×
Ad

ಬೆಂಗಳೂರು | ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ವತಿಯಿಂದ ಸೆ.25ಕ್ಕೆ ‘ಬೃಹತ್ ನ್ಯಾಯ ಸಮಾವೇಶ’

Update: 2025-09-17 21:45 IST

ಬೆಂಗಳೂರು, ಸೆ.17: ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಅಸಹಜ ಸಾವು, ಅತ್ಯಾಚಾರ, ಹಲ್ಲೆ, ಕೊಲೆ ಯುವತಿಯರ ನಾಪತ್ತೆ ಪ್ರಕರಣವನ್ನು ಎಸ್‍ಐಟಿ ಸಮಗ್ರ ತನಿಖೆ ಮಾಡಬೇಕು. ಧರ್ಮಸ್ಥಳದ ಭೂ ಅಕ್ರಮ, ಭೂ ಕಬಳಿಕೆ, ಬಡ್ಡಿ ವ್ಯವಹಾರಗಳನ್ನು ತನಿಖೆ ಮಾಡಬೇಕು ಎಂದು ಆಗ್ರಹಿಸಿ, ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆಯ ವತಿಯಿಂದ ಸೆ.25ರಂದು ನಗರದ ಫ್ರೀಡಂ ಪಾರ್ಕ್‍ನಲ್ಲಿ ಬೃಹತ್ ನ್ಯಾಯ ಸಮಾವೇಶ ಆಯೋಜಿಸಲಾಗಿದೆ.

ಸಮಾವೇಶದಲ್ಲಿ ಪದ್ಮಲತಾ, ವೇದವಲ್ಲಿ, ನಾರಾಯಣ ಮಾವುತ, ಯಮುನಾ, ಸೌಜನ್ಯ ಸಾವಿಗೆ ನ್ಯಾಯ ಹಾಗೂ ಧರ್ಮಸ್ಥಳದ ಅಶೋಕನಗರ, ಮುಂಡ್ರುಪಾಡಿಯ ದಲಿತ ಕುಟುಂಬಗಳಿಗೆ ಮೂಲಸೌಕರ್ಯ ನೀಡಿ, ಹಕ್ಕು ಪತ್ರ ಒದಗಿಸಿ, ತಲಾ ಒಂದು ಎಕರೆ ಜಮೀನು ನೀಡುವಂತೆ ಆಗ್ರಹಿಸಲಾಗುತ್ತದೆ.

ಕರ್ನಾಟಕದ ಹಲವು ಸಮಾನ ಮನಸ್ಕ ಪಕ್ಷಗಳು, ಎಡ, ದಲಿತ, ಕಾರ್ಮಿಕ, ವಿದ್ಯಾರ್ಥಿ, ಯುವಜನ, ಮಹಿಳಾ, ಸಾಂಸ್ಕೃತಿಕ ಸಂಘಟನೆಗಳ ಜಂಟಿ ಸಹಯೋಗದಲ್ಲಿ ಕಾರ್ಯನಿರ್ವಹಿಸುವ ‘ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ’ಯು ಈ ಸಮಾವೇಶವನ್ನು ಆಯೋಜಿಸಿದ್ದು, ಅಂದು ಬೆಳಿಗ್ಗೆ 10:30ಕ್ಕೆ ಸಮಾವೇಶ ಆರಂಭವಾಗಲಿದೆ. ರಾಷ್ಟ್ರ ಮತ್ತು ರಾಜ್ಯದ ಹಲವು ಚಿಂತಕರು, ಹೋರಾಟಗಾರರು, ಸಾಹಿತಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ಪ್ರಮುಖ ಹಕ್ಕೊತ್ತಾಯಗಳು: ಬಿಜೆಪಿ ಹಾಗೂ ಸಂಘಪರಿವಾರ ಎಸ್‍ಐಟಿ ತನಿಖೆಯನ್ನು ಸ್ಥಗಿತಗೊಳಿಸಲು ಪ್ರಯತ್ನ ನಡೆಸುತ್ತಿವೆ. ಎಸ್‍ಐಟಿಯನ್ನು ಒತ್ತಡಕ್ಕೆ ಒಳಪಡಿಸಲು, ದೂರುದಾರರು, ಸಾಕ್ಷಿದಾರನ್ನು ಬೆದರಿಸುವ, ತೇಜೋವಧೆ ನಡೆಸಿ ಹಿಮ್ಮಟ್ಟಿಸುವ ಯತ್ನ ನಡೆಯುತ್ತಿದೆ. ಇಂತಹ ಪಿತೂರಿ, ಒತ್ತಡಕ್ಕೆ ಒಳಗಾಗದೇ ಎಸ್‍ಐಟಿ ಅದರ ವ್ಯಾಪ್ತಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಸ್ವತಂತ್ರ ತನಿಖೆ ಸಡೆಸಲು ಅನುವು ಮಾಡಿಕೊಡಬೇಕು. ಧರ್ಮಸ್ಥಳದಲ್ಲಿ ನೂರಾರು ದಲಿತರು ಸ್ವಚ್ಚತಾ ಕಾರ್ಮಿಕರಾಗಿ ತಲೆ ತಲಾಂತರಗಳಿಂದ ದುಡಿಯುತ್ತಿದ್ದಾರೆ. ಈ ರೀತಿ ದುಡಿಯುವ ಸ್ವಚ್ಚತಾ ಕಾರ್ಮಿಕರಿಗೆಂದೇ ಧರ್ಮಸ್ಥಳದಲ್ಲಿ ಅಶೋಕ ನಗರ ದಲಿತ ಕಾಲನಿಯನ್ನು ನಿರ್ಮಿಸಲಾಗಿದೆ. ಅಶೋಕನಗರದಲ್ಲೇ ವಾಸಿಸುತ್ತಿದ್ದರೂ ಇನ್ನೂ ಮನೆಯ ಅಡಿಸ್ಥಳವನ್ನು ದಲಿತರ ಹೆಸರಿಗೆ ಹಕ್ಕು ಪತ್ರ ನೀಡಲಾಗಿಲ್ಲ. ಸ್ವಚ್ಚತಾ ಕಾರ್ಮಿಕರು ಕುಸಿದಿರುವ, ತೂತಾಗಿರುವ ಮನೆಗಳಲ್ಲಿ ಹೀನಾಯ ಸ್ಥಿತಿಯಲ್ಲಿ ವಾಸಿಸುತ್ತಿದ್ದಾರೆ. ಸ್ವಚ್ಚತಾ ಕಾರ್ಯ ಮಾಡುವ ದಲಿತರಿಗೆ ಮಾತ್ರ ಕಾರ್ಮಿಕ ಕಾಯ್ದೆಯ ಪ್ರಕಾರ ಕನಿಷ್ಠ ಸಂಬಳವನ್ನೂ ನೀಡುತ್ತಿಲ್ಲ. ಧರ್ಮಸ್ಥಳ ಅಶೋಕನಗರದ 128 ದಲಿತ ಕುಟುಂಬಗಳು, ಮುಂಡ್ರುಪಾಡಿಯ 42 ದಲಿತ ಕುಟುಂಬಗಳು ಮತ್ತು ಗ್ರಾಮದ ಇತರ ದಲಿತ ಕುಟುಂಬಗಳಿಗೆ ತಲಾ ಒಂದು ಎಕ್ರೆ ಸರಕಾರಿ ಭೂಮಿಯನ್ನು ನೀಡಬೇಕು ಎಂದು ಆಗ್ರಹಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News