×
Ad

ಋತುಚಕ್ರ ರಜೆ ನೀತಿ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಕೋರಿ ಅರ್ಜಿ; ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2025-12-17 21:24 IST

ಬೆಂಗಳೂರು: ವಿವಿಧ ಕಾರ್ಮಿಕ ಕಾಯ್ದೆಗಳಡಿ ನೋಂದಣಿಯಾಗಿರುವ ಉದ್ದಿಮೆಗಳಲ್ಲಿನ ಮಹಿಳಾ ನೌಕರರಿಗೆ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನಸಹಿತ ರಜೆ ನೀಡುವ ಸಂಬಂಧ ರೂಪಿಸಲಾಗಿರುವ ನೀತಿಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಕರ್ನಾಟಕ ಗೆಜೆಟ್‌ನಲ್ಲಿ ಪ್ರಕಟಗೊಂಡಿರುವ ಹೊರತಾಗಿಯೂ ಋತುಚಕ್ರದ ರಜೆ ನೀತಿಯನ್ನು ಹೋಟೆಲ್‌ಗಳು ಮತ್ತಿತರ ಸಂಸ್ಥೆಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿಲ್ಲ ಎಂದು ಆಕ್ಷೇಪಿಸಿ ಬೆಳಗಾವಿ ಜಿಲ್ಲೆಯ ಹೋಟೆಲ್ ಉದ್ಯೋಗಿ ಚಂದ್ರವ್ವ ಹಣಮಂತ ಗೋಕಾವಿ ಎಂಬುವರು ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಧಾರವಾಡದಲ್ಲಿ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ರಾಜ್ಯ ಸರಕಾರ, ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಆಯುಕ್ತರು, ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ಆಯುಕ್ತರು, ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿತಲ್ಲದೆ, ಋತುಚಕ್ರ ರಜೆ ಸೌಲಭ್ಯ ನೀತಿ ಅಸ್ತಿತ್ವದಲ್ಲಿರುವ ಕುರಿತು ಮಹಿಳಾ ಉದ್ಯೋಗಿಗಳ ಗಮನಕ್ಕೆ ತರುವಂತೆ ಉದ್ಯೋಗ ಸಂಸ್ಥೆಗಳಿಗೆ ಸೂಚಿಸಿ ಹೊರಡಿಸಲಾಗುವ ಸಂವಹನವನ್ನು ದಾಖಲೆಯಲ್ಲಿ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು 2026ರ ಜನವರಿ 5ಕ್ಕೆ ಮುಂದೂಡಿತು.

ಅರ್ಜಿದಾರರ ವಾದವೇನು?

ವಿಚಾರಣೆ ವೇಳೆ ಅರ್ಜಿದಾರ ಮಹಿಳೆಯ ಪರ ವಾದ ಮಂಡಿಸಿದ ವಕೀಲೆ ದೀಕ್ಷಾ ಅಮೃತೇಶ್, ರಾಜ್ಯದಲ್ಲಿ ಮಹಿಳಾ ನೌಕರರಿಗೆ ಋತುಸ್ರಾವದ ಸಂದರ್ಭದಲ್ಲಿ ಒಂದು ದಿನದ ವೇತನಸಹಿತ ರಜೆ ನೀಡುವ ಸಂಬಂಧ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದೆ. ಹೊಸ ನೀತಿಯ ಅಡಿ ಅರ್ಜಿದಾರರು ಕೋರಿದ್ದ ರಜೆಯನ್ನು ಅವರಿಗೆ ನೀಡಲಾಗಿಲ್ಲ. ಹಲವಾರು ಕ್ಷೇತ್ರಗಳಲ್ಲಿನ ಉದ್ಯೋಗಿಗಳಿಗೆ ಈ ನೀತಿಯ ಬಗ್ಗೆ ಮಾಹಿತಿಯೇ ಇಲ್ಲ. ಆದ್ದರಿಂದ, ಮಹಿಳಾ ಉದ್ಯೋಗಿಗಳನ್ನು ನೇಮಿಸಿಕೊಂಡಿರುವ ಸಂಸ್ಥೆಗಳಿಗೆ ಋತುಚಕ್ರದ ರಜೆಯ ನೀತಿ ಜಾರಿಗೊಳಿಸಲು ನಿರ್ದೇಶಿಸಬೇಕು ಹಾಗೂ ಆ ನೀತಿ ಅಸ್ತಿತ್ವದಲ್ಲಿರುವ ಬಗ್ಗೆ ಉದ್ಯೋಗಿಗಳಿಗೆ ತಿಳಿಸುವಂತಾಗಬೇಕು. ಇದರಿಂದ, ಮಹಿಳಾ ಉದ್ಯೋಗಿಗಳು ರಜೆಯ ಲಾಭ ಪಡೆಯಲು ಸಾಧ್ಯವಾಗುತ್ತದೆ ಎಂದರು.

