ಬಾಂಬ್ ಬೆದರಿಕೆ ಸಂದೇಶ: ತನಿಖೆಗೆ ವಿಶೇಷ ತಂಡ ರಚನೆ
ಬೆಂಗಳೂರು, ಅ.15 : ವಿವಿಧ ಸರಕಾರಿ ಹಾಗೂ ಖಾಸಗಿ ಕಚೇರಿಗಳು ಹಾಗೂ ಸ್ಥಳಗಳಿಗೆ ಬಾಂಬ್ ಬೆದರಿಕೆ ಇ-ಮೇಲ್‍ಗಳು ಹೆಚ್ಚುತ್ತಿರುವ ಹಿನ್ನೆಲೆ, ಇಂತಹ ಪ್ರಕರಣಗಳ ತನಿಖೆಗಾಗಿ ರಾಜ್ಯ ಸರಕಾರವು ಬುಧವಾರ ಪ್ರತ್ಯೇಕವಾಗಿ ವಿಶೇಷ ತಂಡವನ್ನು ರಚಿಸಿದೆ.
ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಬಿ.ಎಸ್.ನೇಮಗೌಡ ನೇತೃತ್ವದಲ್ಲಿ ಪ್ರತ್ಯೇಕ ವಿಶೇಷ ತಂಡ ರಚಿಸಲಾಗಿದ್ದು, ಈ ತಂಡವು ನಗರದ ಪಶ್ಚಿಮ ವಲಯದ ಠಾಣೆಗಳಲ್ಲಿ ದಾಖಲಾಗಿರುವ ಬಾಂಬ್ ಬೆದರಿಕೆ ಪ್ರಕರಣಗಳನ್ನು ತನಿಖೆ ನಡೆಸಲಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿರುವ ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಬಿ.ಎಸ್.ನೇಮಗೌಡ, ಪಶ್ಚಿಮ ವಲಯದಲ್ಲಿರುವ 14 ಠಾಣೆಗಳಲ್ಲಿ ಬಾಂಬ್ ಬೆದರಿಕೆಗೆ ಸಂಬಂಧಿಸಿದಂತೆ ಒಟ್ಟು 29 ಪ್ರಕರಣಗಳು ಇದುವರೆಗೂ ದಾಖಲಾಗಿವೆ. ಅವುಗಳನ್ನು ಉತ್ತರ ವಿಭಾಗದ ಸೈಬರ್ ಕ್ರೈಂ ಠಾಣೆಗೆ ವರ್ಗಾವಣೆ ಮಾಡಲಾಗಿದ್ದು, ವಿಶೇಷ ತಂಡದ ಮೂಲಕ ತನಿಖೆ ನಡೆಸಲಾಗುತ್ತದೆ. ಉತ್ತರ ವಿಭಾಗದ ಸೈಬರ್ ಕ್ರೈಂ ಠಾಣೆಯ ಎಸಿಪಿ, ಇನ್‍ಸ್ಪೆಕ್ಟರ್ ಹಾಗೂ ಇದುವರೆಗೂ ಪ್ರಕರಣಗಳು ದಾಖಲಾಗಿರುವ ಠಾಣೆಗಳ ಸಿಬ್ಬಂದಿಯನ್ನು ತನಿಖಾ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಪ್ರತಿಷ್ಠಿತ ಶಾಲಾ-ಕಾಲೇಜುಗಳು, ಸರಕಾರಿ ಕಚೇರಿಗಳು, ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳ ನಿವಾಸಗಳಲ್ಲಿ ಬಾಂಬ್ ಸ್ಪೋಟಿಸುವುದಾಗಿ ಬೆದರಿಕೆ ಸಂದೇಶಗಳನ್ನು ರವಾನಿಸಲಾಗಿತ್ತು.