×
Ad

ಬೆಂಗಳೂರು ಅಭಿವೃದ್ಧಿಗೆ 1.04 ಲಕ್ಷ ಕೋಟಿ ಮೊತ್ತದ ಯೋಜನೆ : ಡಿಸಿಎಂ ಡಿ.ಕೆ.ಶಿವಕುಮಾರ್

Update: 2025-10-19 18:05 IST

ಬೆಂಗಳೂರು, ಅ.19: ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಟನಲ್ ರಸ್ತೆ, ಎಲಿವೆಟೆಡ್ ಕಾರಿಡಾರ್, ಡಬಲ್ ಡೆಕ್ಕರ್, ಬಫರ್ ರಸ್ತೆ, ನಗರ ಸೌಂದರ್ಯ ಹೆಚ್ಚಿಸಲು ದೀಪಾಲಂಕಾರ, ಬೀದಿ ದೀಪಗಳಿಗೆ ಎಲ್‍ಇಡಿ ಬಲ್ಬ್ ಅಳವಡಿಕೆ ಸೇರಿದಂತೆ, ಮುಂದಿನ ನಾಲ್ಕೈದು ವರ್ಷಗಳಲ್ಲಿ 1.04 ಲಕ್ಷ ಕೋಟಿಯಷ್ಟು ಅಭಿವೃದ್ಧಿ ಯೋಜನೆ ರೂಪಿಸಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ರವಿವಾರ ಇಲ್ಲಿನ ಕೋರಮಂಗಲದ ವೀರ ಯೋಧ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ "ಬೆಂಗಳೂರು ನಡಿಗೆ" ಅಭಿಯಾನದ ಅಂಗವಾಗಿ ನಾಗರಿಕರೊಂದಿಗೆ ಸಂವಾದ ನಡೆಸಿ, ಅಹವಾಲು ಆಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಜನರ ಬಳಿಗೆ ಸರಕಾರವನ್ನು ಕರೆದೋಯ್ಯಬೇಕು ಎಂಬ ಕಾರಣಕ್ಕೆ ನಾವು ನಗರದಲ್ಲಿ ಐದು ಪಾಲಿಕೆ ರಚಿಸಿದ್ದೇವೆ. ನೀವು ಇಂದು ಕೊಟ್ಟಿರುವ ಅಹವಾಲು ಹಾಗೂ ಸಲಹೆಗಳನ್ನು ನಮ್ಮ ಅಧಿಕಾರಿಗಳು ದಾಖಲಿಸಿಕೊಂಡಿದ್ದು, ಅವರು ನಿಮ್ಮನ್ನು ಸಂಪರ್ಕಿಸಲಿದ್ದಾರೆ ಎಂದು ಅವರು ತಿಳಿಸಿದರು.

ಜನರ ಹೊಟ್ಟೆ ತುಂಬಿಸಬೇಕು. ಬೆಲೆ ಏರಿಕೆ ಸಮಸ್ಯೆಯಿಂದ ಜನರನ್ನು ರಕ್ಷಿಸಬೇಕು ಎಂದು ಐದು ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದೇವೆ. ಪ್ರತಿ ವರ್ಷ ಇದಕ್ಕೆ 52 ಸಾವಿರ ಕೋಟಿ ವೆಚ್ಚ ಮಾಡುತ್ತಿದ್ದೇವೆ. ಇದರ ಜೊತೆಗೆ ರೈತರಿಗೆ ಉಚಿತ ವಿದ್ಯುತ್ ನೀಡಲು ನಾವು ಪ್ರತಿ ವರ್ಷ 20 ಸಾವಿರ ಕೋಟಿ ನೀಡುತ್ತಿದ್ದೇವೆ. ಹೀಗೆ ಜನರ ಕಲ್ಯಾಣ ಕಾರ್ಯಕ್ರಮಗಳಿಗೆ 1 ಲಕ್ಷ ಕೋಟಿಯಷ್ಟು ಮೀಸಲಿಡುತ್ತಿದ್ದೇವೆ ಎಂದರು.

ನಿಮ್ಮ ಆಸ್ತಿ ದಾಖಲೆ ಸರಿ ಮಾಡಿಸಿಕೊಳ್ಳಲು ಸರಕಾರ ಉತ್ತಮ ಅವಕಾಶ ಕಲ್ಪಿಸಿದ್ದು, ಎಲ್ಲರೂ ಇ ಖಾತಾ ಮಾಡಿಸಿಕೊಳ್ಳಿ. ಜತೆಗೆ, ಸರಕಾರ ಬಿ ಖಾತೆಯಿಂದ ಎ ಖಾತಾಗೆ ಪರಿವರ್ತನೆ ಮಾಡಲು ಅವಕಾಶ ಕಲ್ಪಿಸಿದ್ದು, ಈ ಅವಕಾಶವನ್ನು ಯಾರೂ ಕಳೆದುಕೊಳ್ಳಬೇಡಿ. ಸಿಎ ನಿವೇಶನದ ಬಗ್ಗೆ ಸಾರ್ವಜನಿಕರು ಪ್ರಸ್ತಾಪ ಮಾಡಿದ್ದು, ಸರಕಾರ ಈ ವಿಚಾರದಲ್ಲಿ ಪ್ರತ್ಯೇಕ ನೀತಿ ರೂಪಿಸುತ್ತಿದೆ. ಈ ಹಿಂದೆ ಬಿಡಿಎ ನಿಭಾಯಿಸುತ್ತಿದ್ದ ಯೋಜನಾ ಪ್ರಾಧಿಕಾರದ ಜವಾಬ್ದಾರಿ ಜಿಬಿಎಗೆ ವರ್ಗಾವಣೆ ಮಾಡಿದ್ದೇನೆ ಎಂದು ಅವರು ಉಲ್ಲೇಖಿಸಿದರು.

ಈ ಸಂದರ್ಭದಲ್ಲಿ ಸಚಿವ ರಾಮಲಿಂಗಾರೆಡ್ಡಿ, ಜಿಬಿಎ ಮುಖ್ಯ ಆಯುಕ್ತ ಮಹದೇಶ್ವರ್ ರಾವ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News