×
Ad

ಪಿಲಿಕುಳ ಉದ್ಯಾನದ ಮಾಸ್ಟರ್ ಪ್ಲಾನ್ ಅನುಮೋದನೆ; ಪ್ರಮಾಣಪತ್ರ ಸಲ್ಲಿಸಲು ಕೇಂದ್ರ ಮೃಗಾಲಯ ಪ್ರಾಧಿಕಾರಕ್ಕೆ 2 ವಾರ ಕಾಲಾವಕಾಶ

Update: 2025-12-17 21:21 IST

ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಪಿಲಿಕುಳ ಜೈವಿಕ ಉದ್ಯಾನದ (ನಿಸರ್ಗಧಾಮ) ಮಾಸ್ಟರ್ ಪ್ಲಾನ್ ಅನುಮೋದಿಸಿರುವ ಕುರಿತ ಪ್ರಮಾಣಪತ್ರ ಸಲ್ಲಿಸಲು ಕೇಂದ್ರ ಮೃಗಾಲಯ ಪ್ರಾಧಿಕಾರಕ್ಕೆ ಹೈಕೋರ್ಟ್ 2 ವಾರ ಕಾಲಾವಕಾಶ ನೀಡಿದೆ.

ಪಿಲಿಕುಳ ಜೈವಿಕ ಉದ್ಯಾನದ ಬಳಿ ಕಂಬಳ ಆಯೋಜನೆಗೆ ಅನುಮತಿ ನೀಡಬಾರದು ಎಂದು ಕೋರಿ 'ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್' (ಪೆಟಾ) ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಕೇಂದ್ರ ಮೃಗಾಲಯ ಪ್ರಾಧಿಕಾರದ ಪರ ಹಾಜರಾದ ಉಪ ಸಾಲಿಸಿಟರ್ ಜನರಲ್ ಎಚ್. ಶಾಂತಿಭೂಷಣ್ ಅವರು, ಪಿಲಿಕುಳ ಜೈವಿಕ ಉದ್ಯಾನದ ಮಾಸ್ಟರ್ ಪ್ಲಾನ್ ಅನುಮೋದನೆಗೆ ಸಂಬಂಧಿಸಿದಂತೆ ಪ್ರಮಾಣಪತ್ರ ಸಲ್ಲಿಸುವಂತೆ ಕೇಂದ್ರ ಮೃಗಾಲಯ ಪ್ರಾಧಿಕಾರಕ್ಕೆ ಕಳೆದ ವಿಚಾರಣೆ ವೇಳೆ ನ್ಯಾಯಾಲಯ ನಿರ್ದೇಶಿಸಿತ್ತು. ಈ ಕುರಿತ ದಾಖಲೆಯನ್ನು ನಿನ್ನೆ ಮೃಗಾಲಯ ಪ್ರಾಧಿಕಾರದಿಂದ ಕಳುಹಿಸಲಾಗಿದ್ದು, ಅದು ನಮ್ಮ ಕೈಸೇರಿದ ಬಳಿಕ ಪರಿಶೀಲಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು.‌ ಅದಕ್ಕಾಗಿ ಕೊಂಚ ಕಾಲಾವಕಾಶ ನೀಡಬೇಕು ಎಂದು ಕೋರಿದರು.

ಇದನ್ನು ಪರಿಗಣಿಸಿದ ನ್ಯಾಯಪೀಠ, ಪ್ರಮಾಣಪತ್ರ ಸಲ್ಲಿಸಲು ಮೃಗಾಲಯ ಪ್ರಾಧಿಕಾರಕ್ಕೆ 2 ವಾರ ಕಾಲಾವಕಾಶ ನೀಡಿ ವಿಚಾರಣೆಯನ್ನು ಜನವರಿ 13ಕ್ಕೆ ಮುಂದೂಡಿತು.