ಸರಕಾರದ ಪರ ವಕೀಲರು ವಾದ ಮಂಡಿಸಿ, ಇದು ರಾಜ್ಯದ ನೀತಿಯಾಗಿದ್ದು, ಜಾರಿಗೊಳಿಸದಿರುವ ಪ್ರಶ್ನೆಯೇ ಇಲ್ಲ. ನೀತಿಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು ಹಾಗೂ ಸರಕಾರದ ಆದೇಶಕ್ಕೆ ಒಳಪಡುವ ಎಲ್ಲ ಸಂಸ್ಥೆಗಳು, ಹೋಟೆಲ್‌ಗಳು ಇನ್ನಿತರ ಉದ್ಯೋಗ ಸಂಸ್ಥೆಗಳಿಗೆ ಈ ಕುರಿತು ಮಾಹಿತಿ ನೀಡಲು ಕ್ರಮ ಕೈಗೊಂಡು, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮುಂದಿನ ವಿಚಾರಣೆ ವೇಳೆ ನ್ಯಾಯಾಲಯದ ಮುಂದೆ ಇಡಲಾಗುವುದು ಎಂದರು.

ಪ್ರಕರಣವೇನು?

ಬೆಳಗಾವಿಯ ಹೋಟೆಲ್ ಒಂದರಲ್ಲಿ ಅಡುಗೆ ಕೆಲಸಗಾರರಾಗಿರುವ ಚಂದ್ರವ್ವ ಹಣಮಂತ ಗೋಕಾವಿ ಮುಟ್ಟಿನ‌ ಸಂದರ್ಭದಲ್ಲಿ ರಜೆ ನೀಡುವಂತೆ ಕೋರಿದ್ದರು. ಆದರೆ, ರಜೆ ನೀಡಲು ಹೋಟೆಲ್ ಮಾಲೀಕರು ನಿರಾಕರಿಸಿದ್ದರು. ಇದರಿಂದ, ಕಾರ್ಮಿಕ ಇಲಾಖೆಗೆ ಮನವಿಪತ್ರ ಸಲ್ಲಿಸಿದ್ದ ಚಂದ್ರವ್ವ, ಮಹಿಳಾ ನೌಕರರಿಗೆ ಮುಟ್ಟಿನ ಸಂದರ್ಭದಲ್ಲಿ ಒಂದು ದಿನ ವೇತನಸಹಿತ ರಜೆ ನೀಡುವ ನೀತಿಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು. ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಅಧಿನಿಯಮ ಹಾಗೂ ಕಾರ್ಖಾನೆಗಳ ಅಧಿನಿಯಮಕ್ಕೆ ಒಳಪಡುವ ಎಲ್ಲ ಸಂಸ್ಥೆಗಳಲ್ಲಿ ಸರಕಾರದ ನೀತಿಯ ಏಕರೂಪ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು. ರಜೆ ಪಡೆಯುವ ಮಹಿಳಾ ನೌಕರರಿಗೆ ವೇತನ ಕಡಿತ, ಬೆದರಿಕೆ ಅಥವಾ ಕೆಲಸದಿಂದ ದೂರವಿಡುವ ಕ್ರಮಗಳು ‌ನಡೆದರೆ ಅದನ್ನು ಕಾರ್ಮಿಕ ಕಾನೂನು ಉಲ್ಲಂಘನೆ ಎಂದು ಪರಿಗಣಿಸಿ ಕ್ರಮ ಜರುಗಿಸಬೇಕು. ತಳಮಟ್ಟದ ಮಹಿಳಾ ಕಾರ್ಮಿಕರಿಗೆ ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಕೋರಿದ್ದರು. ಆ ಮನವಿಗೆ ಯಾವುದೇ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಚಂದ್ರವ್ವ ಹೈಕೋರ್ಟ್‌‌ಗೆ ಅರ್ಜಿ ಸಲ್ಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News