ರಾಜ್ಯದ ವಿವಿಧೆಡೆಗಳಲ್ಲಿ ಬೀದಿ ನಾಯಿಗಳ ಹಾವಳಿ: ಪರಿಷತ್‍ನಲ್ಲಿ ಗಂಭೀರ ಚರ್ಚೆ
1800 ನಾಯಿಗಳಿಗೆ ವಿಷವಿಟ್ಟು ತೋಟದಲ್ಲಿ ಹೂಳಿಸಿದ್ದೆ : ಎಸ್.ಎಲ್.ಭೋಜೇಗೌಡ
ಬೆಂಗಳೂರು, ಆ.12: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಬೀದಿನಾಯಿಗಳ ಹಾವಳಿಯನ್ನು ತಡೆಗಟ್ಟಲು ಸರಕಾರ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳಬೇಕೆಂಬ ವಿಷಯದ ಕುರಿತಾಗಿ ಮಂಗಳವಾರ ವಿಧಾನ ಪರಿಷತ್‍ನಲ್ಲಿ ಗಂಭೀರ ಚರ್ಚೆ ನಡೆಯಿತು.
ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಸದಸ್ಯ ಎಸ್.ಎಲ್.ಭೋಜೇಗೌಡ ವಿಷಯ ಪ್ರಸ್ತಾಪಿಸಿ, ಚಿಕ್ಕಮಗಳೂರಿನಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ಮಕ್ಕಳು, ಹಿರಿಯ ನಾಗರಿಕರ ಮೇಲೆ ನಾಯಿ ಕಚ್ಚುವ ಪ್ರಕರಣಗಳು ಅಧಿಕವಾಗುತ್ತಿವೆ. ಚಿಕ್ಕಮಗಳೂರಿಗೆ ಸೀಮಿತವಾಗಿರದೇ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಈ ಸಮಸ್ಯೆ ಉಲ್ಬಣಗೊಂಡಿದೆ. ಸಚಿವರು, ಶಾಸಕರು, ನ್ಯಾಯಾಧೀಶರ ಮಕ್ಕಳಿಗೆ ಬೀದಿನಾಯಿಗಳಿಂದ ಸಮಸ್ಯೆಯಿಲ್ಲ. ಬೀದಿಯಲ್ಲಿ ಓಡಾಡುವ ಮಕ್ಕಳಿಗೆ ಮಾತ್ರ ತೊಂದರೆಯಾಗುತ್ತಿವೆ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕುಂದು ಮನವಿ ಮಾಡಿದರು.
ಬೆಂಗಳೂರಿನ ಕಬ್ಬನ್‍ಪಾರ್ಕ್, ಲಾಲ್‍ಬಾಗ್, ಹೈಕೋರ್ಟ್ ಸೇರಿದಂತೆ ಮತ್ತಿತರ ಕಡೆ ನಾಯಿಗಳ ಹಾವಳಿ ವಿಪರೀತವಾಗಿದೆ. ಬಡವರು, ಆರ್ಥಿಕವಾಗಿ ಹಿಂದುಳಿದವರು ತೀರಾ ಸಂಕಷ್ಟ ಸ್ಥಿತಿಯಲ್ಲಿರುವವರು ಸರಕಾರಿ ಶಾಲೆಗಳಿಗೆ ಹೋಗುವ ಹಾಗೂ ಖಾಸಗಿ ವಾಹನಗಳಲ್ಲಿ ಹೋಗಲು ಸಾಧ್ಯವಿಲ್ಲದವರು ಬೀದಿಯಲ್ಲಿ ನಡೆದುಕೊಂಡು ಹೋಗುವಾಗ ಏಕಾಏಕಿ ಬಂದು ನಾಯಿಗಳು ಕಚ್ಚುತ್ತವೆ ಎಂದು ಭೋಜೇಗೌಡ ಸದನದ ಗಮನ ಸೆಳೆದರು.