ಪ್ರಕರಣದ ಹಿನ್ನೆಲೆ:

ಕರಾವಳಿ ಜಿಲ್ಲೆಗಳಾದ ದಕ್ಷಿಣ ಮತ್ತು ಉಡುಪಿ ಜಿಲ್ಲೆಗಳನ್ನು ಹೊರತುಪಡಿಸಿ ರಾ‍ಜ್ಯದ ಬೇರೆ ಜಿಲ್ಲೆ ಅಥವಾ ಭಾಗಗಳಲ್ಲಿ ಕಂಬಳ ಕ್ರೀಡೆ ಆಯೋಜನೆ ನಿರ್ಬಂಧಿಸಲು ಸರಕಾರಕ್ಕೆ ನಿರ್ದೇಶಿಸಬೇಕು. ಪಿಲಿಕುಳ ಜೈವಿಕ ಉದ್ಯಾನದ ಬಳಿ ಕಂಬಳ ಆಯೋಜನೆಗೆ ಅನುಮತಿಸಬಾರದು ಎಂದು ಕೋರಿ ಪೆಟಾ 2024ರಲ್ಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಅರ್ಜಿಯನ್ನು ನವೆಂಬರ್ 14ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಬೇರೆ ಯಾವುದೇ ಸ್ಥಳಗಳಲ್ಲಿ ಕಂಬಳ ಆಯೋಜಿಸದಂತೆ ರಾಜ್ಯ ಸರಕಾರವನ್ನು ನಿರ್ಬಂಧಿಸಲು ನಿರಾಕರಿಸಿತ್ತು.

ಇದೇ ವೇಳೆ, ಪಿಲಿಕುಳ ಜೈವಿಕ ಉದ್ಯಾನದಲ್ಲಿ ಕಂಬಳ ಆಯೋಜಿಸಲು ಅನುಮತಿಸಬಾರದೆಂಬ ಅರ್ಜಿದಾರರ ಎರಡನೇ ಮನವಿ ಕುರಿತು ವಿಚಾರಣೆ ನಡೆಸಿದ್ದ ನ್ಯಾಯಪೀಠ, ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಕಂಬಳ ಆಯೋಜಿಸುವುದರಿಂದ ಅಲ್ಲಿನ ಪ್ರಾಣಿಗಳಿಗೆ ತೊಂದರೆಯಾಗುತ್ತದೆ. ಅಲ್ಲಿ ಕಂಬಳ ನಡೆಸುವುದು ವನ್ಯಜೀವಿ (ರಕ್ಷಣೆ) ಕಾಯ್ದೆ 1972ರ ಉಲ್ಲಂಘನೆಯಾಗುತ್ತದೆ ಎಂದು ಅರ್ಜಿದಾರರು ಹೇಳಿದ್ದಾರೆ. ಪಿಲಿಕುಳ ನಿಸರ್ಗಧಾಮವು 80 ಹೆಕ್ಟೇರ್ ವ್ಯಾಪ್ತಿಯಲ್ಲಿದೆ ಎಂದು ಹೇಳಲಾಗಿದ್ದು, ಕಂಬಳ ಕಾರ್ಯಕ್ರಮ ನಡೆಯಬೇಕಿರುವ ಸ್ಥಳವು 80 ಹೆಕ್ಟೇರ್‌ಗಳ ವ್ಯಾಪ್ತಿಯಲ್ಲಿ ಬರುತ್ತದೆಯೇ ಎಂಬ ಪ್ರಶ್ನೆ ನ್ಯಾಯಾಲಯದ ಮುಂದಿದೆ. ಈ ಹಿನ್ನೆಲೆಯಲ್ಲಿ ಪಿಲಿಕುಳ ಉದ್ಯಾನದ ಮಾಸ್ಟರ್ ಪ್ಲಾನ್ ಅನುಮೋದಿಸಿರುವ ಕುರಿತ ಪ್ರಮಾಣಪತ್ರವನ್ನು ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಕೇಂದ್ರ ಮೃಗಾಲಯ ಪ್ರಾಧಿಕಾರಕ್ಕೆ ನಿರ್ದೇಶಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News