂದ್ಯಗಳ ಆಯೋಜನೆಗೆ ವೆಂಕಟೇಶ್ ಪ್ರಸಾದ್ ನೇತೃತ್ವದ ಕೆಎಸ್‌ಸಿಎಗೆ ಸಮಯಾವಕಾಶದ ಕೊರತೆ ಇದೆ.
ವಿರಾಟ್ ಕೊಹ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ವಿರುದ್ಧ 2025ರ ಡಿಸೆಂಬರ್ 24ರಂದು ನಡೆಯಬೇಕಿದ್ದ ದೆಹಲಿ ತಂಡದ ವಿಜಯ್ ಹಜಾರೆ ಟ್ರೋಫಿ ಪಂದ್ಯವನ್ನು ಕೊನೆಕ್ಷಣದಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನಿಂದ ಸ್ಥಳಾಂತರಿಸಲಾಗಿತ್ತು.
ಏತನ್ಮಧ್ಯೆ 2026ರ ಐಪಿಎಲ್ ಸೀಸನ್ ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ತವರು ಪಂದ್ಯಗಳನ್ನು ಪುಣೆಯಲ್ಲಿ ಆಯೋಜಿಸಲು ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ. ರಾಜಸ್ಥಾನ ಕ್ರಿಕೆಟ್ ಅಸೋಸಿಯೇಶನ್ ಜತೆಗಿನ ಒಪ್ಪಂದವನ್ನು ಕಡಿದುಕೊಳ್ಳಲು ರಾಜಸ್ಥಾನ ರಾಯಲ್ಸ್ ಈಗಾಗಲೇ ನಿರ್ಧರಿಸಿದೆ.