ಒಂದು ಕಡೆ ಸರಕಾರ ಬೀದಿ ನಾಯಿಗಳಿಗೆ ಬಿರಿಯಾನಿ ಭಾಗ್ಯ ಒದಗಿಸಿದೆ. ಇದನ್ನು ತಿಂದ ನಾಯಿಗಳು, ಹಿರಿಯರು, ವಯಸ್ಕರು, ವೃದ್ಧರು, ಶಾಲಾ ಮಕ್ಕಳು ವಾಯುವಿಹಾರ ನಡೆಸುವವರ ಮೇಲೆ ದಾಳಿ ಮಾಡುತ್ತಿವೆ. ಅನೇಕ ಕಡೆ ಸಾವನ್ನಪ್ಪಿರುವ ಪ್ರಕರಣಗಳು ಜರುಗಿವೆ ಎಂದು ಭೋಜೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ಒಂದು ವೇಳೆ ಪ್ರಾಣಿ ದಯಾಸಂಘದವರು ನಾಯಿಗಳ ಸ್ಥಳಾಂತರಕ್ಕೆ ಅಡ್ಡಿಪಡಿಸಿದರೆ ಅವರ ಮನೆಗೆ ನಾಯಿಗಳನ್ನು ಬಿಟ್ಟು ಬನ್ನಿ. ಇವರು ಪ್ರಾಣಿ ದಯಾಸಂಘದವರಲ್ಲ. ಅದರ ಹೆಸರಿನಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡುವ ಸಂಘದವರು ಎಂದು ಭೋಜೇಗೌಡ ಕಿಡಿಕಾರಿದರು.
ಈ ಬಗ್ಗೆ ಸರಕಾರವು ಕಾನೂನು ಸಲಹೆ ಪಡೆದು ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸುವಂತೆ ಸಲಹೆ ನೀಡಿದರು. ಈ ಬಗ್ಗೆ ಉತ್ತರಿಸಿದ ಪೌರಾಡಳಿತ ಸಚಿವ ರಹೀಂಖಾನ್, ಬೀದಿ ನಾಯಿ ಹಾವಳಿ ವಿಚಾರ ಸಂಬಂಧಿಸಿದಂತೆ ಶೀಘ್ರದಲ್ಲಿ ಸಭೆ ಕರೆಯುತ್ತೇನೆ. ಸಮಸ್ಯೆ ನಿವಾರಣೆಗೆ ಯಾಕೆ ಕ್ರಮ ತೆಗೆದುಕೊಂಡಿಲ್ಲ ಎಂದು ಪರಿಶೀಲಿಸಿ, ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸುತ್ತೇನೆ ಎಂದರು.
1800 ನಾಯಿಗಳಿಗೆ ವಿಷವಿಟ್ಟು ತೋಟದಲ್ಲಿ ಹೂಳಿಸಿದ್ದೆ: ಬೀದಿ ನಾಯಿಗಳ ದಾಳಿಯಿಂದ ರೇಬಿಸ್ ಖಾಯಿಲೆ ಬರುತ್ತಿದ್ದು, ಇದನ್ನು ತಪ್ಪಿಸಲು ವ್ಯಾಕ್ಸಿನ್ ಇದೆ. ನಾಯಿ ಕಚ್ಚುವುದನ್ನು ತಪ್ಪಿಸುವುದು ಹೇಗೆ? ಎಂಬುದರ ವಸ್ತು ಸ್ಥಿತಿ ಬಗ್ಗೆ ಸುಪ್ರೀಂ ಕೋರ್ಟ್‍ಗೆ ಕೇಳುವುದರಲ್ಲಿ ತಪ್ಪೇನಿಲ್ಲ. ಈ ಪ್ರಾಣಿ ದಯಾ ಸಂಘದವರದ್ದು ಕಾಟವಾಗಿದೆ. ಅವರ ಮನೆಗಳಿಗೆ ನಾಯಿಗಳನ್ನು ಬಿಡುವಂತೆ ಕಿಚಾಯಿಸಿದ ಭೋಜೇಗೌಡ, ನಾನು ಈ ಹಿಂದೆ ಸಿಎಂಸಿ ಅಧ್ಯಕ್ಷನಾಗಿದ್ದಾಗ 1800 ನಾಯಿಗಳಿಗೆ ವಿಷವಿಟ್ಟು ಸಾಯಿಸಿ ತೆಂಗಿನ ಮರಗಳಿಗೆ ಗೊಬ್ಬರ ಆಗಲೆಂದು ತೋಟದಲ್ಲಿ ಹೂಳಿಸಿದ್ದೆ ಎಂದರು.