×
Ad

ಮಾ. 21-27: ಮಹಿಳಾ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಶಿಪ್

Update: 2025-03-06 21:29 IST

ಸಾಂದರ್ಭಿಕ ಚಿತ್ರ | PC : freepik.com

ಹೊಸದಿಲ್ಲಿ : ಎಂಟನೇ ಎಲಿಟ್ ಮಹಿಳಾ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಗ್ರೇಟರ್ ನೋಯ್ಡದ ಗೌತಮ ಬುದ್ಧ ವಿಶ್ವವಿದ್ಯಾನಿಲಯದಲ್ಲಿ ಮಾರ್ಚ್ 21ರಿಂದ 27ರವರೆಗೆ ನಡೆಯಲಿದೆ. ಭಾರತದ ಸುಮಾರು 300 ಉನ್ನತ ಮಹಿಳಾ ಬಾಕ್ಸರ್‌ಗಳು ರಾಷ್ಟ್ರೀಯ ಮಾನ್ಯತೆಗಾಗಿ ಸ್ಪರ್ಧಿಸಲಿದ್ದಾರೆ.

ಉತ್ತರಪ್ರದೇಶ ಬಾಕ್ಸಿಂಗ್ ಅಸೋಸಿಯೇಶನ್‌ನ ಸಹಯೋಗದೊಂದಿಗೆ ನಡೆಯಲಿರುವ ಈ ರಾಷ್ಟ್ರೀಯ ಪಂದ್ಯಾವಳಿಯು 2023ರ ಬಳಿಕ ಗ್ರೇಟರ್ ನೋಯ್ಡದ ಗೌತಮ ಬುದ್ಧ ವಿಶ್ವವಿದ್ಯಾನಿಲಯಕ್ಕೆ ಮರಳಿದೆ. ಈ ಪಂದ್ಯಾವಳಿಯ ಈ ಹಿಂದಿನ ಆವೃತ್ತಿಯು 2023ರಲ್ಲಿ ನಡೆದಿತ್ತು ಹಾಗೂ ಅದು ಅಭೂತಪೂರ್ವ ಯಶಸ್ಸು ಕಂಡಿತ್ತು.

ವರ್ಲ್ಡ್ ಬಾಕ್ಸಿಂಗ್ ಮತ್ತು ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ (ಬಿಎಫ್‌ಐ)ದ ಸ್ಪರ್ಧಾ ಮಾರ್ಗಸೂತ್ರಗಳ ಅಡಿಯಲ್ಲಿ ನಡೆಯುವ ಪಂದ್ಯಾವಳಿಯು 1984 ಜನವರಿ 1 ಮತ್ತು 2005 ಡಿಸೆಂಬರ್ 31ರ ನಡುವೆ ಜನಿಸಿದ ಬಾಕ್ಸರ್‌ಗಳಿಗೆ ಮುಕ್ತವಾಗಿದೆ. ಪ್ರತಿಯೊಂದು ರಾಜ್ಯ ಘಟಕವು ಗರಿಷ್ಠ 10 ಬಾಕ್ಸರ್‌ಗಳನ್ನು ಸ್ಪರ್ಧೆಗೆ ಇಳಿಸಬಹುದಾಗಿದೆ.

ಆರಂಭಿಕ ಸುತ್ತಿನ ಸ್ಪರ್ಧೆಗಳು ಮಾರ್ಚ್ 21ರಿಂದ 24ರವರೆಗೆ ನಡೆಯಲಿದೆ. ಮಾರ್ಚ್ 25ರಂದು ಕ್ವಾರ್ಟರ್‌ಫೈನಲ್ ಪಂದ್ಯಗಳು ನಡೆದರೆ, ಸೆಮಿಫೈನಲ್ ಪಂದ್ಯಗಳು ಮಾರ್ಚ್ 26ರಂದು ನಡೆಯಲಿವೆ. ಅಂತಿಮವಾಗಿ ಮಾರ್ಚ್ 27ರಂದು ಫೈನಲ್ ಜರಗಲಿದೆ.

‘‘ಎಲಿಟ್ ಮಹಿಳಾ ನ್ಯಾಶನಲ್ ಚಾಂಪಿಯನ್‌ಶಿಪ್ ಭವಿಷ್ಯದ ಚಾಂಪಿಯನ್‌ಗಳು ರೂಪುಗೊಳ್ಳುವ ಕೇಂದ್ರವಾಗಿದೆ. ಇಲ್ಲಿ ಶ್ರೇಷ್ಠ ಬಾಕ್ಸರ್‌ಗಳ ವಿರುದ್ಧ ತಮ್ಮನ್ನು ಪರೀಕ್ಷೆಗೊಡ್ಡಲು ಎಳೆಯ ಪ್ರತಿಭೆಗಳಿಗೆ ಅವಕಾಶ ನೀಡಲಾಗುತ್ತದೆ. ಹೊಸ ಒಲಿಂಪಿಕ್ ಸಿದ್ಧತಾ ಚಕ್ರದಲ್ಲಿ ಮೊದಲ ರಾಷ್ಟ್ರೀಯ ಪಂದ್ಯಾವಳಿಯಾಗಿರುವ ಇದು, ಮುಂದಿನ ಮೂರು ವರ್ಷಗಳ ಕಾಲ ಪ್ರತಿಭಾವಂತ ಬಾಕ್ಸರ್‌ಗಳನ್ನು ಪತ್ತೆಹಚ್ಚಿ ಸಿದ್ಧಪಡಿಸಲು ಮಹತ್ವದ ವೇದಿಕೆಯಾಗಿದೆ’’ ಎಂದು ಭಾರತೀಯ ಬ್ಯಾಡ್ಮಿಂಟನ್ ಫೆಡರೇಶನ್‌ನ ಮಹಾ ಕಾರ್ಯದರ್ಶಿ ಹೇಮಂತ ಕುಮಾರ್ ಕಲಿಟ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News