14 ಮಂದಿ ಐಎಎಸ್ ಅಧಿಕಾರಿಗಳ ವರ್ಗಾವಣೆ
ಬೆಂಗಳೂರು : ರಾಜ್ಯ ಸರಕಾರವು 14 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಗುರುವಾರ ಆದೇಶ ಹೊರಡಿಸಿದೆ.
ಬಿಡಿಎ ಆಯುಕ್ತ ಮೇಜರ್ ಪಿ.ಮಣಿವಣ್ಣನ್ ಅವರಿಗೆ ನಗರ ಭೂ ಸಾರಿಗೆ ನಿರ್ದೇಶನಾಲಯದ ಆಯುಕ್ತರ ಹುದ್ದೆಯ ಹೆಚ್ಚುವರಿ ಹೊಣೆಗಾರಿಕೆ ವಹಿಸಲಾಗಿದೆ. ಹೊಸದಿಲ್ಲಿಯ ಕರ್ನಾಟಕ ಭವನದ ಪ್ರಾದೇಶಿಕ ಆಯುಕ್ತ ಇಮ್ಕೋಂಗ್ಲಾ ಜಮೀರ್ ಅವರನ್ನು ಕರ್ನಾಟಕ ಭವನದ ಕಾರ್ಯದರ್ಶಿ(ಸಂಯೋಜನೆ)ಯಾಗಿ ವರ್ಗಾವಣೆ ಮಾಡಲಾಗಿದೆ.
ಸ್ಥಳ ನಿಯುಕ್ತಿಯ ನಿರೀಕ್ಷೆಯಲ್ಲಿದ್ದ ಡಾ.ಪ್ರಸಾದ್ ಎನ್.ವಿ. ಅವರನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯಾಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿ ಸಮೀರ್ ಶುಕ್ಲಾ ಅವರನ್ನು ಕರ್ನಾಟಕ ಭವನದ ಪ್ರಾದೇಶಿಕ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ತುಳಸಿ ಮದ್ದಿನೇನಿಯನ್ನು ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯಾಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿ(ಪಂಚಾಯತ್ ರಾಜ್) ರಣದೀಪ್ ಡಿ. ಅವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ.
ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ್ ಕೆ.ಬಿ. ಅವರನ್ನು ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕರಾಗಿ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ.ರಾಮ್ ಪ್ರಸಾತ್ ಮನೋಹರ್ ವಿ. ಅವರನ್ನು ಪ್ರವಾಸೋದ್ಯಮ ಇಲಾಖೆಯ ಆಯುಕ್ತರಾಗಿ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಇಲಾಖೆಯ ನಿರ್ದೇಶಕ ಡಾ.ಸತೀಶ ಬಿ.ಸಿ. ಅವರನ್ನು ಕೃಷಿ ಇಲಾಖೆಯ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ.
ಸ್ಥಳ ನಿಯುಕ್ತಿಯ ನಿರೀಕ್ಷೆಯಲ್ಲಿದ್ದ ಅಕ್ರಮ್ ಪಾಷ ಅವರನ್ನು ರಾಷ್ಟ್ರೀಯ ಆರೋಗ್ಯ ಮಿಷನ್ ಮತ್ತು ಆರೋಗ್ಯ ಆಯುಕ್ತಾಲಯದ ಯೋಜನಾ ನಿರ್ದೇಶಕರನ್ನಾಗಿ, ಖಜಾನೆ ಇಲಾಖೆಯ ಆಯುಕ್ತ ರಘುನಂದನ್ ಮೂರ್ತಿ ಅವರನ್ನು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ವರ್ಗಾವಣೆ ಮಾಡಲಾಗಿದೆ. ಅಲ್ಲದೆ, ಖಜಾನೆ ಇಲಾಖೆಯ ಆಯುಕ್ತರ ಹುದ್ದೆಯ ಹೆಚ್ಚುವರಿ ಹೊಣೆಗಾರಿಕೆ ವಹಿಸಲಾಗಿದೆ.
ಸ್ಥಳ ನಿಯುಕ್ತಿಯ ನಿರೀಕ್ಷೆಯಲ್ಲಿದ್ದ ನಿತೀಶ್ ಕೆ. ಅವರನ್ನು ಪೌರಾಡಳಿತ ಇಲಾಖೆಯ ನಿರ್ದೇಶಕರಾಗಿ, ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಜ್ಞಾನೇಂದ್ರ ಕುಮಾರ್ ಗಂಗವಾರ್ ಅವರನ್ನು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಇಲಾಖೆಯ ನಿರ್ದೇಶಕರನ್ನಾಗಿ ವರ್ಗಾವಣೆ ಮಾಡಲಾಗಿದೆ.
ಬಾಗಲಕೋಟೆಯ ಕೃಷ್ಣಾ ಮೇಲ್ದಂಡೆ ಯೋಜನೆಯ ಆರ್ ಅಂಡ್ ಆರ್ ಹಾಗೂ ಭೂ ಸ್ವಾಧೀನ ವಿಭಾಗದ ಪ್ರಧಾನ ವ್ಯವಸ್ಥಾಪಕ ಗಜಾನನ್ ಬಾಳೆ ಅವರನ್ನು ಬಾಗಲಕೋಟೆ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ. ಅಲ್ಲದೇ, ಕೃಷ್ಣಾ ಮೇಲ್ದಂಡೆ ಯೋಜನೆಯ ಆರ್ ಅಂಡ್ ಆರ್ ಹಾಗೂ ಭೂ ಸ್ವಾಧೀನ ವಿಭಾಗದ ಪ್ರಧಾನ ವ್ಯವಸ್ಥಾಪಕ ಹುದ್ದೆಯ ಹೆಚ್ಚುವರಿ ಹೊಣೆಗಾರಿಕೆ ವಹಿಸಲಾಗಿದೆ.