ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ | ಜಾಸ್ಮಿನ್‌ಗೆ ಚಿನ್ನ, ಬೆಳ್ಳಿ ಗೆದ್ದ ನೂಪುರ್
PC | hindustantimes
ಲಿವರ್‌ಪೂಲ್, ಸೆ.14: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ, ಪೋಲ್ಯಾಂಡ್ ಆಟಗಾರ್ತಿ ಜುಲಿಯಾ ಝೆರೆಮೆಟಾರನ್ನು ಸೋಲಿಸಿದ ಭಾರತೀಯ ಬಾಕ್ಸರ್ ಜಾಸ್ಮಿನ್ ಲಾಂಬೋರಿಯಾ ಚಿನ್ನದ ಪದಕವನ್ನು ಜಯಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ತನ್ನ ಎಲ್ಲ ಎದುರಾಳಿಗಳ ವಿರುದ್ಧ ಪ್ರಾಬಲ್ಯ ಸಾಧಿಸುತ್ತಾ ಬಂದಿರುವ ಜಾಸ್ಮಿನ್ ಶನಿವಾರ ತಡರಾತ್ರಿ ನಡೆದ 57 ಕೆಜಿ ತೂಕ ವಿಭಾಗದ ಫೈನಲ್‌ನಲ್ಲಿ ಜುಲಿಯಾರನ್ನು 4-1(30-27, 29-28, 30-27, 28-29, 29-28)ಅಂತರದಿಂದ ಮಣಿಸಿದರು.
ಒಲಿಂಪಿಕ್ಸ್ ನಲ್ಲಿಲ್ಲದ ತೂಕ ವಿಭಾಗದಲ್ಲಿ ನೂಪುರ್ ಶೆರೊನ್(80+ಕೆಜಿ) ಹಾಗೂ ಹಿರಿಯ ಆಟಗಾರ್ತಿ ಪೂಜಾ ರಾಣಿ(80ಕೆಜಿ) ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಜಯಿಸಿದರು.
ಈ ಗೆಲುವಿನ ಮೂಲಕ ಜಾಸ್ಮಿನ್ ಅವರು ವಿಶ್ವ ಚಾಂಪಿಯನ್ ಕಿರೀಟ ಧರಿಸಿದ ಭಾರತದ 9ನೇ ಬಾಕ್ಸರ್ ಎಂಬ ಹಿರಿಮೆಗೆ ಪಾತ್ರರಾದರು.
ಜಾಸ್ಮಿನ್ ಅವರು ಆರು ಬಾರಿಯ ಚಾಂಪಿಯನ್ ಮೇರಿ ಕೋಮ್(2002, 2005, 2006, 2008, 2010 ಹಾಗೂ 2018), ಎರಡು ಬಾರಿಯ ಚಾಂಪಿಯನ್ ನಿಖಾತ್ ಝರೀನಾ(2022 ಹಾಗೂ 2023), ಸರಿತಾ ದೇವಿ(2006), ಜೆನ್ನಿ ಆರ್.ಎಲ್.(2006), ಲೇಖಾ ಕೆ.ಸಿ.(2006), ನೀತು ಘಂಘಸ್(2023), ಲವ್ಲೀನಾ ಬೊರ್ಗೊಹೈನ್(2023) ಹಾಗೂ ಸವೀಟಿ ಬೂರ(2023)ಅವರನ್ನೊಳಗೊಂಡ ಪಟ್ಟಿಗೆ ಸೇರಿದರು.
24ರ ಹರೆಯದ ಜಾಸ್ಮಿನ್ ಮೂರನೇ ಬಾರಿ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದರು.
*ನೂಪುರ್‌ಗೆ ಬೆಳ್ಳಿ: ಶನಿವಾರ ರಾತ್ರಿ ನಡೆದ ಎರಡನೇ ಫೈನಲ್ ಪಂದ್ಯದಲ್ಲಿ ನೂಪುರ್ ಪೋಲ್ಯಾಂಡ್‌ನ ಅಗಾಟಾ ಕಾಝ್ಮಾರ್ಸ್ಕಾ ವಿರುದ್ಧ 2-3 ಅಂತರದಿಂದ ಸೋತಿದ್ದಾರೆ.
ಆಕ್ರಮಣಕಾರಿ ಆಟದಿಂದ ಗಮನ ಸೆಳೆದ ಪೋಲ್ಯಾಂಡ್ ಆಟಗಾರ್ತಿ 3-2 ಅಂತರದಿಂದ ರೋಚಕ ಜಯ ಸಾಧಿಸಿ ತನ್ನ ಚೊಚ್ಚಲ ಪ್ರಶಸ್ತಿಯನ್ನು ಗೆದ್ದುಕೊಂಡರು.
ಇದಕ್ಕೂ ಮೊದಲು ನಡೆದ ಸೆಮಿ ಫೈನಲ್‌ನಲ್ಲಿ ಪೂಜಾ ಅವರು ಸ್ಥಳೀಯ ಆಟಗಾರ್ತಿ ಎಮಿಲಿ ಅಸ್ಕ್‌ವಿತ್ ವಿರುದ್ಧ 1-4 ಅಂತರದಿಂದ ಸೋಲನುಭವಿಸಿದರು. ಕಂಚಿನ ಪದಕಕ್ಕೆ ತೃಪ್ತಿಪಟ್ಟರು.