ಝಿಂಬಾಬ್ವೆ ವಿರುದ್ಧ ಟೆಸ್ಟ್ ಸರಣಿಯಿಂದ ಹೊರಗುಳಿದ ಟೆಂಬಾ ಬವುಮಾ
ಟೆಂಬಾ ಬವುಮಾ | PC : ANI
ಜೋಹಾನ್ಸ್‌ಬರ್ಗ್: ನೆರೆಯ ಝಿಂಬಾಬ್ವೆ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗಿಂತ ಮೊದಲು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು ತೀವ್ರ ಹಿನ್ನಡೆ ಅನುಭವಿಸಿದ್ದು, ಎಡ ಮಂಡಿರಜ್ಜು ಸೆಳೆತದಿಂದ ಬಳಲುತ್ತಿರುವ ನಾಯಕ ಟೆಂಬಾ ಬವುಮಾ ಈ ಸರಣಿಯಿಂದ ಹೊರಗುಳಿದಿದ್ದಾರೆ.
ಲಾರ್ಡ್ಸ್ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯದ ವಿರುದ್ಧ ನಡೆದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನ ಮೂರನೇ ದಿನ ದಕ್ಷಿಣ ಆಫ್ರಿಕಾದ 2ನೇ ಇನಿಂಗ್ಸ್ ವೇಳೆ ಬ್ಯಾಟಿಂಗ್ ಮಾಡುತ್ತಿದ್ದಾಗ ಬವುಮಾಗೆ ಗಾಯದ ಸಮಸ್ಯೆ ಕಾಣಿಸಿಕೊಂಡಿತ್ತು. ತನಗೆ ಮಂಡಿರಜ್ಜುನೋವು ಕಾಣಿಸಿಕೊಂಡಿದ್ದರೂ ಬ್ಯಾಟಿಂಗ್ ಮುಂದುವರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು.
ಬವುಮಾ ಮುಂಬರುವ ಸರಣಿಯಲ್ಲಿ ಆಡುವುದು ಕಷ್ಟಕರ ಎಂದು ಅವರ ಕುರಿತ ವೈದ್ಯಕೀಯ ವರದಿಗಳು ಖಚಿತಪಡಿಸಿವೆ. ಅವರ ಗಾಯದ ಪ್ರಮಾಣ ತಿಳಿಯಲು ಹಾಗೂ ಚೇತರಿಕೆಗೆ ಎಷ್ಟು ಸಮಯ ಬೇಕಾಗಬಹುದು ಎಂದು ಅಂದಾಜಿಸಲು ಇನ್ನಷ್ಟು ಸ್ಕ್ಯಾನಿಂಗ್ ನಡೆಸಲು ನಿರ್ಧರಿಸಲಾಗಿದೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು ಎಕ್ಸ್‌ನಲ್ಲಿ ಬರೆದಿದೆ.
ಬವುಮಾರ ಅನುಪಸ್ಥಿತಿಯಲ್ಲಿ ಅನುಭವಿ ಸ್ಪಿನ್ನರ್ ಕೇಶವ ಮಹಾರಾಜ್ ಝಿಂಬಾಬ್ವೆ ಸರಣಿಗೆ ಹಂಗಾಮಿ ನಾಯಕನಾಗಿ ನೇಮಕಗೊಂಡಿದ್ದಾರೆ. ಮಹಾರಾಜ್ ಈ ಹಿಂದೆ ಖಾಯಂ ನಾಯಕರ ಅನುಪಸ್ಥಿತಿಯಲ್ಲಿ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು.
ಡಬ್ಲ್ಯುಟಿಸಿ ಫೈನಲ್‌ನಲ್ಲಿ ಜಯ ಸಾಧಿಸಿ 27 ವರ್ಷಗಳ ನಂತರ ಐಸಿಸಿ ಟ್ರೋಫಿ ಗೆದ್ದ ಸಂಭ್ರಮದಲ್ಲಿರುವ ದಕ್ಷಿಣ ಆಫ್ರಿಕಾಕ್ಕೆ ಬವುಮಾ ಅಲಭ್ಯತೆಯು ಹಿನ್ನಡೆಯಾಗಿ ಪರಿಣಮಿಸಿದೆ. ಬವುಮಾ ಅನುಪಸ್ಥಿತಿಯಲ್ಲಿ ಮಧ್ಯಮ ಸರದಿಯು ತೆರವಾಗಿದೆ.
ಝಿಂಬಾಬ್ವೆ ತಂಡವು ಟೆಸ್ಟ್ ಮಾದರಿಯ ಕ್ರಿಕೆಟ್‌ನಲ್ಲಿ ನಿಧಾನವಾಗಿ ಸುಧಾರಣೆ ಕಾಣುತ್ತಿದೆ. ಈಗಿನ ಪರಿಸ್ಥಿತಿಯು ದಕ್ಷಿಣ ಆಫ್ರಿಕಾದ ಬ್ಯಾಟಿಂಗ್, ಬೌಲಿಂಗ್ ಶಕ್ತಿ ಹಾಗೂ ನಾಯಕತ್ವದ ಬಲವನ್ನು ಪರೀಕ್ಷಿಸಲಿದೆ. ಎಲ್ಲರ ಚಿತ್ತವೀಗ ಮಹಾರಾಜ್ ಅವರ ಮೇಲೆ ನೆಟ್ಟಿದೆ.
ಝಿಂಬಾಬ್ವೆ ವಿರುದ್ಧದ ಮೊದಲ ಟೆಸ್ಟ್ ಪಂದ್ಯವು ಜೂನ್ 28ರಿಂದ ಆರಂಭವಾಗಲಿದೆ. ಈ ಪಂದ್ಯದ ಮೂಲಕ ದಕ್ಷಿಣ ಆಫ್ರಿಕಾವು ನೂತನ ಡಬ್ಲ್ಯುಟಿಸಿ ಋತುವನ್ನು ಗೆಲುವಿನೊಂದಿಗೆ ಆರಂಭಿಸಲು ಎದುರು ನೋಡುತ್ತಿದೆ.