ಬೆಂಗಳೂರು, ಅ.19: ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸುವ ಮೇಲ್ಮನವಿಗಳ ವಿಚಾರಣೆಯನ್ನು ಆನ್ಲೈನ್ ಮೂಲಕವೂ ನಡೆಸಿ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಸದಸ್ಯ ಡಾ.ಕೆ.ಟಿ.ತಿಪ್ಪೇಸ್ವಾಮಿ ಸರಕಾರಕ್ಕೆ ಮನವಿ ಮಾಡಿದ್ದಾರೆ.

ಈ ಕುರಿತು ಸೋಮವಾರ ಪ್ರಜಾಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, ಇಲಾಖಾ ಮಟ್ಟದಲ್ಲಿ ನಡೆಯುವ ಮೇಲ್ಮನವಿ ವಿಚಾರಣೆಗಳನ್ನು ಖುದ್ದು ಹಾಜರಾತಿಯ ಜೊತೆಗೆ ಆನ್ಲೈನ್ ಮೂಲಕವೂ ನಡೆಸಲು ಸೂಕ್ತ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ತಿಳಿಸಿದ್ದಾರೆ.

ಕರ್ನಾಟಕದ ಆರ್‌ಟಿಐ ಆನ್ಲೈನ್ ಪೋರ್ಟಲ್ ನಲ್ಲಿ ಮೇಲ್ಮನವಿ ಸಲ್ಲಿಸುವಾಗಲೇ ‘ಆನ್ಲೈನ್ ವಿಚಾರಣೆ’ ಅಥವಾ ಖುದ್ದು ಹಾಜರಾತಿ ಮೂಲಕ ವಿಚಾರಣೆ ಎಂಬ ಆಯ್ಕೆಗಳನ್ನು ನೀಡಬೇಕು. ಅರ್ಜಿದಾರರು ಆಯ್ಕೆ ಮಾಡಿದ ವಿಧಾನಕ್ಕೆ ಆದ್ಯತೆ ನೀಡಿ ವಿಚಾರಣೆ ನಡೆಸುವ ವ್ಯವಸ್ಥೆ ರೂಪಿಸಬೇಕು. ಆಡಳಿತಾತ್ಮಕ ಅಥವಾ ತಾಂತ್ರಿಕ ಕಾರಣಗಳಿಂದ ಆಯ್ಕೆ ಮಾಡಿದ ವಿಧಾನದಲ್ಲಿ ವಿಚಾರಣೆ ಸಾಧ್ಯವಾಗದಿದ್ದಲ್ಲಿ, ಅದಕ್ಕೆ ಕಾರಣ ತಿಳಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿದ್ದಾರೆ.

ಆನ್ಲೈನ್ ವಿಚಾರಣೆಗಾಗಿ ಅಗತ್ಯವಿರುವ ವೀಡಿಯೊ ಕಾನ್ಫರೆನ್ಸ್ ಸಂಪರ್ಕ, ವಿಚಾರಣೆಯ ದಿನಾಂಕ ಮತ್ತು ಸಮಯದ ಮಾಹಿತಿ ಹಾಗೂ ಸಂಬಂಧಿತ ದಾಖಲೆಗಳನ್ನು ಸಲ್ಲಿಸುವ ವಿಧಾನವನ್ನು ಮುಂಚಿತವಾಗಿ ಒದಗಿಸಬೇಕು ಎಂದು ತಿಳಿಸಿದ್ದಾರೆ.

ಈ ವ್ಯವಸ್ಥೆಯನ್ನು ರಾಜ್ಯದ ಎಲ್ಲ ಇಲಾಖೆಗಳ ಮೇಲ್ಮನವಿ ಪ್ರಾಧಿಕಾರಗಳಿಗೆ ಅನ್ವಯಿಸುವಂತೆ ಸೂಕ್ತ ಆಡಳಿತಾತ್ಮಕ ನಿರ್ದೇಶನಗಳನ್ನು ನೀಡಬೇಕು. ಮಾಹಿತಿ ಹಕ್ಕು ಕಾಯ್ದೆಯ ಉದ್ದೇಶ ನಾಗರಿಕರಿಗೆ ಸರಕಾರಿ ಮಾಹಿತಿಯನ್ನು ಸುಲಭವಾಗಿ ಪಡೆಯಲು ಅವಕಾಶ ಕಲ್ಪಿಸುವುದಾಗಿದೆ. ಮೇಲ್ಮನವಿ ಪ್ರಕ್ರಿಯೆಯೇ ದೂರದ ಪ್ರಯಾಣ, ಹೆಚ್ಚುವರಿ ವೆಚ್ಚ ಮತ್ತು ಸಮಯದ ಅಡಚಣೆಗೆ ಕಾರಣವಾಗಬಾರದು ಎಂದು ತಿಳಿಸಿದ್ದಾರೆ.

ಅರ್ಜಿದಾರರ ಅನುಕೂಲಕ್ಕೆ ತಕ್ಕಂತೆ ವಿಚಾರಣೆಯ ವಿಧಾನ ಆಯ್ಕೆ ಮಾಡುವ ಅವಕಾಶ ನೀಡುವುದರಿಂದ ಪಾರದರ್ಶಕತೆ, ಸಾರ್ವಜನಿಕ ಸೇವೆಗಳ ಸುಲಭ ಲಭ್ಯತೆ ಮತ್ತು ಉತ್ತಮ ಆಡಳಿತವನ್ನು ಉತ್ತೇಜಿಸಲು ಸಾಧ್ಯವಾಗುತ್ತದೆ. ಆದ್ದರಿಂದ, ಈ ಪ್ರಸ್ತಾವ ಪರಿಶೀಲಿಸಿ, ಆರ್‌ಟಿಐ ಆನ್ಲೈನ್ ಪೋರ್ಟಲ್ ನಲ್ಲಿ ಅಗತ್ಯ ತಾಂತ್ರಿಕ ಬದಲಾವಣೆಗಳನ್ನು ಮಾಡುವುದರ ಜೊತೆಗೆ ರಾಜ್ಯದ ಇಲಾಖೆಗಳ ಮೊದಲ ಮೇಲ್ಮನವಿ ವಿಚಾರಣೆಗಳನ್ನು ಆನ್ಲೈನ್ ಮೂಲಕವೂ ನಡೆಸಲು ಸೂಕ್ತ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor