ಶಕ್ತಿ ಯೋಜನೆಯಡಿ 100 ಕೋಟಿ ಮಹಿಳೆಯರು ಪ್ರಯಾಣ: ಡಿ.ಕೆ.ಶಿವಕುಮಾರ್
ಬೆಂಗಳೂರು: ಕಾಂಗ್ರೆಸ್‍ನ ಗ್ಯಾರಂಟಿ ಯೋಜನೆಯಲ್ಲಿ ಒಂದಾಗಿರುವ ಶಕ್ತಿ ಯೋಜನೆಯ ಫಲಾನುಭವಿಗಳು ಶತಕೋಟಿ ದಾಟಿರುವುದು ನಿಜಕ್ಕೂ ಅಭಿನಂದನೀಯ. ಜೂ.11ಕ್ಕೆ ಶಕ್ತಿ ಯೋಜನೆ ಪ್ರಾರಂಭವಾಗಿದ್ದು, ನ.23ಕ್ಕೆ 100 ಕೋಟಿ 47 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಸತ ವ್ಯಕ್ತಪಡಿಸಿದ್ದಾರೆ.
ಈ ಯೋಜನೆಯು ಯಶಸ್ವಿಯಾಗಿ ಮುನ್ನಡೆದಿರುವುದು ನಮ್ಮ ಅಭಿವೃದ್ಧಿಗೆ ಪೂರಕವಾಗಿದೆ. ಈ ಯೋಜನೆಯಿಂದ ನಷ್ಟವಾಗುತ್ತದೆ, ಆರ್ಥಿಕ ದಿವಾಳಿಯಾಗುತ್ತದೆ ಎಂದು ಪ್ರತಿಪಕ್ಷಗಳು ಸಾಕಷ್ಟು ಆರೋಪಗಳನ್ನು ಮಾಡಿದ್ದವು. ಆದರೆ, ಈಗ ಶಕ್ತಿ ಯೋಜನೆಯ ಯಶಸ್ಸು ಇದಕ್ಕೆ ತಕ್ಕ ಉತ್ತರವನ್ನು ಕೊಟ್ಟಿದೆ. ಆರ್ಥಿಕವಾಗಿ ಹೆಚ್ಚು ಸಹಕಾರಿ ಯೋಜನೆ ಇದಾಗಿದೆ ಎಂಬುದನ್ನು ತೋರಿಸಿದೆ. ಎಲ್ಲ ಆರೋಪಗಳನ್ನು ಮೀರಿ ಯಶಸ್ಸು ಕಂಡಿದೆ ಎಂದು ಅವರು ಹೇಳಿದ್ದಾರೆ.
ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಶಕ್ತಿ ಬಂದಿದೆ. ಹೆಣ್ಣು ಮಕ್ಕಳು ಪ್ರತಿ ದಿನ 50-60 ಲಕ್ಷ ಮಂದಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಈ ಮೂಲಕ ಮಹಿಳಾ ಶಕ್ತಿಯು ಕಾಂಗ್ರೆಸ್ ಸರಕಾರಕ್ಕೆ ಬಂದಿದೆ ಎಂದು ಶಿವಕುಮಾರ್ ತಿಳಿಸಿದ್ದಾರೆ.
ಈ ಯೋಜನೆಯಿಂದ ಬಸ್‍ಗಳು ಮಾತ್ರ ತುಂಬಿ ತುಳುಕುತ್ತಿಲ್ಲ. ಎಲ್ಲ ಧಾರ್ಮಿಕ ಕೇಂದ್ರಗಳು, ಪ್ರವಾಸಿ ಕೇಂದ್ರಗಳು ಸೇರಿದಂತೆ ಇನ್ನಿತರೆಡೆ ಜನಸಾಗರವೆ ಸೇರುತ್ತಿದೆ. ಇದರಿಂದ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗುವುದಲ್ಲದೆ, ಹಣದ ಹರಿವು ಹೆಚ್ಚಾಗಿದೆ. ಜತೆಗೆ ಸರಕಾರದ ಭಾಗವಾಗಿರುವ ಮುಜರಾಯಿ ದೇವಸ್ಥಾನಗಳ ಹುಂಡಿಗಳಲ್ಲಿ ಆದಾಯ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಅವರು ನಾವು ನುಡಿದಂತೆ ನಡೆದಿದ್ದೇವೆ. ಮುಂದೆಯೂ ನಡೆಯುತ್ತೇವೆ. ಇದು ನಮ್ಮ ಬದ್ಧತೆಯಾಗಿದೆ ಎಂದು ಶಿವಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.