ಬೆಂಗಳೂರು, ಅ.18: ಶಾಲಾ ಶಿಕ್ಷಣ ಇಲಾಖೆಯ ಎಲ್ಲ ಇಲಾಖಾ ಮುಂಬಡ್ತಿ ಸಮಿತಿಗಳಿಗೆ ಕಟ್ಟುನಿಟ್ಟಿನ ವೇಳಾಪಟ್ಟಿಯನ್ನು ನಿಗದಿಪಡಿಸಿ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

ಇಲಾಖಾ ಮುಂಬಡ್ತಿ ಸಮಿತಿಗಳು(ಡಿಪಿಸಿ) ಅನುಸರಿಸಬೇಕಾದ ಕಾರ್ಯವಿಧಾನ ಹಾಗೂ ಕಾಲಮಿತಿ ಸ್ಪಷ್ಟಪಡಿಸಿರುವ ಈ ಸುತ್ತೋಲೆಯಲ್ಲಿ, ಪ್ರತಿ ಆರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಮುಂಬಡ್ತಿ ಸಭೆಗಳನ್ನು ನಡೆಸುವಂತೆ ಸೂಚನೆ ನೀಡಲಾಗಿದೆ.

ಇಲಾಖೆಗಳು ತಮ್ಮ ಆಡಳಿತ ವ್ಯಾಪ್ತಿಯಲ್ಲಿ ಖಾಲಿ ಇರುವ ಹಾಗೂ ಮುಂದಿನ ಆರು ತಿಂಗಳ ಅವಧಿಯಲ್ಲಿ ನಿವೃತ್ತಿ ಸೇರಿದಂತೆ ವಿವಿಧ ಕಾರಣಗಳಿಂದ ಖಾಲಿಯಾಗಲಿರುವ ಹುದ್ದೆಗಳನ್ನು ಮುಂಚಿತವಾಗಿಯೇ ಗುರುತಿಸಿ ಬಡ್ತಿ ಪ್ರಕ್ರಿಯೆ ಆರಂಭಿಸಬೇಕಾಗಿದೆ. ಬಡ್ತಿ ನೀಡುವ ಕಾರ್ಯವನ್ನು ವರ್ಷದಲ್ಲಿ ಎರಡು ಹಂತಗಳಲ್ಲಿ ಪೂರ್ಣಗೊಳಿಸಬೇಕು. ಮೊದಲ ಹಂತವು ಜನವರಿಯಿಂದ ಜೂನ್ ಅಂತ್ಯದವರೆಗೆ ಮತ್ತು ಎರಡನೇ ಹಂತವು ಜುಲೈ ನಿಂದ ಡಿಸೆಂಬರ್ ಅಂತ್ಯದವರೆಗೆ ಜಾರಿಯಲ್ಲಿರಲಿದೆ.

ಮೊದಲ ಅವಧಿಯಲ್ಲಿ ಜ.5ರೊಳಗೆ ನಿವೃತ್ತಿಯಾಗಲಿರುವ ಸಿಬ್ಬಂದಿಯ ಪಟ್ಟಿ ಪ್ರಕಟಿಸಬೇಕು. ಜ.10ರೊಳಗೆ ತಾತ್ಕಾಲಿಕ ಜೇಷ್ಠತಾ ಪಟ್ಟಿ ಹಾಗೂ ಜ.30ರೊಳಗೆ ಅಂತಿಮ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವುದು ಕಡ್ಡಾಯವಾಗಿದೆ.

ಫೆಬ್ರವರಿ ಅಂತ್ಯದೊಳಗೆ ಪದೋನ್ನತಿಗೆ ಲಭ್ಯವಾಗುವ ಹುದ್ದೆಗಳನ್ನು ಅಂತಿಮಗೊಳಿಸಿ, ಅರ್ಹ ಅಧಿಕಾರಿಗಳು ಮತ್ತು ಸಿಬ್ಬಂದಿಯ ಪಟ್ಟಿಯನ್ನು ಪ್ರಕಟಿಸಬೇಕು. ನಂತರ ಬಡ್ತಿ ಪ್ರಸ್ತಾವನೆಗಳ ಪರಿಶೀಲನೆ ನಡೆಸಿ ಮೇ ಮೊದಲ ವಾರದಲ್ಲಿ ಇಲಾಖಾ ಮುಂಬಡ್ತಿ ಸಮಿತಿಯ ಸಭೆ ನಡೆಸಬೇಕು. ಮೇ ತಿಂಗಳ ಅಂತ್ಯದೊಳಗೆ ಸಂಪೂರ್ಣ ಬಡ್ತಿ ಪ್ರಕ್ರಿಯೆ ಮುಕ್ತಾಯಗೊಳಿಸಬೇಕಾಗಿದೆ.

ಎರಡನೇ ಅವಧಿಯಲ್ಲಿ ಡಿಸೆಂಬರ್ ಅಂತ್ಯದ ವೇಳೆಗೆ ಲಭ್ಯವಾಗಲಿರುವ ಪದೋನ್ನತಿ ಹುದ್ದೆಗಳನ್ನು ಆಗಸ್ಟ್ ಅಂತ್ಯದೊಳಗೆ ಗುರುತಿಸಿ ಅಂತಿಮಗೊಳಿಸಬೇಕು. ಸೆಪ್ಟೆಂಬರ್ ಅಂತ್ಯದೊಳಗೆ ಬಡ್ತಿಗೆ ಅರ್ಹರ ಪಟ್ಟಿಯನ್ನು ಪ್ರಕಟಿಸಬೇಕು. ಅಕ್ಟೋಬರ್ ಅಂತ್ಯದೊಳಗೆ ಪ್ರಸ್ತಾವಗಳ ಪರಿಶೀಲನೆ ಪೂರ್ಣಗೊಳಿಸಿ, ನ.15ರೊಳಗೆ ಇಲಾಖಾ ಮುಂಬಡ್ತಿ ಸಮಿತಿಯ ಸಭೆ ನಡೆಸಬೇಕು. ನವೆಂಬರ್ ಅಂತ್ಯದೊಳಗೆ ಬಡ್ತಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor