×
Ad

ರಾಜ್ಯ ಸರಕಾರದಿಂದ 105 ಕೋಟಿ ರೂ. ಬರ ಪರಿಹಾರದ ಹಣ ಬಿಡುಗಡೆ

Update: 2024-01-05 20:28 IST

ಬೆಂಗಳೂರು: ರಾಜ್ಯದ ತೀವ್ರ ಸ್ವರೂಪದ ಪರಿಸ್ಥಿತಿ ಹಿನ್ನೆಲೆ ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ಧಾವಿಸಿರುವ ರಾಜ್ಯ ಸರಕಾರ, ರೈತರಿಗೆ 2 ಸಾವಿರ ರೂ.ಪರಿಹಾರ ನೀಡಲು ಎಸ್‍ಡಿಆರ್ ಎಫ್ ಅಡಿಯಲ್ಲಿ 105 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.

ಶುಕ್ರವಾರ ಕಂದಾಯ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಮುಕ್ತಾರ್ ಪಾಷ ಎಚ್.ಜಿ. ಆದೇಶ ಹೊರಡಿಸಿದ್ದು, ರಾಜ್ಯದಲ್ಲಿನ 236 ತಾಲೂಕುಗಳ ಪೈಕಿ 223 ತಾಲೂಕುಗಳನ್ನು ಮೂರು ಹಂತದಲ್ಲಿ ಬರ ಪೀಡಿತ ಎಂದು ಘೋಷಣೆ ಮಾಡಿದೆ.

ಮಳೆಯಾಶ್ರಿತ ಬೆಳೆ ಹಾನಿಗೆ ಪ್ರತಿ ಹೆಕ್ಟೇರ್ ಗೆ 8,500 ರೂ., ನೀರಾವರಿ ಬೆಳೆ ಹಾನಿಗೆ ಪ್ರತಿ ಹೆಕ್ಟೇರ್ ಗೆ 17,500ರೂ., ಬಹುವಾರ್ಷಿಕ ಬೆಳೆ ಹಾನಿಗೆ ಹೆಕ್ಟೇರ್ ಗೆ 22,500ರೂ. ಪರಿಹಾರ ನಿಗದಿಪಡಿಸಲಾಗಿದೆ. ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ 48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಉಂಟಾಗಿದ್ದು, 18,171 ಕೋಟಿ ರೂ.ಪರಿಹಾರ ರೂಪದಲ್ಲಿ ಆರ್ಥಿಕ ನೆರವು ನೀಡಲು ಕೇಂದ್ರ ಸರಕಾರಕ್ಕೆ ರಾಜ್ಯ ಸರಕಾರ ಮನವಿ ಸಲ್ಲಿಸಿತ್ತು.

ಕೇಂದ್ರದ ಅಧ್ಯಯನ ತಂಡ ಅ.4ರಿಂದ ಆರು ದಿನ ರಾಜ್ಯ ಪ್ರವಾಸ ಮಾಡಿ ಬರ ಸಮೀಕ್ಷೆ ನಡೆಸಿ, ವರದಿಯನ್ನು ಸಲ್ಲಿಸಿದೆ. ಈ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿ ಮೋದಿ ಅವರನ್ನು ಖುದ್ದು ಭೇಟಿ ಮಾಡಿ, ಕರ್ನಾಟಕಕ್ಕೆ ಬರ ಪರಿಹಾರ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಕೋರಿದ್ದರು.

ಆದರೆ, ಕೇಂದ್ರದಿಂದ ಯಾವುದೇ ಪರಿಹಾರ ಬಾರದ ಹಿನ್ನೆಲೆ ರಾಜ್ಯ ಸರಕಾರ ರೈತರಿಗೆ ಪ್ರಾಥಮಿಕ ಪರಿಹಾರ ಬಿಡುಗಡೆ ಮಾಡಿದೆ. ಶೇ.33ಕ್ಕಿಂತ ಹೆಚ್ಚು ಪ್ರಮಾಣದ ಬೆಳೆಹಾನಿಯಾಗಿರುವ ಮಳೆಯಾಶ್ರಿತ ಬೆಳೆಗಳಿಗೆ 1 ಸಾವಿರ ರೂ., ನೀರಾವರಿ ಬೆಳೆಗಳಿಗೆ 2‌ ಸಾವಿರ ರೂ. ಹಾಗೂ ಬಹುವಾರ್ಷಿಕ ಬೆಳೆಗಳಿಗೆ 2,500 ರೂ.ಗಳನ್ನು ಹಾಗೂ ಪ್ರತಿ ರೈತರಿಗೆ ಗರಿಷ್ಟ 2 ಹೆಕ್ಟೇರ್ ಗೆ ಸೀಮಿತಗೊಳಿಸಬೇಕು ಎಂದು ಸೂಚಿಸಲಾಗಿದೆ.

ಷರತ್ತು: ಬೆಳೆಹಾನಿ ಪರಿಹಾರವನ್ನು ‘ಭೂಮಿ’ ಸೆಲ್ ನಿರ್ವಹಿಸುತ್ತಿರುವ ಪರಿಹಾರ ತಂತ್ರಾಂಶದ ಮೂಲಕ ವಿತರಿಸತಕ್ಕದ್ದು. ಅತೀ ಕಡಿಮೆ ಭೂಮಿ ಹೊಂದಿರುವ ರೈತರಿಂದ ಪರಿಹಾರ ವಿತರಣೆ ಆರಂಭಿಸಬೇಕು. ಪರಿಹಾರಕ್ಕೆ ಆರ್ ಟಿಸಿ ಸಹಿತ ಅಗತ್ಯ ದಾಖಲೆ ಹೊಂದಿರಬೇಕು. ಡಿಬಿಟಿ ಮೂಲಕ ಮಾತ್ರವೇ ಪರಿಹಾರ ಮೊತ್ತ ಪಾವತಿಸತಕ್ಕದ್ದು ಎಂದು ಷರತ್ತು ವಿಧಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor


Similar News